ಆವಿಷಕಾರ!
ಸಂಶೋಧನೆಗಳಿಂದಲೇ ಸಾವಿಗೀಡಾದ ಕೆಲವು ಸಂಶೋಧಕರ ಕುತೂಹಲಕರ ವಿವರ ಇಲ್ಲಿದೆ.

ಸಂಶೋಧನೆಯ ಮೃತ್ಯುಬಾಯಿಗೆ ವಿಜ್ಞಾನಿಗಳು
ಸಂಶೋಧಕರ ಬದುಕು ಹೂವಿನ ಹಾಸಿಗೆಯಲ್ಲ. ಅವರ ಸಿದ್ಧಾಂತಗಳು ಸಾರ್ಥಕತೆಯ ಹಾದಿ ಹಿಡಿಯಬೇಕಾದರೆ ಹಲವು ವರುಷಗಳೇ ತಗುಲಬಹುದು. ಸಂಶೋಧನೆಯ ಫಲ ಸಿಕ್ಕ ವೇಳೆ ಅವರಿಗಾಗುವ ಖುಷಿ ಅಪಾರ. ಆದರೆ, ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ. ಎಷ್ಟೋ ಬಾರಿ ಸಂಶೋಧನೆಗಳೇ ಅಪಾಯ ತಂದೊಡ್ಡಿದ ಉದಾಹರಣೆಗಳೂ ಇವೆ. ಜಗತ್ತಿಗೆ ತಾವು ನೀಡಿದ ಕೊಡುಗೆಗಳೇ ತಮ್ಮ ಜೀವಕ್ಕೆ ಮುಳ್ಳಾದದ್ದೂ ಇವೆ. ಹೌದು. ತಮ್ಮದೇ ಸಂಶೋಧನೆಗಳಿಂದಲೇ ಸಾವಿಗೀಡಾದ ಕೆಲವು ಸಂಶೋಧಕರ ವಿಷಾದನೀಯ ಹಾಗೂ ಕುತೂಹಲಕರ ವಿವರ ಇಲ್ಲಿದೆ...
ಹೆನ್ರಿ ಸ್ಮೋಲಿನ್‌ಸ್ಕಿ
ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಹೆನ್ರಿ ಸ್ಮೋಲಿನ್‌ಸ್ಕಿ ಹಾರುವ ಕಾರಿನ ಉತ್ಪಾದನೆಯತ್ತ ಆಕರ್ಷಿತರಾದವರು. ಅದರಂತೆ, ಕಾರು ಉತ್ಪಾದಕ ಕಂಪನಿ ಅಡಾನ್ಸ್‌ಡ್ ವೆಹಿಕಲ್ ಎಂಜಿನಿಯರ್ಸ್‌ಗೆ ಸೇರಿಕೊಂಡರು. 1973ರಲ್ಲಿ ಎರಡು ಮಾದರಿ ಹಾರುವ ಕಾರುಗಳನ್ನು ತಯಾರಿಸಲಾಯಿತು. ಮುಂದಿನ ವರ್ಷವೇ ಹೆನ್ರಿ, ರಿಟೇಲ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಈ ಕಾರುಗಳ ತಯಾರಿಕೆಯಲ್ಲಿ ತೊಡಗಬೇಕಿತ್ತು. ಆದರೆ, 1973ರ ಸೆ.11ರಂದು ನಡೆದಿದ್ದೇ ಬೇರೆ. ಪೈಲಟ್ ಹೆರಾಲ್ಡ್ ಬ್ಲೇಕ್ ಎಂಬುವರೊಂದಿಗೆ ತಾವೇ ತಯಾರಿಸಿದ ಹಾರುವ ಕಾರಿನ ಪ್ರಾಯೋಗಿಕ ಪರೀಕ್ಷೆಗೆ ತೆರಳಿದ ಹೆನ್ರಿ ಮರಳಿ ಬರಲೇ ಇಲ್ಲ. ಕಾರಿನ ರೆಕ್ಕೆಯು ಸಡಿಲವಾಗಿ ಬಿದ್ದ ಪರಿಣಾಮ ದುರಂತ ಸಂಭವಿಸಿತ್ತು. ವೆಲ್ಡಿಂಗ್‌ನಲ್ಲಾದ ದೋಷವೇ ದುರಂತಕ್ಕೆ ಕಾರಣ ಎಂಬ ವರದಿಯೂ ಬಂತು. ಆದರೆ, ಹೆನ್ರಿ ಮಾತ್ರ ತಮ್ಮ ಹಾರುವ ಕಾರಿನ ಜತೆಗೇ ದುರಂತಕ್ಕೆ ಬಲಿಯಾದರು.
