ಕಿಲ್ಲರ್ ಕಪ್ಪೆ
ವಟಗುಟ್ಟುತ್ತಾ, ಜಿಗಿಯುತ್ತಾ ಬರುವ ಕಪ್ಪೆಗಳು ಯಾರಿಗೇನೂ ಹಾನಿ ಮಾಡಬಲ್ಲವು? ಅದೊಂದು ಸಾಧು ಪ್ರಾಣಿ.

ವಟಗುಟ್ಟುತ್ತಾ, ಜಿಗಿಯುತ್ತಾ ಬರುವ ಕಪ್ಪೆಗಳು ಯಾರಿಗೇನೂ ಹಾನಿ ಮಾಡಬಲ್ಲವು? ಅದೊಂದು ಸಾಧು ಪ್ರಾಣಿ. ಮನೆಯೊಳಗೆ ಬಂದರೂ ಒಮ್ಮೆ ಬೆದರಿಸಿದರೆ ಸಾಕು, ತಕ್ಷಣ ಕಾಲುಗಳನ್ನು ಚಾಚುತ್ತಾ, ನೆಗೆಯುತ್ತಾ ಅಲ್ಲಿಂದ ಕಣ್ಮರೆಯಾಗುತ್ತವೆ. ಇಂಥ ಕಪ್ಪೆ ಮನುಷ್ಯರ ಜೀವ ತೆಗೆಯುತ್ತದೆಯೆಂದರೆ ನಂಬಲು ಸಾಧ್ಯವೇ?
ವಿಚಿತ್ರವಾದರೂ ಈ ಸತ್ಯವನ್ನು ನಂಬಲೇಬೇಕು. ಕೋಸ್ಟರಿಕಾ ಹಾಗೂ ಬ್ರೆಜಿಲ್‌ನಲ್ಲಿ ಕಾಣಸಿಗುವ ನೀಲಿ ಕಪ್ಪೆಗಳು ನಿಜಕ್ಕೂ ಅತ್ಯಂತ ವಿಷಕಾರಿ. ಇವುಗಳಲ್ಲಿನ ವಿಷವು ಮನುಷ್ಯರ ಜೀವಕ್ಕೇ ಸಂಚಕಾರ ತರಬಲ್ಲುದಂತೆ. ಈಗ ವಿಜ್ಞಾನಿಗಳು ತಮ್ಮ ಪ್ರಯೋಗಾಲಯದಲ್ಲೇ ಇಂಥ ಕಪ್ಪೆಗಳನ್ನು ಸೃಷ್ಟಿಸಿದ್ದಾರೆ.
ಕಿಲ್ಲರ್ ಫ್ರಾಗ್
ಕೇವಲ 2.5 ಸೆಂ.ಮೀ. ಉದ್ದವಿರುವ ನೀಲಿ ಬಣ್ಣದ ವಿಷಕಾರಿ ಕಪ್ಪೆಗಳು ಕೋಸ್ಟರಿಕಾ, ಬ್ರೆಜಿಲ್‌ನ ದಟ್ಟ ಕಾಡುಗಳಲ್ಲಿ ಎಲ್ಲೆಂದರಲ್ಲಿ ಕುಪ್ಪಳಿಸುತ್ತವೆ. ಈ ಕಿಲ್ಲರ್ ಫ್ರಾಗ್‌ಗಳಿಗೆ ಏಕಕಾಲದಲ್ಲಿ 10 ಜನರನ್ನು ಕೊಲ್ಲುವ ಸಾಮರ್ಥ್ಯವಿದೆ. ಇದರ ಚರ್ಮವು ನೀಲಿ ಮಾತ್ರವಲ್ಲ, ಕಪ್ಪು, ಹಸಿರು, ಕೆಂಪು, ಹಳದಿ ಹೀಗೆ ಬೇರೆ ಬೇರೆ ಬಣ್ಣಗಳನ್ನೂ ಹೊಂದಿರುತ್ತದೆ. ವಿಷವಿರುವುದೇ ಇವುಗಳ ಚರ್ಮದಲ್ಲಿ. ಈ ಕಪ್ಪೆಯನ್ನು ಸ್ಪರ್ಶಿಸಿದರೆ ಸಾಕು, ಕ್ಷಣಮಾತ್ರದಲ್ಲಿ ನಿಮ್ಮ ಪ್ರಾಣಪಕ್ಷಿ ಹಾರಿಹೋಗಿರುತ್ತದೆ. ದಕ್ಷಿಣ ಅಮೆರಿಕದಲ್ಲೂ ಈ ಕಪ್ಪೆಗಳ ಸಂತತಿಯಿತ್ತು. ಆದರೆ, ಈಗ ಅದು ನಾಶವಾಗಿ ಹೋಗಿದೆ. ಹಾಗಾಗಿ ವಾಲ್‌ಫೋರ್ಡ್ ಮತ್ತು ನಾರ್ತ್ ಶ್ರಾಪ್‌ಶೈರ್ ಕಾಲೇಜಿನ ಪ್ರಾಣಿ ತಜ್ಞರು ಸೇರಿಕೊಂಡು ಇಂಥ ಕಪ್ಪೆಯೊಂದಕ್ಕೆ ಜೀವ ನೀಡಿದ್ದಾರೆ.
