ಸೂಪರ್7

5.5 ಇಂಚು 1980-1080 ಎಫ್‌ಎಚ್‌ಡಿ ಸ್ಕ್ರೀನ್. 32 ಜಿಬಿ ಇಂಟರ್ನಲ್ ಮೆಮೊರಿ. 3 ಜಿಬಿ
ರ್ಯಾಮ್. ಕ್ವಾಲಕಾಂ ಸ್ನ್ಯಾಪ್ ಡ್ರ್ಯಾಗನ್ 2.2 ಗಿಗಾಹರ್ಟ್ಸ್ ಪ್ರೊಸೆಸರ್. ಇಷ್ಟೆಲ್ಲ ಕೇವಲ 29,999ಕ್ಕೆ!
ಚೈನೀಸ್ ಕಂಪನಿ ಮೊಬೈಲ್‌ಗಳು ಎಂದರೆ ಮೂಗು ಮುರಿಯುವವರನ್ನು ಬೆಚ್ಚಿ ಬೀಳಿಸುವಂತೆ ಚೀನಾದ ಜ್ಯೋನಿ ಕಂಪನಿ ಇ7 ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಡಿ.24ರಂದು ದಿಲ್ಲಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಈ ಮೊಬೈಲ್ ಬಿಡುಗಡೆ ಮಾಡಲಾಗಿದೆ. ಆ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಬೈಟು ಕಾಫಿಗೆ ಲಭ್ಯವಾಗಿತ್ತು.
ಇ7 ಮೊಬೈಲ್ ಕೊಳ್ಳಲು ಈಗಾಗಲೇ ಹೇಳಿರುವ ಕಾರಣಗಳ ಜತೆಗೆ, ಅದರ ಕ್ಯಾಮರಾ ಕೂಡ ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆ ಇದೆ. ಕಂಪನಿ ಹೇಳಿಕೊಳ್ಳುವ ಪ್ರಕಾರ, ಇದು ಅತ್ಯುತ್ತಮ ಮೊಬೈಲ್ ಕ್ಯಾಮರಾ. ಅದನ್ನು ಬಹುತೇಕ ನಂಬಬಹುದು ಕೂಡ. ಯಾಕೆಂದರೆ ಈ ಮೊಬೈಲ್ ಹಿಂಬದಿಗೆ 16 ಮೆಗಾಪಿಕ್ಸೆಲ್, ಮುಂಬದಿಗೆ 8 ಮೆಗಾಪಿಕ್ಸೆಲ್ ಕ್ಯಾಮರಾ ಹೊಂದಿದೆ ಎಂದರೆ ನಂಬಲಸಾಧ್ಯ. ಆದರೂ ಸತ್ಯ. ಹಾಗಂತ ಕೇವಲ ಮೆಗಾಪಿಕ್ಸೆಲ್ ಒಂದಕ್ಕೇ ಗಮನ ಕೊಡಲಾಗಿಲ್ಲ. ಬದಲಾಗಿ ಪ್ರೊಡಿಜಿಟಲ್ ಕ್ಯಾಮರಾ ಸೆನ್ಸರ್, ಆಟೊ ಬ್ಯೂಟಿ ಎಫೆಕ್ಟ್, 9 ಡಿಸೈನ್ ಫಿಲ್ಟರ್‌ಗಳು, ವಿವಿಧ ಶೂಟಿಂಗ್ ಮೋಡ್‌ಗಳು ಹೀಗೆ ಸಾಕಷ್ಟು ಕ್ಯಾಮರಾ ಮತ್ತು ಫೋಟೋ ಆಯ್ಕೆಗಳನ್ನು ಅಳವಡಿಸಲಾಗಿದೆ. ಬಹುಶಃ ಇದೇ ಮೊದಲ ಬಾರಿಗೆ ಮೊಬೈಲ್ ಕ್ಯಾಮರಾಕ್ಕೆ ಮ್ಯಾನುಯಲ್ ಸೆಟ್ಟಿಂಗ್ಸ್ ಅವಕಾಶಗಳನ್ನು ನೀಡಲಾಗಿದೆ. ಅಂದರೆ ಪ್ರೊಫೆಷನಲ್ ಕ್ಯಾಮರಾಗಳಂತೆ ಎಕ್ಸ್‌ಪೋಷರ್‌ಗಳನ್ನು ನೀವು ನಿಮಗೆ ಬೇಕಾದ ಹಾಗೆ ಸೆಟ್ ಮಾಡಬಹುದು. ಫೋಟೋಗ್ರಫಿ ಕುರಿತು ಅಷ್ಟೆಲ್ಲ ಮಾಹಿತಿ ಇಲ್ಲವೆಂದರೆ ಆಟೋ ಸೆಟ್ಟಿಂಗ್ಸ್ ಆಯ್ಕೆ ಇದ್ದೇ ಇದೆ.