ಫ್ರಾನ್ಝ್ ರೆಚೆಲ್ಟ್
ಆಸ್ಟ್ರೇಲಿಯಾ ಮೂಲದ ಫ್ರಾನ್ಝ್ ರೆಚೆಲ್ಟ್ ಅವರು ವೃತ್ತಿಯಲ್ಲಿ ಟೈಲರ್. ಆದರೆ, ಫ್ರೀ ಟೈಮಲ್ಲಿ ಅವರು ಏರೋಪ್ಲೇನ್ ಪೈಲಟ್‌ಗಳು ಧರಿಸುವ ಪ್ಯಾರಚೂಟ್ ಸೂಟ್ ವಿನ್ಯಾಸಗೊಳಿಸುವ ಕಾರ್ಯದಲ್ಲಿ ಅತೀವ ಆಸಕ್ತಿಯಿಂದ ತೊಡಗುತ್ತಿದ್ದರು. ತಾನು ವಿನ್ಯಾಸಗೊಳಿಸಿದ ಪ್ಯಾರಚೂಟ್‌ನ ಡಮ್ಮಿ ಮೂಲಕ ಪ್ರಯೋಗವನ್ನೂ ನಡೆಸಿದರು. ಅದು ಯಶಸ್ವಿಯೂ ಆಯಿತು. ನಂತರ ನೇರವಾಗಿ ಸೂಟ್‌ನ ಪರೀಕ್ಷೆ ನಡೆಸಬೇಕೆಂದು ನಿರ್ಧರಿಸಿದರು ರೆಚೆಲ್ಟ್. ಅದಕ್ಕಾಗಿ ಪ್ಯಾರಚೂಟ್ ಹಿಡಿದುಕೊಂಡು ಐಫೆಲ್ ಟವರ್‌ನ ಕೆಳಗಿನ ಮಟ್ಟದಿಂದಲೇ ಹಾರಿದರು. ಆದರೆ, ದುರದೃಷ್ಟವಶಾತ್ ಪ್ಯಾರಚೂಟ್ ಕೈಕೊಟ್ಟಿತು. 187 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ರೆಚೆಲ್ಟ್ ಸ್ಥಳದಲ್ಲೇ ಸಾವನ್ನಪ್ಪಿದರು.
ಹೊರೇಸ್ ಲಾಸನ್ ಹನ್ಲೆ
ವಕೀಲರಾದ ಹೊರೇಸ್ ಹನ್ಲೆ ಅವರಿಗೆ ಮೊದಲಿನಿಂದಲೂ ಸಬ್‌ಮರೀನ್ ವಿನ್ಯಾಸದಲ್ಲಿ ಆಸಕ್ತಿ. ಅಮೆರಿಕದ ಸಿವಿಲ್ ವಾರ್ ಸಂದರ್ಭದಲ್ಲಿ 3 ವಿವಿಧ ಮಾದರಿಯ ಸಬ್‌ಮರೀನ್‌ಗಳ ವಿನ್ಯಾಸದಲ್ಲಿ ಹನ್ಲೆ ನೆರವಾದರು. ಆದರೆ, ಮೊದಲ ಎರಡು ಸಬ್‌ಮರೀನ್‌ಗಳೂ ಸಮುದ್ರದಲ್ಲಿ ಮುಳುಗಿದವು. 1863ರ ಅ.15ರಂದು 7 ಮಂದಿ ಸಿಬ್ಬಂದಿ ಜತೆಗೆ ಹನ್ಲೆ ತಮ್ಮದೇ ಹೆಸರಿನ ಸಬ್‌ಮರೀನ್‌ನಲ್ಲಿ ನೀರಿನ ಪಯಣ ಆರಂಭಿಸಿದರು. ಆದರೆ, ಈ ಸಬ್‌ಮರೀನ್ ಕೂಡ ಮುಳುಗಿತು. ಅದರೊಳಗಿದ್ದ ಎಲ್ಲರೂ ಜಲಸಮಾಧಿಯಾದರು. ನಂತರ ಅದನ್ನು ಪತ್ತೆಹಚ್ಚಿ ವಾಪಸ್ ತರಲಾಯಿತು. ನಂತರ ನಡೆಸಿದ ಪ್ರಯಾಣ ಯಶಸ್ವಿಯಾಯಿತು. ಹನ್ಲೆ ಮಾತ್ರ ತಮ್ಮ ಮೊದಲ ಮತ್ತು ಕೊನೇ ಯಶಸ್ವಿ ಮಿಷನ್‌ನೊಂದಿಗೇ ಕಣ್ಮರೆಯಾದರು.