ವಿಷಕಪ್ಪೆಗೆ ಜೀವ
ಅಮೆರಿಕದಲ್ಲಿ ಯುವಕನೊಬ್ಬನ ಬಳಿ ಜೋಡಿ ವಿಷ ಕಪ್ಪೆಗಳಿದ್ದವು. ಆತ ಸೇನೆಗೆ ಸೇರುವ ವೇಳೆ ಅದನ್ನು ಪ್ರಯೋಗಾಲಯಕ್ಕೆ ಬಿಟ್ಟ. ಈ ಹೆಣ್ಣು ಮತ್ತು ಗಂಡು ಕಪ್ಪೆಯನ್ನು ಬಳಸಿ ಹೊಸ ವಿಷಕಾರಿ ಕಪ್ಪೆಯನ್ನು ಸೃಷ್ಟಿಸಲಾಗಿದೆ. ವಿನಾಶದಂಚಿನಲ್ಲಿರುವ ಈ ಕಪ್ಪೆಯ ಸಂತತಿಯನ್ನು ಉಳಿಸುವುದೇ ವಿಜ್ಞಾನಿಗಳ ಉದ್ದೇಶ. ಮೊದಲು ಕಪ್ಪೆಯ ಹುಟ್ಟಿಗೆ ನೆರವಾಗುವಂಥ ವಾತಾವರಣದ ಸ್ಥಿತಿಯ ಬಗ್ಗೆ ಅಧ್ಯಯನ ಕೈಗೊಳ್ಳಲಾಯಿತು. ಬಳಿಕ ಅದಕ್ಕೆ ತಕ್ಕಂತೆ ಕೆಲವೊಂದು ಅಡ್ಜೆಸ್ಟ್‌ಮೆಂಟ್‌ಗಳನ್ನು ಮಾಡಲಾಯಿತು. ಹೆಣ್ಣು ಕಪ್ಪೆಯಿಟ್ಟ ಫಲವತ್ತಾದ ಮೊಟ್ಟೆಯನ್ನು ಕೆರೆಯೊಂದರಲ್ಲಿ ಇಡಲಾಯಿತು. ಕೆರೆಯಲ್ಲಿನ ನೀರಿನ ತಾಪಮಾನವನ್ನು 27 ಸೆಂ. (80 ಫ್ಯಾರನ್ ಹೀಟ್) ಗೆ ಸೆಟ್ ಮಾಡಲಾಯಿತು. ಅತಿನೇರಳೆ ಕಿರಣ(ಯುವಿ) ಗಳನ್ನು ಕೆರೆಗೆ ಹಾಯಿಸಲಾಯಿತು. ಈ ಮೂಲಕ ಕಪ್ಪೆಯು ಜೀವತಳೆಯಲು ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಯಿತು. ಮೊಟ್ಟೆಯೊಡೆದು ಕಪ್ಪೆ ಹೊರಬರಲು 12 ವಾರಗಳು ಬೇಕಾದವು.
ಚಿಕ್ಕದಾದರೂ ಪ್ರಾಣಾಂತಕ
- ವಿಶ್ವದಲ್ಲಿ 100ಕ್ಕೂ ಅಧಿಕ ಮಾರಣಾಂತಿಕ ಕಪ್ಪೆಗಳ ಜಾತಿಗಳಿವೆ. ಆದರೆ, ಎಲ್ಲದರ ದೇಹಗಳ ಗಾತ್ರವೂ ಒಂದು ಅಥವಾ ಎರಡು ಇಂಚಿನಷ್ಟಿರುತ್ತವೆ.
- ಅವುಗಳ ಬಣ್ಣವು ಅತ್ಯಂತ ಹೊಳಪಿನಿಂದ ಕೂಡಿರುತ್ತದೆ. 'ನನ್ನ ಸಮೀಪ ಬರಬೇಡಿ. ನಾನು ಅತ್ಯಂತ ಅಪಾಯಕಾರಿ' ಎಂಬುದನ್ನು ಸೂಚಿಸಲೆಂದೇ ಇಷ್ಟೊಂದು ಪ್ರಖರ ಬಣ್ಣವನ್ನು ಹೊಂದಿರುತ್ತವೆ.