ಅದಕ್ಕೇ ಕಂಪನಿ ಇ7 ಮೊಬೈಲ್‌ಗೆ 'ಮೇಡ್ ಫಾರ್ ಶೂಟಿಂಗ್' ಎಂದೇ ಹೇಳಿಕೊಂಡಿದೆ. ನೀವು ನಗೆಯಾಡಿದರೆ ಫೋಟೊ ಕ್ಲಿಕ್ಕಿಸುವ, ಯಡಿಯೂರಪ್ಪ ಮಾದರಿಯಲ್ಲಿ ವಿಕ್ಟರಿ ತೋರಿಸುವಂತೆ ಎರಡು ಬೆರಳು ಆಡಿಸಿದರೆ ಫೋಟೊ ಕ್ಲಿಕ್ಕಿಸುವ ಸೌಲಭ್ಯ ಈ ಕ್ಯಾಮರಾದಲ್ಲಿದೆ. ಧ್ವನಿಯ ಮೂಲಕವೂ ನೀವು ಫೋಟೊ ಕ್ಲಿಕ್ಕಿಸಬಹುದು. ನೀವು ಯಾವುದಾದರೂ ಪುಟಗಳ ಫೋಟೊ ತೆಗೆದರೆ ಅದು ಓರೆ-ಕೋರೆ ಬರುವುದು ನಿಮಗೆ ಗೊತ್ತು. ಇಲ್ಲಿ ಅದನ್ನೂ ಸರಿಪಡಿಸುವ ತಂತ್ರಜ್ಞಾನ ಅಳವಡಿಸಲಾಗಿದೆ.
ಬಹುಶಃ ನಾವ್ಯಾರೂ ನಿರೀಕ್ಷಿಸಿರದ ಕೆಲವು ಸೌಲಭ್ಯಗಳನ್ನು ಇ7 ಮೊಬೈಲ್ ಹೊಂದಿದೆ. ಕೇವಲ ಕ್ಯಾಮರಾವಷ್ಟೇ ಅಲ್ಲ. ಅದರಲ್ಲಿ ನೀವು ತೆಗೆದ ಫೋಟೊಗಳು ವ್ಯಕ್ತಿ, ದಿನಾಂಕ, ಸ್ಥಳ ಆಧಾರಿತವಾಗಿ ಗ್ಯಾಲರಿಯಲ್ಲಿ ಪೇರಿಸಲ್ಪಡುತ್ತವೆ. ಇನ್ನು ಬ್ಲ್ಯೂಟೂತ್, ವೈಫೈ, ಎನ್‌ಎಫ್‌ಸಿಗಳೆಲ್ಲ ಇವೆ. 2500 ಎಂಎಎಚ್ ಪಾಲಿಮರ್ ಬ್ಯಾಟರಿ ಹೊಂದಿದ್ದು, ಬ್ಯಾಟರಿ ಸ್ಯಾಮರ್ಥ ಕೊಂಚ ಹೆಚ್ಚಿದ್ದರೆ ಒಳ್ಳೆಯದಿತ್ತೇನೋ ಎಂಬ ಒಂದು ಅಂಶವನ್ನು ಹೊರತುಪಡಿಸಿದರೆ, ಬೇರೆಲ್ಲ ದೃಷ್ಟಿಯಿಂದಲೂ ಮೊಬೈಲ್ ಅದ್ಭುತವಾಗಿದೆ.
