'ವಂದೇ ಮಾತರಂ ರೀತಿ ದೇಶವನ್ನು ತುಂಡರಿಸಿದ್ದಾರೆ; ಕಾಂಗ್ರೆಸ್ ಸರ್ಕಾರದಿಂದ ತುಷ್ಟೀಕರಣ ರಾಜಕಾರಣ; ಬಡವರಿಗೆ 5 ಕೆಜಿ ಅಕ್ಕಿ ಕೊಡ್ತಿರೋದು ಮೋದಿ'
ಹಿಂದೆ ವಂದೇ ಮಾತರಂ ಗೀತೆ ತುಂಡರಿಸಿ ದೇಶವನ್ನು ತುಂಡರಿಸಿದ್ದಾರೆ. ಈಗಲೂ ಅದನ್ನೇ ಮಾಡಲು ಹೊರಟಿದ್ದಾರೆ. ಆದರೆ, 2028ರ ಚುನಾವಣೆಯಲ್ಲಿ ಜನ ನಿಮ್ಮ ಆಡಳಿತವನ್ನೇ ಕತ್ತರಿಸಿ ಹಾಕುತ್ತಾರೆ .

ಬಳ್ಳಾರಿ: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿದ ವಂದೇ ಮಾತರಂ ಹಾಡನ್ನು ಮೊಟಕುಗೊಳಿಸುವ ಕೆಲಸವನ್ನು ಡಿ.ಕೆ. ಶಿವಕುಮಾರ್ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಹಾಡಿಗೆ ಕತ್ತರಿ ಹಾಕಲಾಗುತ್ತಿದೆಯೇ? ನಿಮ್ಮ ದೇಶಪ್ರೇಮ ಎಲ್ಲಿದೆ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಪ್ರಶ್ನಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು,ಈ ಸರ್ಕಾರವನ್ನು ಕಿತ್ತೊಗೆಯಲು “ವಂದೇ ಮಾತರಂ” ವಿಚಾರವೂ ಒಂದು ಕಾರಣವಾಗಲಿದೆ’ ಎಂದು ಹೇಳಿದರು. ವಂದೇ ಮಾತರಂ ಗೀತೆಯ ಸಂಪೂರ್ಣ ಆರು ನುಡಿ ಹೇಳಲು ಒಮರ್ ಅಬ್ದುಲ್ಲಾ ಸರ್ಕಾರ ಸಿದ್ಧವಿದ್ದರೆ, ರಾಹುಲ್ ಗಾಂಧಿ ವಿರೋಧಿಸುತ್ತಿದ್ದಾರೆ. ಇದರಲ್ಲೂ ಇವರ ತುಷ್ಟೀಕರಣ ನೀತಿ ತೂರಿಸುತ್ತಿದ್ದಾರೆ ಎಂದು ಆರೋಪಿಸಿದರು ಜೋಶಿ.
ಹಿಂದೆ ವಂದೇ ಮಾತರಂ ಗೀತೆ ತುಂಡರಿಸಿ ದೇಶವನ್ನು ತುಂಡರಿಸಿದ್ದಾರೆ. ಈಗಲೂ ಅದನ್ನೇ ಮಾಡಲು ಹೊರಟಿದ್ದಾರೆ. ಆದರೆ, 2028ರ ಚುನಾವಣೆಯಲ್ಲಿ ಜನ ನಿಮ್ಮ ಆಡಳಿತವನ್ನೇ ಕತ್ತರಿಸಿ ಹಾಕುತ್ತಾರೆ ಎಂದ ಜೋಶಿ ಅವರು, ರೇವಂತ ರೆಡ್ಡಿ, ರಾಯರೆಡ್ಡಿ ಅವರು ಕಾಂಗ್ರೆಸ್ ಪಕ್ಷ ಮುಸ್ಲಿಂರಿಂದ ಮುಸ್ಲಿಂರಿಗಾಗೇ ಇರೋ ಪಕ್ಷ ಎನ್ನುವುದನ್ನು ಸಾರಿ ಹೇಳಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಹಳ್ಳಿಹಳ್ಳಿಯಲ್ಲೂ ಮಾದಕ ವಸ್ತುಗಳ ಹಾವಳಿ ಇದೆ ಎಂದು ಆರೋಪಿಸಿದ ಅವರು, ‘ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಬೆಳೆಯುತ್ತಿದೆ. ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ಶಾಸಕರ ಕ್ಷೇತ್ರಗಳಿಗೆ ಸಮರ್ಪಕ ಅನುದಾನ ನೀಡಿಲ್ಲ. ರಾಜ್ಯದ 224 ಕ್ಷೇತ್ರಗಳ ಶಾಸಕರಿಗೆ ಕನಿಷ್ಠ ₹200 ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
ಮುಖ್ಯುಮಂತ್ರಿ ಡಿ.ಕೆ. ಶಿವಕುಮಾರ್ ನೂರು ದಿನ ಆಡಳಿತದ ಸಂಭ್ರಮದಲ್ಲಿದ್ದಾರೆ. ಆದರೆ, ತಮ್ಮ ನಾಯಕ ರಾಹುಲ್ ಗಾಂಧಿ ತುಷ್ಟೀಕರಣದ ಪರಮಾವಧಿಯಿಂದಾಗಿ ನೂರನೇ ಚುನಾವಣೆ ಸೋಲುವವರಿದ್ದಾರೆ ಎಂದು ಚಾಟಿ ಬೀಸಿದರು. ಎಸ್ಸಿ, ಎಸ್ಟಿ ಸಮುದಾಯದವರ ಮೇಲೆ ಅಷ್ಟೊಂದು ಕಾಳಜಿ ಇದ್ದಿದ್ದರೆ ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಬೇಕಿತ್ತು. ಆದರೆ, ವೈಯಕ್ತಿಕ ದ್ವೇಷದ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಇದನ್ನು ಮಾಡಲಿಲ್ಲ. ರಾಜಣ್ಣ ಸಹ ಅದೇ ಸಮಾಜದವರಲ್ಲವೇ? ಎಂದು ಜೋಶಿ ಪ್ರಶ್ನಿಸಿದರು.
ಯುಪಿಎ ಕಾಲದಲ್ಲಿ ಸತತ ಭ್ರಷ್ಟಾಚಾರ, ಹಗರಣ ಮಾಡಿಕೊಂಡೇ ಬಂದವರು ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಸ್ವತಃ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬೇಲ್ ಮೇಲಿದ್ದಾರೆ. ಸತತವಾಗಿ ಸೋತ ರಾಹುಲ್ ಅಂಕಲ್, 25 ವರ್ಷಗಳಿಂದ ನಿರಂತರವಾಗಿ ಗೆಲ್ಲುತ್ತಾ ಬಂದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಜೋಶಿ ಕಿಡಿಕಾರಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನ ಕೊಟ್ಟರು. ಆದರೆ, ಕಾಂಗ್ರೆಸ್ ಸರ್ಕಾರ ಅವನ್ನೆಲ್ಲ ಇನ್ನಿಲ್ಲದಂತೆ ಮಾಡಿದೆ. ವಿಧವೆಯರ ಹಣ ಸಹ ಬಿಟ್ಟಿಲ್ಲ. ಅದನ್ನೂ ತಿನ್ನುತ್ತಿದ್ದಾರೆ. ಜನಕ್ಕೆ ಅನ್ನಭಾಗ್ಯ 10 ಕೆಜಿ ಕೊಡುತ್ತೇವೆಂದರು. ಆದರೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ 5 ಕೆಜಿ ಅಕ್ಕಿ ಕೊಡುತ್ತಿದೆಯೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ಜೋಶಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