- ಇಂಥ ಕಪ್ಪೆಗಳಲ್ಲಿ ವಿಷವಿರುವ ಪ್ರದೇಶವೆಂದರೆ ಅವುಗಳ ಚರ್ಮ.
- ಅರಣ್ಯಗಳಲ್ಲಿ ಕಾಣಸಿಗುವ ಜೇಡಗಳು ಹಾಗೂ ಇರುವೆ, ಗೆದ್ದಲು ಹುಳದಂಥ ಚಿಕ್ಕಪುಟ್ಟ ಜೀವಿಗಳನ್ನು ತಿಂದು ಈ ಕಪ್ಪೆಗಳು ಜೀವಿಸುತ್ತವೆ. ಅವುಗಳ ತೀಕ್ಷ್ಣ ಕಣ್ಣುಗಳು ಆಹಾರ ಹುಡುಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
- ತನ್ನ ಅಂಟಂಟಾದ ನಾಲಗೆಯ ಮೂಲಕ ಆಹಾರವನ್ನು ಬೇಟೆಯಾಡುತ್ತವೆ.
ವಿಶ್ವದ ಕಾರ್ಕೋಟಕ ಕಪ್ಪೆಗಳು
ಗೋಲ್ಡನ್ ಪಾಯ್ಸನ್ ಕಪ್ಪೆ
ಇದರ ಚರ್ಮದಲ್ಲಿನ ವಿಷವು 10-20 ಜನರನ್ನು, ಆಫ್ರಿಕದ 2 ಆನೆಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ. ಈ ಕಪ್ಪೆಯನ್ನು ಸ್ಪರ್ಶಿಸಿದ ಕೋಳಿ, ನಾಯಿಗಳು ಕ್ಷಣಮಾತ್ರದಲ್ಲಿ ಸಾಯುತ್ತವೆ.
ಫಾಂಟಸ್ಮಾಲ್ ವಿಷ ಕಪ್ಪೆ
ಈಕ್ವೆಡಾರ್‌ನಲ್ಲಿ ಕಾಣಸಿಗುವ ಫಾಂಟಸ್ಮಾಲ್‌ನ ವಿಶೇಷತೆಯೆಂದರೆ, ಇದರಿಂದ ಮಾರ್ಫಿನ್‌ಗಿಂತಲೂ 200 ಪಟ್ಟು ಅಧಿಕ ಶಕ್ತಿಯಿರುವ ಪೇನ್ ಕಿಲ್ಲರ್ ಟ್ಯಾಬ್ಲೆಟ್‌ಗಳನ್ನು ತಯಾರಿಸಲಾಗುತ್ತದೆ. ವಿನಾಶದಂಚಿನಲ್ಲಿರುವ ಈ ಕಪ್ಪೆಗಳನ್ನು ರಕ್ಷಿಸಲು ವಿಜ್ಞಾನಿಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಕೈಯಲ್ಲಿ ಗ್ಲೌಸ್ ಹಾಕಿಕೊಂಡು!
ರ್ಯಾನಿಟೋಮಿಯಾ ವೇರಿಯಬಿಲಿಸ್
ಇವು ಮರಗಳಲ್ಲಿ ವಾಸಿಸುತ್ತವೆ. ಅದರ ಬಣ್ಣ ನೋಡಲು ಆಕರ್ಷಕವಾಗಿದ್ದರೂ ಕನಿಷ್ಠ ಐವರನ್ನು ಕೊಲ್ಲುವಂಥ ವಿಷವನ್ನು ಹೊಂದಿರುತ್ತದೆ.
ಲವ್ಲಿ ಕಪ್ಪೆ
ಕಡಿಮೆ ಎಂದರೆ 0.8 ಮೈಕ್ರೋಗ್ರಾಂನಷ್ಟು ವಿಷವಿರುತ್ತದೆ. ಒಂದು ವೇಳೆ ಈ ಕಪ್ಪೆಯನ್ನು ಸೇವಿಸಿದರೆ ಹೃದಯ ವೈಫಲ್ಯವಾಗಿ ಸಾವಿಗೀಡಾಗುವ ಸಾಧ್ಯತೆ ಹೆಚ್ಚು. ಹೆಸರು ಕೇಳಿ ಈ ಕಪ್ಪೆಯ ಸಮೀಪಕ್ಕೆ ಸುಳಿಯುವುದು ಮಾತ್ರ ಡೇಂಜರ್.
