ವಿಜ್ಞಾನ-ತಂತ್ರಜ್ಞಾನ

ಯಾರ ಕೈಲಿದೆ ನಿಮ್ಮ ಮನ Mind it

ಇನ್ನೊಬ್ಬರ ಮನಸ್ಸನ್ನು ನಿಯಂತ್ರಿಸುವ ಔಷಧಗಳು ಒಂದೊಂದಾಗಿ ತಯಾರಾಗುತ್ತಿವೆ ಎಂಬುದು ಮಾತ್ರ ಸತ್ಯ.

ಯಾರ ಕೈಲಿದೆ ನಿಮ್ಮ ಮನ Mind it
Published On :

ನಮ್ಮ ಮನಸ್ಸನ್ನು ನಾವು ನಿಗ್ರಹದಲ್ಲಿಟ್ಟುಕೊಳ್ಳಬೇಕು ಎನ್ನುವುದು ಹಳೆ ಮಾತಾಯಿತು. ಈಗ ಬೇರೆಯವರ ಮನಸ್ಸನ್ನೂ ನಿಯಂತ್ರಿಸಬಹುದು.

ಅದು ನವೆಂಬರ್ 28, 1953. ಅಮೆರಿಕದ ಬಯೋಕೆವುಸ್ಟ್ ಫ್ರಾಂಕ್ ಓಲ್ಸನ್ ಎಂಬುವರು ಇದ್ದಕ್ಕಿದ್ದಂತೆ ನ್ಯೂಯಾರ್ಕ್ ಹೊಟೇಲ್‌ನ ಕಿಟಕಿಯಿಂದ ಹಾರಿ ಪ್ರಾಣಬಿಟ್ಟರು. ಅವರ ಸಾವಿಗೆ ಆತ್ಮಹತ್ಯೆ ಪಟ್ಟ ಕಟ್ಟಲಾಯಿತು. ಇದಾಗಿ ಬರೋಬ್ಬರಿ 20 ವರ್ಷಗಳ ಬಳಿಕ ಅಮೆರಿಕದ ತನಿಖಾ ಸಂಸ್ಥೆ ಸಿಐಎ (ಸೆಂಟ್ರಲ್ ಇನ್‌ವೆಸ್ಟಿಗೇಷನ್ ಏಜೆನ್ಸಿ) ನಡೆಸುತ್ತಿದ್ದ ರಹಸ್ಯ 'ಎಂಕೆಅಲ್ಟ್ರಾ' ಪ್ರಾಜೆಕ್ಟ್ ಅನ್ನೇ ಸ್ಥಗಿತಗೊಳಿಸಲಾಯಿತು. ಇದಕ್ಕೆ ಕಾರಣವೇನು ಗೊತ್ತಾ?
 ಓಲ್ಸನ್ ಸಾವಿನ ಬಗ್ಗೆ ತನಿಖೆ ನಡೆಸಿದಾಗ ಅಮೆರಿಕಕ್ಕೆ ಆಘಾತಕಾರಿ ವಿಷಯವೊಂದು ಗೊತ್ತಾಗಿತ್ತು. ಅದೇನೆಂದರೆ, ಓಲ್ಸನ್ ಅವರು ಸಾವಿಗೀಡಾಗುವ ಸ್ವಲ್ಪ ಹೊತ್ತಿಗೆ ಮುಂಚೆ ಅವರಿಗೆ ಮನಸ್ಸನ್ನು ಬದಲಾಯಿಸುವ ಎಲ್‌ಎಸ್‌ಡಿ ಎಂಬ ಔಷಧವೊಂದನ್ನು ನೀಡಲಾಗಿತ್ತು. ಆ ಔಷಧವು ಓಲ್ಸನ್‌ಗೆ ಕಿಟಕಿಯಿಂದ ಜಿಗಿಯುವಂತೆ ಪ್ರೇರೇಪಿಸಿತ್ತು. ಅಂದರೆ ನಿಜವಾಗಿ ಓಲ್ಸನ್‌ರದ್ದು ಆತ್ಮಹತ್ಯೆಯಾಗಿರಲಿಲ್ಲ, ಕೊಲೆಯಾಗಿತ್ತು. ಅವರಿಗೆ ಈ ಔಷಧ ನೀಡಿದ್ದು ಬೇರ್ಯಾರೂ ಅಲ್ಲ. ತನಿಖಾ ಸಂಸ್ಥೆ ಸಿಐಎ!