ಥಾಮಸ್ ಮಿಡ್‌ಗ್ಲೇ ಜೂನಿಯರ್
ಕೆಮಿಸ್ಟ್ ಆಗಿದ್ದ ಥಾಮಸ್, ಸೀಸಯುಕ್ತ ಗ್ಯಾಸೊಲಿನ್ ಹಾಗೂ ಹಸಿರುಮನೆ ಅನಿಲದ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಒಂದು ಬಾರಿ ಸುದ್ದಿಗೋಷ್ಠಿಯಲ್ಲಿ ಕೈಗಳ ಮೇಲೆ ಸೀಸಯುಕ್ತ ಗ್ಯಾಸೋಲಿನ್ ಅನ್ನು ಸುರಿದುಕೊಂಡು, 60 ಸೆಕೆಂಡು ಆಘ್ರಾಣಿಸಿದ್ದರು. ಈ ಮೂಲಕ ಆ ಇಂಧನ ಸುರಕ್ಷಿತವಾದದ್ದು ಎಂಬುದನ್ನು ದೃಢಪಡಿಸಿದ್ದರು. ಅವರು ಅದೇ ಗ್ಯಾಸೋಲಿನ್‌ನಿಂದ ಸಾವಿಗೀಡಾದರು ಎಂದೇ ಎಲ್ಲರೂ ನಂಬಿದ್ದರು. ಆದರೆ, ಅವರು ಮೃತಪಟ್ಟಿದ್ದು ಮತ್ತೊಂದು ಅನ್ವೇಷಣೆಯಿಂದ. ಅವರು ಪೋಲಿಯೋದಿಂದ ಬಳಲುತ್ತಿದ್ದಾಗ ದೇಹಕ್ಕೆ ಆಧಾರ ನೀಡಲೆಂದು ರೋಪ್ ಆ್ಯಂಡ್ ಪುಲ್ಲೀ ವ್ಯವಸ್ಥೆಯನ್ನು ನಿರ್ಮಿಸಿದ್ದರು. ಅದೇ ಹಗ್ಗವು ಅವರ ದೇಹಕ್ಕೆ ಸುತ್ತಿದ್ದರಿಂದ 1944, ನ.2ರಂದು ಅವರು ಪ್ರಾಣಕಳೆದುಕೊಳ್ಳಬೇಕಾಯಿತು.
ಮೇರಿ ಕ್ಯೂರಿ
ಭೌತವಿಜ್ಞಾನಿ ಹಾಗೂ ರಾಸಾಯನಶಾಸ್ತ್ರಜ್ಞೆಯಾಗಿದ್ದ ಮೇರಿ ಕ್ಯೂರಿ ರೇಡಿಯೋ ಆ್ಯಕ್ಟಿವಿಟಿಗಾಗಿಯೇ ಹೆಸರು ಪಡೆದವರು. ಅವರು ಪೊಲೀನಿಯಂ ಮತ್ತು ರೇಡಿಯಂ ಎಂಬ ಧಾತುಗಳನ್ನೂ ಆವಿಷ್ಕರಿಸಿದ್ದರು. ಎರಡು ನೊಬೆಲ್ ಗೆದ್ದ ಪ್ರಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಮೇರಿ ಕ್ಯೂರಿ ಅವರಿಗೇ ಸಂದಿದೆ. ರೇಡಿಯೋ ಆ್ಯಕ್ಟಿವಿಟಿ ಸಿದ್ಧಾಂತವನ್ನು ಮುಂದಿಟ್ಟ ಕ್ಯೂರಿ, ಅದರಿಂದ ದೇಹದ ಮೇಲಾಗುವ ದುಷ್ಪರಿಣಾಮಗಳನ್ನೂ ಬಹಿರಂಗಪಡಿಸಿದರು. ದುರದೃಷ್ಟವೆಂದರೆ, ಅದೇ ರೇಡಿಯೋ ಆ್ಯಕ್ಟಿವಿಟಿಯಿಂದಾಗಿ ಅಪ್ಲಾಸ್ಟಿಕ್ ಅನೀಮಿಯಾ ಎಂಬ ವ್ಯಾಧಿ ತಗುಲಿ 1934ರ ಜು.4ರಂದು ಮೇರಿ ಕ್ಯೂರಿ ಬಾರದ ಲೋಕಕ್ಕೆ ತೆರಳಿದರು.