ಸ್ಟ್ರಾಬೆರಿ ವಿಷ ಕಪ್ಪೆ
ಕೆಂಪು ಚರ್ಮವುಳ್ಳ ಈ ಕಪ್ಪೆಯು ನೋಡಲು ಸುಂದರವಾಗಿರುತ್ತದೆ. ಇದನ್ನು ಮುಟ್ಟಿದರೆ ಊತ ಹಾಗೂ ಉರಿ ಕಾಣಿಸಿಕೊಳ್ಳುತ್ತದೆ.
ಕಪ್ಪು ಕಾಲಿನ ಡಾರ್ಟ್ ಕಪ್ಪೆ
ವಿಶ್ವದ 2ನೇ ಅತಿ ವಿಷಕಾರಿ ಕಪ್ಪೆ. ಇದನ್ನು ಮುಟ್ಟಿದರೆ ಅಂಥವರಿಗೆ ಜ್ವರ, ಅತಿಯಾದ ಮೈಕೈ ನೋವು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಅಥವಾ ಮಾಂಸಖಂಡಗಳಿಗೆ ಲಕ್ವ ಹೊಡೆದು ಸಾವಿಗೀಡಾಗುತ್ತಾರೆ.
ಕೋಕೋ ವಿಷವುಳ್ಳ ಕಪ್ಪೆ
ಅತ್ಯಂತ ಚಿಕ್ಕ ಗಾತ್ರದ ಕಪ್ಪೆ ಇದಾಗಿದ್ದು, ಇದರ ಚರ್ಮದಲ್ಲೂ ಬ್ಯಾಟ್ರಕೋ ವಿಷವಿರುತ್ತದೆ. ಇದೂ ಮನುಷ್ಯನಿಗೆ ಅಪಾಯಕಾರಿ.
ಗಾಲ್ಫಡಲ್ಶಿಯನ್ ವಿಷಕಪ್ಪೆ
ಮೇಲಿನದ್ದಕ್ಕಿಂತ ಸ್ವಲ್ಪ ಕಡಿಮೆ ವಿಷವುಳ್ಳದ್ದು. ಈ ಕಪ್ಪೆಯನ್ನು ತಿಂದವರ ನಾಲಗೆಯು ನಿಶ್ಚೇಷ್ಟಿತಗೊಂಡ, ಗಂಟಲಿನಲ್ಲಿ ಏನೋ ಸಿಲುಕಿಕೊಂಡಂಥ ಅನುಭವವಾಗುತ್ತದೆ. ಇದರ ವಿಷದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ಡೈಯಿಂಗ್ ಡಾರ್ಟ್ ಕಪ್ಪೆ
ಈ ಕಪ್ಪೆಗಳ ವಿಷವನ್ನು ಬುಡಕಟ್ಟು ಜನಾಂದವರು ಬೇಟೆಯಾಡಲು ಬಳಸುತ್ತಾರೆ. ಅಷ್ಟೇ ಅಲ್ಲ, ಗಿಣಿಗಳ ಮಸಾಜ್‌ಗೆ ಕೂಡ ಇದನ್ನು ಬಳಸಲಾಗುತ್ತದೆ. ಈ ಕಪ್ಪೆಯಲ್ಲಿನ ವಿಷವು ಗಿಣಿಗಳ ರೆಕ್ಕೆಗಳು ವಿವಿಧ ಬಣ್ಣಗಳಿಂದ ಕಂಗೊಳಿಸುವಂತೆ ಮಾಡುವಲ್ಲಿ ಸಹಾಯಕ.
ಮಂಕಿ ಕಪ್ಪೆ
ಈ ಕಪ್ಪೆಯಲ್ಲಿರುವ ವಿಷವು ಮನುಷ್ಯನಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹಿಡಿದು ಮನೋವಿಕಲ್ಪದವರೆಗೂ ಪರಿಣಾಮ ಬೀರುತ್ತದೆ. ಅಮೆಜಾನ್‌ನ ಬುಡಕಟ್ಟು ಜನಾಂಗದವರು ಇದರಲ್ಲಿನ ವಿಷವನ್ನು ಗಾಯಗಳಿಗೆ ಹಚ್ಚಲು ಬಳಸುವುದುಂಟು. ಈ ವಿಷದ ಅಂಶವನ್ನು ಏಡ್ಸ್, ಕ್ಯಾನ್ಸರ್‌ನಂಥ ಕಾಯಿಲೆಗಳ ಚಿಕಿತ್ಸೆಗೂ ಬಳಸಲಾಗುತ್ತದೆ. ಮಂಕಿ ಕಪ್ಪೆಗಳು ವಿನಾಶದಂಚಿಗೆ ತಲುಪಲು ಇದೂ ಒಂದು ಕಾರಣ.
- ದಿಯಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