ಬಯೋಲಾಜಿಕಲ್ ಸಮರ ಮತ್ತು ಎಲ್‌ಎಸ್‌ಡಿಯ ಸೇನಾ ಬಳಕೆ ಬಗೆಗಿನ ತನ್ನ ಸಂಶೋಧನೆಯನ್ನು ಓಲ್ಸನ್ ಅವರು ಬಹಿರಂಗಪಡಿಸಬಾರದು ಎಂಬ ಉದ್ದೇಶದಿಂದ ಅವರ ಕೊಲೆ ನಡೆದಿತ್ತು. ಎಂಕೆಅಲ್ಟ್ರಾ ಪ್ರಾಜೆಕ್ಟ್‌ನ ಬಲಿಪಶು ಕೇವಲ ಓಲ್ಸನ್ ಮಾತ್ರವೇ ಅಥವಾ ಇನ್ನೂ ಅನೇಕರನ್ನು ಇದೇ ರೀತಿ ಪ್ರಯೋಗಕ್ಕೆ ಬಳಸಲಾಗಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ಮೈಂಡ್ ಕಂಟ್ರೋಲ್
ಒಟ್ಟಾರೆಯಾಗಿ ಇನ್ನೊಬ್ಬರ ಮನಸ್ಸನ್ನು ನಿಯಂತ್ರಿಸುವ ಔಷಧಗಳು ಒಂದೊಂದಾಗಿ ತಯಾರಾಗುತ್ತಿವೆ ಎಂಬುದು ಮಾತ್ರ ಸತ್ಯ. ಅಂತಹ ಸಂಶೋಧನೆಗಳು ನಿರಂತರವಾಗಿ ನಡೆದಿವೆ. ಕಂಪ್ಯೂಟಿಂಗ್ ಪವರ್, ಜೆನೆಟಿಕ್(ಜೀನ್‌ಗಳಿಗೆ ಸಂಬಂಧಿಸಿದ್ದು) ಮತ್ತು ನ್ಯೂರೋಇಮೇಜಿಂಗ್‌ನಲ್ಲಿ ಸಾಧಿಸಿದ ಪ್ರಗತಿಯು ಅಭೂತಪೂರ್ವವಾಗಿ ಹಾಗೂ ಕರಾರುವಕ್ಕಾಗಿ ಇನ್ನೊಬ್ಬರ ಮನಸ್ಸನ್ನು ನಿಯಂತ್ರಿಸುವ ತಂತ್ರಜ್ಞಾನಗಳ ಅಭಿವೃದ್ಧಿಗೆ ನೆರವಾಗಿದೆ. ಈಗ ಇವುಗಳನ್ನು ಸೆರೆಸಿಕ್ಕ ಸೈನಿಕನ ಮೇಲೆ ಪ್ರಯೋಗಿಸುವುದಕ್ಕಾಗಲೀ, ಬಂಡಾಯವೆದ್ದವರ ದಮನಕ್ಕಾಗಲೀ ಬಳಸಲಾಗುತ್ತಿಲ್ಲ. ಬದಲಾಗಿ ಉತ್ತಮ ಕಾರಣಗಳಿಗಾಗಿಯೇ ಇಂಥ ಔಷಧಗಳನ್ನು ಬಳಸಲಾಗುತ್ತಿದೆ.
ಮನಸ್ಸನ್ನು ನಿಯಂತ್ರಿಸುವ ಔಷಧಗಳು ಚಟ ಬಿಡಿಸುವುದರಿಂದ ಹಿಡಿದು ಖಿನ್ನತೆಗೊಳಗಾದವರ ಮನಸನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.

