ಸೌಂಡ್ ಜೋರಾಗಿದೆ!

ಪ್ರಯಾಣಿಸುವಾಗ, ಸುಮ್ಮನೆ ಒಬ್ಬರೇ ಕುಳಿತಿರುವಾಗ, ತುಂಬಾ ಬೇಜಾರಾದಾಗ... ಕೊನೆಗೇ ಓದುವಾಗ ಕೂಡ! ಈಗ ಸ್ನಾನ ಮಾಡುವಾಗ ಕೂಡ!!
ಹೀಗೆ ಹಾಡು- ಸಂಗೀತ ಎಲ್ಲೆಂದರಲ್ಲಿ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಕೆಲವೊಮ್ಮೆ ನಮಗೇ ಅರಿವಿಲ್ಲದೇ.
ಕೆಲಸ ಮಾಡುವಾಗ, ನಡೆದುಕೊಂಡು ಹೋಗುವಾಗ, ಬಸ್ಸಿನಲ್ಲಿ ಕುಳಿತಿದ್ದಾಗ ಯಾವಾಗ ನೋಡಿದರೂ ಕೆಲವರು ಇಯರ್‌ಫೋನ್ ಹಾಕಿಕೊಂಡು ಹಾಡು ಕೇಳುವುದನ್ನು ನೋಡಿರಬಹುದು. ಅಂಥ ಸಂಗೀತ ಪ್ರಿಯರಿಗಾಗಿ ಈಗ ಸ್ಪೀಕರ್ ಇರುವ ಶೋವರ್‌ಗಳು ಬಂದಿವೆ. ಇವು ವಾಟರ್‌ಪ್ರೂಫ್ ಸ್ಪೀಕರ್‌ಗಳನ್ನು ಹೊಂದಿದ್ದು, ಸ್ನಾನ ಮಾಡುವಾಗಲೂ ಹಾಡು ಕೇಳಬಹುದು. ಪರಿಣಾಮ ಕೇವಲ ಬಾತ್‌ರೂಂ ಸಿಂಗರ್‌ಗಳಷ್ಟೇ ಅಲ್ಲ ಇನ್ನು ಮುಂದೆ ಬಾತ್‌ರೂಂ ಲಿಸನರ್ಸ್‌ಗೂ (ಕೇಳುಗರು) ಅವಕಾಶವಿದೆ.
ಸ್ಪೀಕರ್ ಇರುವ, ಯುಎಸ್‌ಬಿ ಮೂಲಕ ಹಾಡುಗಳನ್ನು ಪ್ಲೇ ಮಾಡಬಹುದಾದ ವಾಟರ್ ಹೀಟರ್ ಕೂಡ ಬಂದುಬಿಟ್ಟಿದೆ!
ಇಷ್ಟಿದ್ದರೂ ನಮ್ಮ ಸಂಗೀತದ ಬಯಕೆ ಇಂಗುವುದಿಲ್ಲ. ಬಯಸಿದಲ್ಲಿ ಸಂಗೀತ ಕೇಳುವ ಜನರ ಆಸೆಗೆಂದೇ ಪೋರ್ಟೆಬಲ್ (ಚಿಕ್ಕ) ಮತ್ತು ಎಲ್ಲೆಂದರಲ್ಲಿ ತೆಗೆದುಕೊಂಡು ಹೋಗಬಹುದಾದ ಮತ್ತು ಉತ್ತಮ ಗುಣಮಟ್ಟದ ಸಂಗೀತ ಒದಗಿಸಬಲ್ಲಂಥ ಸ್ಪೀಕರ್‌ಗಳು ಮಾರುಕಟ್ಟೆಗೆ ಬಂದಿವೆ. ಇದಕ್ಕೆ ಕಾರಣ ಮೊಬೈಲ್.
