ಸ್ಟಿಂಗ್ ಆಪರೇಷನ್ ರೂವಾರಿ, ರೌಡಿಶೀಟರ್ ಫೋಟೋ ರಿಲೀಸ್ ಮಾಡಿದ ಕುಮಾರಸ್ವಾಮಿ!
ಜೆಡಿಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿ ಆಗಮಿಸಿದ ಕುಮಾರಸ್ವಾಮಿ, ಬಾಗೇಪಲ್ಲಿ ಮೂಲದ ಪ್ರಶಾಂತ್ ಫೋಟೋವನ್ನು ಬಿಡುಗಡೆ ಮಾಡಿದರು.

ಬೆಂಗಳೂರು: ರಾಜ್ಯದಲ್ಲಿ ‘ಸ್ಟಿಂಗ್ ಆಪರೇಷನ್’ ವಿವಾದ ತಾರಕಕ್ಕೇರಿರುವಂತೆಯೇ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್ಡಿ ಕುಮಾರಸ್ವಾಮಿ ಇದೀಗ ಸ್ಟಿಂಗ್ ಆಪರೇಷನ್ ಮಾಡಿದ ವ್ಯಕ್ತಿಯ ಫೋಟೋವನ್ನು ರಿಲೀಸ್ ಮಾಡಿದ್ದಾರೆ.
ಜೆಡಿಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿ ಆಗಮಿಸಿದ ಕುಮಾರಸ್ವಾಮಿ, ಬಾಗೇಪಲ್ಲಿ ಮೂಲದ ಪ್ರಶಾಂತ್ ಫೋಟೋವನ್ನು ಬಿಡುಗಡೆ ಮಾಡಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆಗಿರುವ ರೌಡಿಶೀಟರ್ ಫೋಟೋ ಬಿಡುಗಡೆ ಮಾಡಿದ ಕುಮಾರಸ್ವಾಮಿ, ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸುರ್ಜೇವಾಲಾ ಜೊತೆ ರೌಡಿಶೀಟರ್ ಪ್ರಶಾಂತ್ ಆತ್ಮೀಯವಾಗಿ ತಬ್ಬಿಕೊಂಡು ನಿಂತಿದ್ದಾನೆ ನೋಡಿ. ಈತನನ್ನು ವಶಕ್ಕೆ ಪಡೆದು, ಬೆದರಿಸಿ ನನ್ನ ಹೆಸರನ್ನು ಹೇಳಿಸಲು ಸಂಚು ರೂಪಿಸಿದ್ದಾರೆ. ಅಸಲಿ ‘420’ಗಳು ವಿಧಾನಸೌಧದಲ್ಲಿ ಕುಳಿತಿದ್ದಾರೆ. ನನ್ನ ಹಾಗೂ ನನ್ನ ಕಾರ್ಯಕರ್ತರ ತನಿಖೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಅಧಿಕಾರ ಇದೆ ಎಂದು ಯಾರ ಕುಟುಂಬವನ್ನಾದರೂ ಹಾಳು ಮಾಡುತ್ತೀರಾ? ಮೊದಲು ಗೃಹ ಸಚಿವರು ತಮ್ಮ ನಾಲಿಗೆಗೆ ಲಗಾಮು ಹಾಕಿಕೊಂಡು ಮಾತನಾಡಲಿ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಮೆಟ್ಟಿಲುಗಳ ಮೇಲೆಯೇ ಕುಳಿತು ಸ್ವಲ್ಪ ಕಾಲ ಧರಣಿ ನಡೆಸಿದ ಕುಮಾರಸ್ವಾಮಿ, ತನಿಖೆ ಮಾಡುವುದಿದ್ದರೆ ನನ್ನಿಂದಲೇ ಶುರುಮಾಡಿ.“ನಮ್ಮ ಕಾರ್ಯಕರ್ತರ ಮೇಲೇಕೆ ಪ್ರಹಾರ? ನಾನು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೂ ಸಿದ್ಧನಿದ್ದೇನೆ. ಅಧಿಕಾರಿಗಳ ಬಗ್ಗೆ ನನಗೆ ಗೌರವವಿದೆ,ಆದರೆ ಸರ್ಕಾರದ ಒತ್ತಡಕ್ಕೆ ನೀವು ಸಿಲುಕಿದ್ದೀರಿ. ಗೃಹ ಸಚಿವರೇ ಇಲ್ಲಿಗೆ ಬಂದು ಸಮಜಾಯಿಷಿ ನೀಡಲಿ, ಅಲ್ಲಿಯವರೆಗೂ ಎದ್ದೇಳಲ್ಲ. ಇಷ್ಟೆಲ್ಲ ಆಗುತ್ತಿದ್ದರೂ ಸಿದ್ದರಾಮಯ್ಯ ಯಾಕೆ ಮೌನವಾಗಿದ್ದಾರೆ? ಅವರನ್ನೇ ಮೌನವಾಗಿರುವಂತೆ ಮಾಡಲಾಗಿದೆಯೇ? ಎಂದು ಆಕ್ರೋಶ ಹೊರಹಾಕಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ, ಕೇವಲ ಕಮಿಷನರ್ ಅವರ ಮನವಿಗೆ ಗೌರವ ಕೊಟ್ಟು ಧರಣಿ ನಿಲ್ಲಿಸಿದ್ದೇನೆ. ಮಾಧ್ಯಮದ ಹೆಸರನ್ನು ದುರುಪಯೋಗಪಡಿಸಿಕೊಂಡ ಮುಖ್ಯ ಆರೋಪಿಯನ್ನು ತಕ್ಷಣ ಬಂಧಿಸಬೇಕು. ಸಿಎಂ ಜೊತೆಗೂಡಿ ಆತ ಏನೇನು ಮಾಡಿದ್ದಾನೆ ಎಂಬುದು ಹೊರಬರಬೇಕು ಎಂದು ಒತ್ತಾಯಿಸಿದರು.
ಪೊಲೀಸರಿಗೆ ಎರಡು ದಿನಗಳ ಗಡುವು ನೀಡುತ್ತಿದ್ದೇನೆ. ಅಷ್ಟರಲ್ಲಿ ಪ್ರಮುಖ ಆರೋಪಿ ಅರೆಸ್ಟ್ ಆಗದಿದ್ದರೆ ಎಲ್ಲಾ ಶಾಸಕರ ಸಭೆ ಕರೆದು ರಾಜ್ಯವ್ಯಾಪಿ ಬೃಹತ್ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು. ಜೊತೆಗೆ, ನಾಳೆ ಕೆಪಿಎಸ್ಸಿ ಆಕಾಂಕ್ಷಿಗಳೊಂದಿಗೆ ಸುದೀರ್ಘ ಸಂವಾದ ನಡೆಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