ಸೂಪರ್ ಸೈನಿಕರಿಗಾಗಿ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ರಾಷ್ಟ್ರಗಳು ತಮ್ಮ ಸೈನ್ಯಬಲವನ್ನು ವೃದ್ಧಿಸುವುದಕ್ಕಾಗಿ ವಿವಿಧ ಕಸರತ್ತುಗಳನ್ನು ಮಾಡುತ್ತಿವೆ. ಸೂಪರ್ ಸೋಲ್ಜರ್‌ಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ತಂತ್ರಜ್ಞಾನಗಳ ಮೊರೆಹೋಗಲಾಗುತ್ತಿದೆ. ಮನಸ್ಸನ್ನು ನಿಯಂತ್ರಿಸುವ ಔಷಧಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಾವು-ಬದುಕಿನ ನಡುವಿನ ಹೋರಾಟದ ಸಮಯದಲ್ಲೂ ಭಯವೆಂಬುದು ಸೈನಿಕರ ಹತ್ತಿರವೂ ಸುಳಿಯಬಾರದು, ರಾತ್ರಿ ಕೇವಲ 2 ಗಂಟೆಗಳ ಕಾಲ ನಿದ್ರಿಸಿದ್ದರೂ ದೃಢ, ಜಾಣ್ಮೆಯ ನಿರ್ಧಾರ ಕೈಗೊಳ್ಳುವಲ್ಲಿ ಅದು ಅಡ್ಡಿಯಾಗಬಾರದು, ಕೈಯಲ್ಲಿ ಮ್ಯಾಪ್ ಇಲ್ಲದಿದ್ದರೂ ದಟ್ಟಾರಣ್ಯದಲ್ಲಿ ದಿಕ್ಕು ತೋರಿಸುವಂತಿರಬೇಕು....ಇಂತಹ ಸೂಪರ್ ಪವರ್‌ಗಳನ್ನು ಸೈನಿಕರಿಗೆ ಒದಗಿಸಲು, ಈ ಮೂಲಕ ದೇಶದ ಭದ್ರತೆ ಹೆಚ್ಚಿಸುವುದಕ್ಕಾಗಿ ಔಷಧಗಳ ಸಂಶೋಧನೆಗಳು ನಡೆಯುತ್ತಲೇ ಇವೆ. ಮುಂದಿನ ದಿನಗಳಲ್ಲಿ ಖಂಡಾಂತರ ಹೆಲ್ಮೆಟ್‌ಗಳೂ ಸಿದ್ಧವಾಗುವ ಸಾಧ್ಯತೆಯಿದೆ. ಅದನ್ನು ಧರಿಸಿದ ಸೈನಿಕನಿಗೆ ದಿಶಾದರ್ಶನದ ಕಮಾಂಡ್ ನೀಡಲು, ದೀರ್ಘಾವಧಿ ಅಲರ್ಟ್ ಆಗಿರಲು, ಆತಂಕ ಕಡಿಮೆ ಮಾಡಲು ಇದೇ ಹೆಲ್ಮೆಟ್ ನೆರವಾದರೂ ಅಚ್ಚರಿಯಿಲ್ಲ.