ಈಗ ಎಲ್ಲರ ಬಳಿಯೂ ಮೊಬೈಲ್‌ಗಳಿವೆ. ಆದರೆ ಮೊಬೈಲ್‌ನಲ್ಲಿ ಇರುವ ಸ್ಪೀಕರ್‌ಗಳು ಅಷ್ಟೇನೂ ಇಂಪಾಗಿ ಹಾಡು ಕೇಳುವ ಅವಕಾಶ ನೀಡುವುದಿಲ್ಲ. ಇಯರ್‌ಫೋನ್ ಮೂಲಕ ಮಾತ್ರ ಕೇಳಬಹುದು. ಆದರೆ ಮೊಬೈಲ್ ಚಾರ್ಜ್ ಮಾಡಲು ಹಾಕಿದಾಗ, ಅಡುಗೆ ಮಾಡುತ್ತಿರುವಾಗ, ಬಟ್ಟೆ ತೊಳೆಯುವಾಗ, ಬಟ್ಟೆ ಧರಿಸುವಾಗ, ಮೇಕಪ್ ಮಾಡಿಕೊಳ್ಳುವಾಗ ಇಯರ್‌ಫೋನ್ ಮೂಲಕ ಹಾಡು ಕೇಳಲು ಸಾಧ್ಯವಾಗುವುದಿಲ್ಲ.
ಅಂಥ ಸಂದರ್ಭಗಳಲ್ಲಿ ಕೊರತೆ ಕಾಡುವುದು ನಿಜ. ಈ ಕೊರತೆ ನೀಗಲೆಂದೇ ಪೋರ್ಟೆಬಲ್ ಸ್ಪೀಕರ್ ಮತ್ತು ಮ್ಯೂಸಿಕ್ ಸಿಸ್ಟಮ್‌ಗಳು ಬಂದಿವೆ.
ಸ್ಪೀಕರ್‌ಗಳು
ಮೊಬೈಲ್‌ನಲ್ಲಿರುವ ಹಾಡುಗಳನ್ನು ಎಲ್ಲಿಬೇಕೆಂದರಲ್ಲಿ ಸುಸ್ಪಷ್ಟವಾಗಿ ಮತ್ತು ಇಂಪಾಗಿ ಕೇಳಲು ಬ್ಲ್ಯೂಟೂತ್ ಮತ್ತು ವೈಫೈ ಸ್ಪೀಕರ್‌ಗಳ ದೊಡ್ಡ ದಂಡೇ ಮಾರುಕಟ್ಟೆಯಲ್ಲಿದೆ. ಇವು ಬ್ಯಾಟರಿ ಹೊಂದಿದ್ದು, ಗರಿಷ್ಠ 20 ತಾಸುಗಳವರೆಗೆ ಸಂಗೀತ ಪ್ರಸಾರ ಮಾಡುವ ಶಕ್ತಿ ಹೊಂದಿವೆ. ಜೆಬಿಎಲ್, ಕ್ರಿಯೇಟಿವ್, ಸೋನಿ ಮುಂತಾದ ಕಂಪನಿಗಳು ಇಂಥ ಸ್ಪೀಕರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ರು. 1000ದಿಂದ ರು. 7-8 ಸಾವಿರದವರೆಗಿನ ಸ್ಪೀಕರ್‌ಗಳು ಲಭ್ಯವಿದೆ. ಇನ್ನು ಬೋಸ್ ಸೇರಿದಂತೆ ಪ್ರಖ್ಯಾತ ಕಂಪನಿಗಳ ಅತ್ಯುನ್ನತ ಗುಣಮಟ್ಟದ ಸ್ಪೀಕರ್‌ಗಳು ರು. 10,000- 25,000 ದರಗಳ ನಡುವೆ ಲಭ್ಯವಿದೆ.
