ರಾಜಕೀಯ

ಸ್ಟಿಂಗ್‌ ಆಪರೇಷನ್‌ ಕೇಸ್ ನಲ್ಲಿ ನನ್ನನ್ನು ಸಿಲುಕಿಸುವ ಸಂಚು; ನನ್ನನ್ನ ರೇವಣ್ಣನಂತೆ ಜೈಲಿಗೆ ಕಳುಹಿಸಲು ಸಾಧ್ಯವೇ?: ಕುಮಾರಸ್ವಾಮಿ; Video

ಎಚ್‌.ಡಿ. ಕುಮಾರಸ್ವಾಮಿ, ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್‌ ಆಪರೇಷನ್‌ ವಿವಾದ, ತನಿಖೆಯ ಬೆಳವಣಿಗೆಗಳು ಹಾಗೂ ವಿವಿಧ ಇಲಾಖೆಗಳಲ್ಲಿನ ಅಕ್ರಮಗಳ ಕುರಿತು ಮಾಹಿತಿ ನೀಡಿದರು.

ಸ್ಟಿಂಗ್‌ ಆಪರೇಷನ್‌ ಕೇಸ್ ನಲ್ಲಿ ನನ್ನನ್ನು ಸಿಲುಕಿಸುವ ಸಂಚು; ನನ್ನನ್ನ ರೇವಣ್ಣನಂತೆ ಜೈಲಿಗೆ ಕಳುಹಿಸಲು ಸಾಧ್ಯವೇ?: ಕುಮಾರಸ್ವಾಮಿ; Video
ಎಚ್ ಡಿ ಕುಮಾರಸ್ವಾಮಿ
Published On :

ಬೆಂಗಳೂರು: ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ನನ್ನನ್ನೂ ಸಿಲುಕಿಸುವ ಸಂಚು ರೂಪಿಸಲಾಗಿತ್ತು. ಸ್ಟಿಂಗ್‌ ಆಪರೇಷನ್‌ನ ಮೂಲ ವ್ಯಕ್ತಿಯನ್ನ ಕರೆಸಿ, ಅವರಿಂದ ನ್ಯಾಯಾಲಯದಲ್ಲಿ 164ರ ಅಡಿಯಲ್ಲಿ ಹೇಳಿಕೆ ಕೊಡಿಸಿ, ನನ್ನನ್ನೂ ಕೇಸಲ್ಲಿ ಫಿಕ್ಸ್‌ ಮಾಡೋ ಪ್ಲ್ಯಾನ್‌ ನಡೆದಿತ್ತು ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್‌ ಆಪರೇಷನ್‌ ವಿವಾದ, ತನಿಖೆಯ ಬೆಳವಣಿಗೆಗಳು ಹಾಗೂ ವಿವಿಧ ಇಲಾಖೆಗಳಲ್ಲಿನ ಅಕ್ರಮಗಳ ಕುರಿತು ಮಾಹಿತಿ ನೀಡಿದರು.

ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳ ಬಗ್ಗೆ ಈ ಹಿಂದೆಯೇ ಮಾತನಾಡಿದ್ದೆ. ವಿಜಯದಶಮಿಯ ಸಂದರ್ಭದಲ್ಲಿ ಯುದ್ಧಕ್ಕೆ ಹೋಗುವ ಸಮಯ ಬಂದಿದೆ ಎಂದು ಹೇಳಿದ್ದೆ. ತಾಯಿ ಚಾಮುಂಡೇಶ್ವರಿ ಮಹಿಷಾಸುರನ ಮರ್ಧನ ಮಾಡಿದಂತೆ, ಅನ್ಯಾಯದ ವಿರುದ್ಧ ಹೋರಾಡುವ ಕೆಲಸವೂ ನಡೆಯಬೇಕಿದೆ ಎಂದು ಹೇಳಿದರು.