ಆಪ್ಟೋಜೆನೆಟಿಕ್ಸ್ ಎಂಬ ತಂತ್ರ
ಹೊಸ ಮೈಂಡ್ ಕಂಟ್ರೋಲ್ ತಂತ್ರಗಳಲ್ಲಿ ಆಪ್ಟೋಜೆನೆಟಿಕ್ಸ್ ಕೂಡ ಒಂದು. ಇದರ ಮೂಲಕ ಮಾನವನ ನರಮಂಡಲವನ್ನು ನಿಯಂತ್ರಿಸುವ ಯತ್ನ ಸಾಗಿದೆ. ಈಗಾಗಲೇ ಇಲಿ, ಹುಳುಗಳು, ಮಂಗಗಳ ಮೇಲೆ ಪ್ರಯೋಗವೂ ನಡೆದಿದೆ. ನರಮಂಡಲದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಅರ್ಥೈಸಿಕೊಂಡರೆ, ನರಗಳ ಚಟುವಟಿಕೆಗಳನ್ನು ಕೃತಕವಾಗಿ ಬದಲಾಯಿಸಿ, ಆ ವ್ಯಕ್ತಿಯ ವರ್ತನೆ ಮತ್ತು ಕ್ರಿಯೆಗಳನ್ನು ನಿಯಂತ್ರಿಸಲು ಸಾಧ್ಯ ಎನ್ನುತ್ತಾರೆ ನರವಿಜ್ಞಾನಿಗಳು.

ಮನಸ್ಸು ನಿಯಂತ್ರಿಸುವ ಔಷಧಗಳಿವು

    ಲಿಸರ್ಜಿಕ್ ಆ್ಯಸಿಡ್ ಡೈಥೈಲಮೈಡ್(ಎಲ್‌ಎಸ್‌ಡಿ)
    ವ್ಯಕ್ತಿಯ ಮೂಡ್ ಮತ್ತು ಲೈಂಗಿಕ ಆಸಕ್ತಿಯನ್ನು ನಿಯಂತ್ರಿಸುತ್ತದೆ.

    ಮೊಡಾಫಿನಿಲ್
    ಮೆದುಳಿನ ಎನರ್ಜಿ ಕೆಮಿಕಲ್‌ನ ಉತ್ಪಾದನೆ ಹೆಚ್ಚಿಸಿ ಮನಸ್ಸು ಎಚ್ಚರದಿಂದಿರುವಂತೆ ಹಾಗೂ ಅಲರ್ಟ್ ಆಗಿರುವಂತೆ ಮಾಡುತ್ತದೆ.

    ಆಕ್ಸಿಟೋಸಿನ್
    ಈ ಔಷಧವು ವ್ಯಕ್ತಿಯು ಸಮಾಜದೊಂದಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಸೇನಾಪಡೆಗಳಲ್ಲಿ ಯೋಧರ ನಡುವೆ ಪರಸ್ಪರ ಬಾಂಧವ್ಯ ಹೆಚ್ಚಿಸಲು ನೆರವಾಗುತ್ತದೆ.

    ಸ್ಕೋಪೋಲಮೈನ್
    ಈ ರಾಸಾಯನಿಕ ಇರುವ ನಾಸಲ್ ಸ್ಪ್ರೇ ತಯಾರಿಕೆಗೆ ನಾಸಾ ಮುಂದಾಗಿದೆ. ಪಿತ್ತೋದ್ರೇಕ ನಿವಾರಣೆಗೆ ಈ ಸ್ಪ್ರೇ ತಯಾರಿಸಲಾಗುತ್ತಿದೆ. ಸ್ಕೋಪೋಲಮೈನ್ ಔಷಧವು ಭಾವಪ್ರೇರಣೆ ಸಾಧ್ಯವಾಗುವಂತೆ ಮಾಡುತ್ತದೆ. ಕೋಲ್ಡ್ ವಾರ್ ಸಮಯದಲ್ಲಿ ಜೆಕೋಸ್ಲೊವೇಕಿಯಾ ಸೈನಿಕರು ಇದನ್ನು ಬಳಸುತ್ತಿದ್ದರು.

    ಡಿಹೈಡ್ರೋಪಿಯಾನ್‌ಡ್ರೋಸ್ಟೆರಾನ್(ಡಿಎಚ್‌ಇಎ)
    ಮೆದುಳಿಗಾಗುವ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ. ಇದನ್ನು ಸೇವಿಸಿದರೆ ಅತಿ ಒತ್ತಡದ ಕೆಲಸಗಳನ್ನೂ ಮಾಡಲು ಸಾಧ್ಯವಾಗುತ್ತದೆ.

- ದಿಯಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.