ಹಾರ್ಡ್‌ವೇರ್ ಒಂದೇ ಅಲ್ಲ, ಸಾಫ್ಟ್‌ವೇರ್‌ಗೂ ಒತ್ತು ನೀಡಲಾಗಿದೆ. ಆ್ಯಂಡ್ರಾಯ್ಡ್ 4.2ಗೆ ಸಾಕಷ್ಟು ಬದಲಾವಣೆಗಳನ್ನು ಮಾಡಿ ಎಮಿಗೊ ಎಂಬ ಹೆಸರು ನೀಡಲಾಗಿದೆ. ಇದರಲ್ಲಿ ನಿಮ್ಮ ಎಸ್‌ಎಂಎಸ್‌ಗಳು ತನ್ನಿಂದ ತಾನೇ ಉದ್ಯೋಗ ಮತ್ತು ಖಾಸಗಿ ಎಂದು ವರ್ಗೀಕರಿಸಲ್ಪಡುತ್ತವೆ. ಕೆಲವು ಹೊಸ ಅಂಶಗಳನ್ನೂ ಸೇರಿಸಲಾಗಿದೆ. ಹೀಗಾಗಿ ಇದು ಆ್ಯಂಡ್ರಾಯ್ಡ್ ಫೋನ್ ಆದರೂ ಅದಕ್ಕಿಂತ ಕೊಂಚ ಪ್ರತ್ಯೇಕವಾಗಿರಲಿದ್ದು, ಹೊಸತನದ ಅನುಭವ ನೀಡುತ್ತದೆ. ಇದರ ಜತೆಗೆ ಇ7 ಮೊಬೈಲ್‌ಗೆ 3ನೇ ಜನರೇಷನ್ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ. ಇದು 2ನೇ ಜನರೇಷನ್ ಗೊರಿಲ್ಲಾ ಗ್ಲಾಸ್‌ಗಿಂತ ಎರಡುಪಟ್ಟು ಹೆಚ್ಚು ಗಟ್ಟಿಯಾಗಿದೆ ಎಂದು ಕಂಪನಿ ಹೇಳಿದೆ. ಕೆಂಪು, ಬಿಳಿ, ನೇರಳೆ ಸೇರಿದಂತೆ 5-6 ಬಣ್ಣಗಳಲ್ಲಿ ಮೊಬೈಲ್ ಲಭ್ಯವಿದ್ದು, 16 ಜಿಬಿ 2ಜಿಬಿ ರ್ಯಾಮ್ ಮತ್ತು 32 ಜಿಬಿ 3 ಜಿಬಿ ರ್ಯಾಮ್ ಕಾಂಬಿನೇಷನ್‌ಗಳಲ್ಲಿ ಮೊಬೈಲ್ ಲಭ್ಯವಿದೆ.
ಜ್ಯೋನಿ ಎಂದರೇನು?
ಕಂಪನಿ ಭಾರತಕ್ಕೆ ಹೊಸದಿರಬಹುದು. ಆದರೆ ಚೀನಾದಲ್ಲಿ ಹಳೆಯದು. ಅಲ್ಲಿ ಜಿಎಸ್‌ಎಂ ಮೊಬೈಲ್‌ಗಳ ಮಾರಾಟದಲ್ಲಿ ನಂ.2 ಸ್ಥಾನದಲ್ಲಿದೆ. ಒಟ್ಟು 26 ದೇಶಗಳಲ್ಲಿ ಮೊಬೈಲ್ ಮಾರಾಟ ಮಾಡುತ್ತಿದೆ. 2.3 ಕೋಟಿ ಮೊಬೈಲ್‌ಗಳನ್ನು ಚೀನಾದಲ್ಲಿ ಮಾರಾಟ ಮಾಡುತ್ತಿದ್ದರೆ, 10 ಲಕ್ಷ ಮೊಬೈಲ್‌ಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ಭಾರತದ ಕೆಲವು ಕಂಪನಿಗಳಿಗೆ ಮೊಬೈಲ್ ಪೂರೈಕೆ ಮಾಡುತ್ತಿತ್ತು.