ಅಥೆನ್ಸ್‌ನ ಪೆರಿಲ್ಲೋಸ್
ಪೆರಿಲ್ಲೋಸ್ ಅವರ ಸಾವು ನಿಜಕ್ಕೂ ವಿಪರ್ಯಾಸ ಎನ್ನಲೇಬೇಕು. ಕಂಚು ಕಾರ್ಮಿಕನಾಗಿದ್ದ ಪೆರಿಲ್ಲೋಸ್ ಬ್ರೇಜನ್ ಬುಲ್ ಎಂಬ ಸಾಧನವನ್ನು ನಿರ್ಮಿಸಿದರು. ಕೈದಿಗಳಿಗೆ ಶಿಕ್ಷೆ ನೀಡಲೆಂದು ಪೆರಿಲ್ಲೋಸ್ ಮಾಡಿದ ತಂತ್ರ ಇದಾಗಿತ್ತು. ದೊಡ್ಡ ಕಂಚಿನ ಗೂಳಿ. ಅದರೊಳಗೆ ಟೊಳ್ಳು. ಕೈದಿಯನ್ನು ಗೂಳಿಯೊಳಗೆ ಇರಿಸಿ ಲಾಕ್ ಮಾಡುವುದು. ನಂತರ ಅಡಿಭಾಗಕ್ಕೆ ಬೆಂಕಿ ಕೊಡುವುದು. ಅದರ ಬಿಸಿ ತಾಗುತ್ತಿದ್ದಂತೆ ಒಳಗಿರುವಾತ ಅರಚಲು ಶುರುಮಾಡುತ್ತಾನೆ. ಅರಚುವ ಧ್ವನಿಯು ಗೂಳಿಯ ಮೂಗಿನ ಮೂಲಕ ಹೊರಬಂದು ಗೂಳಿ ಅರಚುವಂತೆಯೇ ಕೇಳುತ್ತದೆ. ಬಿಸಿಯೇರುತ್ತಿದ್ದಂತೆಯೇ ವ್ಯಕ್ತಿ ಸಾಯುತ್ತಾನೆ. ಇಂಥದ್ದೊಂದು ಖತರ್‌ನಾಕ್ ವಸ್ತುವನ್ನು ಪೆರಿಲ್ಲೋಸ್ ನಿರ್ಮಿಸಿದ್ದರು. ನಂತರ ಆಗಿನ ನಿರಂಕುಶ ಪ್ರಭುವಾಗಿದ್ದ ಫಲಾರಿಸ್‌ಗೆ ತನ್ನ ಹೊಸ ಆವಿಷ್ಕಾರವನ್ನು ತೋರಿಸಿದರು. ತಕ್ಷಣವೇ ಹಿಂದು ಮುಂದು ಯೋಚಿಸದ ಫಲಾರಿಸ್ ಗೂಳಿ ತಯಾರಿಸಿದ ಪೆರಿಲ್ಲೋಸ್‌ರನ್ನೇ ಗೂಳಿಯೊಳಗೆ ಹಾಕಿ, ಕೆಳಗೆ ಬೆಂಕಿ ಕೊಟ್ಟ. ಹೀಗಾಗಿ ತಾವು ತಯಾರಿಸಿದ ವಸ್ತುವಿಂದಲೇ ಪೆರಿಲ್ಲೋಸ್ ಮೃತಪಟ್ಟರು. ಆದರೆ, ಕೆಲವರು ಪೆರಿಲ್ಲೋಸ್ ಸಾಯುವ ಮುನ್ನ ಅವರನ್ನು ಹೊರತೆಗೆಯಲಾಗಿತ್ತು ಎಂದೂ ಹೇಳುತ್ತಾರೆ. ಯಾವುದು ಸತ್ಯ ಎಂಬುದು ಈವರೆಗೂ ಗೊತ್ತಾಗಿಲ್ಲ.
ವಲೇರಿಯನ್ ಅಬಾಕೊವಿಸ್ಕಿ
ರಷ್ಯಾದ ಸಂಶೋಧಕರಾದ ವಲೇರಿಯನ್, ತಮ್ಮದೇ ಕನಸಿನ ಕೂಸಿಗೆ ಬಲಿಯಾದವರು. ತಾವು ನಿರ್ಮಿಸಿದ ಹೈಸ್ಪೀಡ್ ಏರೋವ್ಯಾಗನ್ ರೈಲು ಎಂಜಿನ್ ಟೆಸ್ಟ್ ರನ್ ವೇಳೆ ಹಳಿ ತಪ್ಪಿದ್ದರಿಂದ ಅದರೊಳಗಿದ್ದ ವಲೇರಿಯನ್ ಕೂಡ ಸಾವಿಗೀಡಾದರು. ಪ್ರಾಯೋಗಿಕ ಪರೀಕ್ಷೆ ನಡೆಸಿದಾಗ ರೈಲು ಸರಿಯಾಗಿಯೇ ಸಂಚರಿಸಿ ಗುರಿ ಮುಟ್ಟಿತ್ತು. ಆದರೆ, ವಾಪಸ್ ಬರುವಾಗ ಹಳಿ ತಪ್ಪಿ ವಲೇರಿಯನ್ ಅವರ ಭವಿಷ್ಯದ ಹಳಿಯನ್ನೂ ತಪ್ಪಿಸಿತು. ಅವರಿಗೆ ಆಗ ಕೇವಲ 26 ವರ್ಷ.
- ದಿಯಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