ಇದಕ್ಕೂ ಒಂದು ಹೆಜ್ಜೆ ಮುಂದೆಹೋಗಿ ಪೋರ್ಟೆಬಲ್ ಮ್ಯೂಸಿಕ್ ಸಿಸ್ಟಮ್‌ಗಳೂ ಬಂದಿವೆ. ಇವು ಮೊಬೈಲ್‌ನಲ್ಲಿರುವ ಹಾಡುಗಳನ್ನು ಬ್ಲ್ಯೂಟೂತ್ ಮೂಲಕ ಪ್ರಸಾರ ಮಾಡಬಲ್ಲದು. ಇದರ ಜತೆಗೆ ಪೆನ್‌ಡ್ರೈವ್, ಎಸ್‌ಡಿ ಕಾರ್ಡ್ ಮೂಲಕವೂ ಹಾಡುಗಳನ್ನು ಪ್ಲೇ ಮಾಡುವ ಸಾಮರ್ಥ್ಯ ಹೊಂದಿವೆ. ಜತೆಗೆ ಎಫ್‌ಎಂ ಕೂಡ ಇವುಗಳಲ್ಲಿದೆ.
ಇವುಗಳ ಇನ್ನೊಂದು ವಿಶೇಷವೆಂದರೆ ಕೆಲವು ಇನ್‌ಬಿಲ್ಟ್ ಬ್ಯಾಟರಿ ಹೊಂದಿದ್ದರೆ, ಇನ್ನು ಬ್ಯಾಟರಿ ಅಥವಾ ಸೆಲ್‌ಗಳ ಮೂಲಕ ಆಪರೇಟ್ ಮಾಡುವ ಅವಕಾಶವನ್ನೂ ಹೊಂದಿವೆ. ಇವು ಹಗುರವಾಗಿದ್ದು, ಬೋಕಾದಲ್ಲಿಗೆ ಒಯ್ಯಲೂ ಅನುಕೂಲವಾಗಿವೆ. ಮೊಬೈಲ್ ಅಲ್ಲದೇ ಇತರೆ ಸಾಧನಗಳ ಮೂಲಕವೂ ಹಾಡುಗಳನ್ನು ಪ್ರಸಾರ ಮಾಡಬಲ್ಲದು.
ಇವುಗಳು ಸಣ್ಣ ಮತ್ತು ಬ್ಲ್ಯೂಟೂತ್ ಸ್ಪೀಕರ್‌ಗಳಿಗಿಂತ ಕೊಂಚ ಉತ್ತಮ ಗಣಮಟ್ಟದಲ್ಲಿ ಸಂಗೀತ ಪ್ರಸಾರ ಮಾಡಬಲ್ಲವು. ಜತೆಗೆ ಬೇಕಾದ ಕಡೆಗಳಲ್ಲಿ ಒಯ್ಯಲು ಅನುಕೂಲವಾಗುವಷ್ಟು ಹಗುರವಾಗಿರುತ್ತವೆ. ಇವುಗಳನ್ನು ಎಲ್ಲಿ ಬೇಕೋ ಅಲ್ಲಿ ಇಟ್ಟಿಕೊಂಡು ಹಾಡು ಕೇಳಬಹುದು. ಪ್ರವಾಸಗಳಿಗೆ ಹೋದಾಗ, ಸಣ್ಣ-ಪುಟ್ಟ ಪಾರ್ಟಿಗಳಲ್ಲಿ ನ್ಯತ್ಯಕ್ಕೆ ಇವುಗಳನ್ನು ಬಳಸಬಹುದು. ಕಾಸಿಗೆ ತಕ್ಕ ಕಜ್ಜಾಯ ಎಂಬಂತೆ ನೀವು ಎಷ್ಟು ಹೆಚ್ಚು ಹಣ ಕೊಡುತ್ತೀರೋ ಅಷ್ಟು ಹೆಚ್ಚು ಉತ್ತಮ ಗುಣಮಟ್ಟದ ಸಂಗೀತ ನಿಮ್ಮ ಸಂಗಾತಿಯಾಗಬಲ್ಲದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