ಸ್ಟಿಂಗ್‌ ಆಪರೇಷನ್‌ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ತಾವು ಸ್ಟೇ ಪಡೆಯಲು ಹೋಗಬೇಡಿ, ಧೈರ್ಯವಾಗಿ ಎದುರಿಸಿ ಅಂತ ಹೇಳಿದ್ದೆ. ಇತ್ತೀಚೆಗೆ ಸಿಎಂ ಆದೇಶದ ಮೇರೆಗೆ ಗೃಹ ಸಚಿವರು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಸ್ಟಿಂಗ್‌ ಆಪರೇಷನ್‌ ಮೂಲ ವ್ಯಕ್ತಿಯಿಂದ ಹೇಳಿಕೆ ಪಡೆದು ನನ್ನನ್ನೂ ಈ ಕೇಸಲ್ಲಿ ಫಿಕ್ಸ್‌ ಮಾಡೋ ಪ್ಲ್ಯಾನ್‌ ನಡೆದಿತ್ತು ಎಂದರಲ್ಲದೇ, ನಾನೇನ್‌ ರೇವಣ್ಣನಾ? ಅವರಂತೆ ನನ್ನನ್ನ ಜೈಲಿಗೆ ಕಳುಹಿಸಲು ಸಾಧ್ಯವೇ? ಎಂದು ಕುಟುಕಿದರು.

ಕೆಪಿಎಸ್‌ಸಿ ಅಕ್ರಮದ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ಜಾರಿ ನಿರ್ದೇಶನಾಲಯ (ಇಡಿ) ಆರಂಭದಲ್ಲೇ ಮಧ್ಯಪ್ರವೇಶಿಸದಿದ್ದರೆ ಪ್ರಕರಣವನ್ನ ಮುಚ್ಚಿಹಾಕಲಾಗುತ್ತಿತ್ತು. ಇಡಿ ತನಿಖೆಯಿಂದ ಅಕ್ರಮ ಬಹಿರಂಗವಾಗಿವೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಅಕ್ರಮಗಳ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ದಾಖಲೆಗಳನ್ನ ನೀಡಲಾಗಿತ್ತು. ಆದರೆ, ಈವರೆಗೂ ಸಮರ್ಪಕ ಉತ್ತರ ಬಂದಿಲ್ಲ ಎಂದು ದೂರಿದರು.

ಸ್ಟಿಂಗ್‌ ಆಪರೇಷನ್‌ ವಿಚಾರ ಆರಂಭಿಸಿದ್ದು ನಾನಾ? ಈ ವಿಷಯ ಸಂಪುಟದಲ್ಲಿ ಚರ್ಚೆಯಾಗಿತ್ತು. ಸಂಪುಟದ ಚರ್ಚೆಗಳು ರಹಸ್ಯವಾಗಿರಬೇಕಾದ ಸಂದರ್ಭದಲ್ಲಿ ಅದರ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಹೇಗೆ? ಮುಖ್ಯಮಂತ್ರಿಗಳು ಸ್ಟಿಂಗ್‌ ಆಪರೇಷನ್‌ ಫೈಲ್‌ನ ಸಂಪುಟಕ್ಕೆ ತೆಗೆದುಕೊಂಡು ಹೋಗಿದ್ದೇಕೆ? ಈ ಬೆಳವಣಿಗೆಯಿಂದಲೇ ವಿವಾದ ಶುರುವಾಯ್ತು ಎಂದು ಆರೋಪಿಸಿದ್ರು.