ಚೈನೀ ಭಾಷೆಯಲ್ಲಿ ಜ್ಯೋನಿ ಅಂದರೆ ಚಿನ್ನದಂತ ಗುಣಮಟ್ಟ ಎಂದರ್ಥ. ದಿಲ್ಲಿಯಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದ ನಂತರ ಇ7 ಮೊಬೈಲನ್ನು ಪರೀಕ್ಷೆಗೊಳಪಡಿಸಿದಾಗ ಆ ಮಾತು ನಿಜವೇನೋ ಎಂಬಂತೆ ಭಾಸವಾಯಿತು. ದೀರ್ಘಕಾಲದ ಬಳಕೆಯಲ್ಲಿ ಹೆಸರಿನ ಅರ್ಥವನ್ನು ಕಂಪನಿ ಮೊಬೈಲ್‌ಗಳ ಮೂಲಕಕಾಪಾಡಿಕೊಂಡಲ್ಲಿ ಭಾರತದ ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪನಿಗಳಿಗೆ ಏಟು ನೀಡುವ ಅಪಾಯ ಖಂಡಿತ ಇದೆ.
ಇದರೊಟ್ಟಿಗೆ ಬಂದಿದೆ ಮಿನಿ
ಸಾಮಾನ್ಯವಾಗಿ ಒಂದು ಮೊಬೈಲ್ ಮಾರುಕಟ್ಟೆಗೆ ಬಿಟ್ಟ ಕೆಲವು ದಿನಗಳ ನಂತರ ಅದರದ್ದೇ ಸಣ್ಣ ಮಾದರಿಯನ್ನು ಬಿಡುವುದು ವಾಡಿಕೆ. ಆದರೆ ಜ್ಯೋನಿ ಕಂಪನಿ ಒಂದೇ ದಿನ ಇ7 ಮತ್ತು ಇ7 ಮಿನಿ ಮಾದರಿಯನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಸ್ಕ್ರೀನ್ ಗಾತ್ರ 4.7 ಇಂಚುಗಳಾಗಿದ್ದು, 1.7 ಗಿಗಾಹರ್ಟ್ಸ್ ಪ್ರೊಸೆಸರ್ ಮತ್ತು 2 ಜಿಬಿ ರ್ಯಾಮ್ ಹೊಂದಿದೆ. ಇದರ ಬೆಲೆ 18,999 ಮಾತ್ರ.
ಇದು 13 ಮೆಗಾಪಿಕ್ಸೆಲ್ ತಿರುಗಿಸಬಹುದಾದ ಕ್ಯಾಮರಾ ಹೊಂದಿರುವುದು ವಿಶೇಷ. ಈ ಕಾರಣಕ್ಕಾಗಿಯೇ ಈ ಮೊಬೈಲ್‌ಗೆ ಮುಂಬದಿ ಕ್ಯಾಮರಾ ನೀಡಲಾಗಿಲ್ಲ.
ಭಾರತೀಯ ಮಾರುಕಟ್ಟೆಯಲ್ಲಿ ದರ ಅತ್ಯಂತ ಗಮನಾರ್ಹ ಪಾತ್ರ ವಹಿಸಲಿದ್ದು, ಜ್ಯೋನಿ ಕಂಪನಿ ಅದನ್ನು ಆರಂಭದಲ್ಲಿಯೇ ಅರ್ಥಮಾಡಿಕೊಂಡಂತೆ ಕಾಣುತ್ತಿದೆ. ಅದಕ್ಕಾಗಿಯೇ ಹೆಚ್ಚು ಮತ್ತು ಕಡಿಮೆ ದರದ ಫೋನ್‌ಗಳನ್ನು ಒಟ್ಟಿಗೆ ಮಾರುಕಟ್ಟೆಗೆ ಪರಿಚಯಿಸಿದೆ.
-ವಿನಾಯಕ ಭಟ್ಟ ಮೂರೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