ನಾನು ನೈಸ್‌ ಅಕ್ರಮಗಳ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಲು ಸುದ್ದಿಗೋಷ್ಠಿ ಕರೆದಿದ್ದೆ. ಆ ಟೈಮಲ್ಲಿ ಸ್ಟಿಂಗ್‌ ಆಪರೇಷನ್‌ ಕುರಿತ ಸುದ್ದಿ ಹೊರಬಂದಿದ್ದೇಕೆ? ನೈಸ್‌ ಅಕ್ರಮದ ವಿಚಾರ ಜನರ ಮುಂದೆ ಹೋಗಬಾರದು ಎಂಬ ಉದ್ದೇಶದಿಂದಲೇ ಸ್ಟಿಂಗ್‌ ಆಪರೇಷನ್‌ ಕುರಿತ ಸುದ್ದಿ ಹರಿಬಿಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರ ನೀಡಬೇಕು. ಸ್ಟಿಂಗ್‌ ಆಪರೇಷನ್‌ ವಿಚಾರವಾಗಿ ನಾನು ಈಗಾಗಲೇ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದೇನೆ. ನೈಸ್‌ ವಿಚಾರದಲ್ಲಿ ನಡೆದ ಬೆಳವಣಿಗೆಗಳ ಕುರಿತು ಸಾರ್ವಜನಿಕರಿಗೆ ಸ್ಪಷ್ಟನೆ ಸಿಗಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಗೆ ನೇರ ಪ್ರಶ್ನೆಗಳನ್ನು ಕೇಳಿದ ಕುಮಾರಸ್ವಾಮಿ, ಶಾಂಗ್ರಿಲ್ಲಾ ಹೋಟೆಲ್‌ನಲ್ಲಿ ಯಾರನ್ನ ಭೇಟಿಯಾಗಿದ್ದಿರಿ? ಆ ಭೇಟಿಯ ಉದ್ದೇಶವೇನು? ಆ ಭೇಟಿಗೆ ಎರಡು ದಿನಗಳ ಮೊದಲು ಸಂಬಂಧಪಟ್ಟ ವ್ಯಕ್ತಿಯನ್ನ ಮುಖ್ಯಮಂತ್ರಿ ತಮ್ಮ ಮನೆಗೆ ಕರೆಸಿಕೊಂಡಿದ್ದರು. ಬಳಿಕ ನೈಸ್‌ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಯ ಸಂದರ್ಶನವನ್ನ ಅದೇ ಸುದ್ದಿವಾಹಿನಿಯಲ್ಲಿ ಪ್ರಸಾರ ಮಾಡಲಾಯಿತು. ಆ ವ್ಯಕ್ತಿ 16 ಗಂಟೆಗಳ ಕಾಲ ಇರುವ ಸ್ಥಳದಲ್ಲೇ ಸಂದರ್ಶನ ನಡೆಸಿದ್ದೇಕೆ? ನೈಸ್‌ ವ್ಯಕ್ತಿ ಮುಖ್ಯಮಂತ್ರಿ ಮನೆಗೂ ಭೇಟಿ ನೀಡಿದ್ದರು ಎಂದು ಹೇಳಿದರು.

2024ರ ಆಗಸ್ಟ್‌ 2ರಂದು ನಡೆದ ಬೆಳವಣಿಗೆಗಳನ್ನ ಉಲ್ಲೇಖಿಸಿದ ಕುಮಾರಸ್ವಾಮಿ, ಈ ಸ್ಟಿಂಗ್‌ ಆಪರೇಷನ್‌ ಬಗ್ಗೆ ರಮೇಶ್‌ ಜಾರಕಿಹೊಳಿ ಮೊದಲೇ ಎಚ್ಚರಿಸಿದ್ದರು. ಪ್ರಜ್ವಲ್‌ ರೇವಣ್ಣ ನಂತೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್‌ ಅವರಿಗೆ ಸಂಬಂಧಿಸಿದ ವಿಡಿಯೋಗಳು ಹೊರಬರಬಹುದು ಎಂಬ ಎಚ್ಚರಿಕೆಯನ್ನ ರಮೇಶ್‌ ಜಾರಕಿಹೊಳಿ ನೀಡಿದ್ದರು. ವಿಡಿಯೋ ಪ್ರಕರಣಕ್ಕೆ ಅಂತ್ಯ ಹಾಡುವಂತೆ ನಾಯಕರಿಗೆ ಎಚ್ಚರಿಕೆ ನೀಡಲಾಗಿತ್ತು ಎಂಬ ಅಂಶವನ್ನೂ ಉಲ್ಲೇಖಿಸಿದರು.

ತಮ್ಮನ್ನ ಬ್ರೈನ್‌ ಮ್ಯಾಪಿಂಗ್‌ ಮಾಡಬೇಕು ಎಂಬ ಮಾತುಗಳಿಗೂ ಕುಮಾರಸ್ವಾಮಿ ತಿರುಗೇಟು ನೀಡಿದರು. ನಾನು ಮಲಗಲು ಹೋದರೆ ಎರಡು ನಿಮಿಷದಲ್ಲಿ ನಿದ್ರೆ ಬರುತ್ತೆ. ನಿದ್ರೆ ಕೆಡಿಸಿಕೊಳ್ಳುತ್ತಿರುವವರು ನೀವು. ಇಡಿ, ಐಟಿ ಬರುತ್ತದೆ ಎಂಬ ಆತಂಕದಲ್ಲಿ ನೀವು ನಿದ್ರೆ ಕಳೆದುಕೊಳ್ಳುತ್ತಿದ್ದೀರಿ ಎಂದು ಕುಟುಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.