ರಾಜಕೀಯ

ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದಂತಿದೆ; 'ಬೆಂಗಳೂರು ಜಾತ್ರೆ' ಯಾರು ಕೇಳಿದ್ರು ಸ್ವಾಮಿ..?

ಬರಗೆಟ್ಟ ಆಡಳಿತ ನಡೆಸುತ್ತಿರುವ ಸರ್ಕಾರ, ಟೀಕೆಗೆ ಗುರಿಯಾಗಿರುವ ತನ್ನ ನೂರು ದಿನಗಳ ಕಾರ್ಯಕ್ಕೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದೆ. ಇದೀಗ ಬೆಂಗಳೂರು ಜಾತ್ರೆ ಹೆಸರಿನಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಲು ಹೊರಟಿದೆ.

ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದಂತಿದೆ; 'ಬೆಂಗಳೂರು ಜಾತ್ರೆ' ಯಾರು ಕೇಳಿದ್ರು ಸ್ವಾಮಿ..?
ಸಿಎಂ ಡಿಕೆ.ಶಿವಕುಮಾರ್
Published On :

ಬೆಂಗಳೂರು: ರಾಜ್ಯದಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ, ರಸ್ತೆ ಗುಂಡಿಗಳು, ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿರುವಾಗ 200 ಕೋಟಿ ರೂ. ವೆಚ್ಚದಲ್ಲಿ ‘ಬೆಂಗಳೂರು ಜಾತ್ರೆ’ ಆಯೋಜಿಸಲು ಸರ್ಕಾರ ಮುಂದಾಗಿರುವುದನ್ನು ಜೆಡಿಎಸ್ ತೀವ್ರವಾಗಿ ಟೀಕಿಸಿದೆ.

ಈ ಕುರಿತು ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

“ರೋಮ್ ಹೊತ್ತಿ ಉರಿಯುವಾಗ ದೊರೆ ನೀರೋ ಅರಮನೆಯಲ್ಲಿ ಕೂತು ಪಿಟೀಲು ಬಾರಿಸಿದಂತಿದೆ” ಎಂದು ವ್ಯಂಗ್ಯವಾಡಿದೆ.

ಬರಗೆಟ್ಟ ಆಡಳಿತ ನಡೆಸುತ್ತಿರುವ ಸರ್ಕಾರ, ಟೀಕೆಗೆ ಗುರಿಯಾಗಿರುವ ತನ್ನ ನೂರು ದಿನಗಳ ಕಾರ್ಯಕ್ಕೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದೆ. ಇದೀಗ ಬೆಂಗಳೂರು ಜಾತ್ರೆ ಹೆಸರಿನಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಲು ಹೊರಟಿದೆ.

ಬೆಂಗಳೂರಿನ ರಸ್ತೆ ಗುಂಡಿಗಳಿಂದಾಗಿ ನಿತ್ಯವೂ ವಾಹನ ಸವಾರರಿಗೆ ‘ರೋಲರ್ ಕೋಸ್ಟರ್’ ಅನುಭವವಾಗುತ್ತಿದೆ. ಸಂಚಾರ ದಟ್ಟಣೆಯಲ್ಲಿ ವಾಹನಗಳ ಹಾರ್ನ್‌ಗಳೇ ಸಂಗೀತದಂತೆ ಕೇಳಿಸುತ್ತಿವೆ. ಇಷ್ಟೆಲ್ಲ ‘ಉಚಿತವಾಗಿ’ ಸಿಗುತ್ತಿರುವಾಗ ಮತ್ತೆ ರೂ. 200 ಕೋಟಿ ಸುರಿದು ‘ಬೆಂಗಳೂರು ಜಾತ್ರೆ’ ಆಯೋಜಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದೆ.

ರಸ್ತೆ, ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಜೆಡಿಎಸ್, ಬಿಡಿಎ, ಬೆಸ್ಕಾಂ, ಜಲಮಂಡಳಿ ಹಾಗೂ ಮೆಟ್ರೋ ಸೇರಿದಂತೆ ವಿವಿಧ ಸಂಸ್ಥೆಗಳ ಹಣವನ್ನು ಜಾತ್ರೆಗೆ ಬಳಸಲು ಮುಂದಾಗಿರುವುದು ವಿಪರ್ಯಾಸ ಎಂದು ಹೇಳಿದೆ.

ಇದೇ ವೇಳೆ ರಾಜ್ಯದ ರೈತರ ಸಂಕಷ್ಟವನ್ನೂ ಜೆಡಿಎಸ್ ಪ್ರಸ್ತಾಪಿಸಿದೆ. ಮಳೆ ಹಾಗೂ ಬೆಳೆ ಕೊರತೆಯಿಂದ ಅನ್ನದಾತ ಸಾಲದ ಸುಳಿಯಲ್ಲಿ ಸಿಲುಕಿ ಕಣ್ಣೀರು ಹಾಕುತ್ತಿರುವಾಗ ಸರ್ಕಾರ ಆಡಂಬರದ ಕಾರ್ಯಕ್ರಮಗಳಿಗೆ ಹಣ ಖರ್ಚು ಮಾಡುವ ಬದಲು ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಬೇಕು ಎಂದು ಆಗ್ರಹಿಸಿದೆ.

ರೈತರ ಹೊಟ್ಟೆ ತಣ್ಣಗಿದ್ದರೆ ಮಾತ್ರ ನಾಡಿನಲ್ಲಿ ಕಲೆ, ಸಾಹಿತ್ಯ, ಹಬ್ಬ, ಜಾತ್ರೆ ಎಲ್ಲವೂ ನಡೆಯಲು ಸಾಧ್ಯ. ಸರ್ಕಾರಕ್ಕೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದರೆ ಆಡಂಬರದ ಜಾತ್ರೆಗಳನ್ನು ಬಿಟ್ಟು, ಅದರ ಸಂಪೂರ್ಣ ಮೊತ್ತವನ್ನು ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣವೇ ನೀಡಬೇಕು. ರೈತರು ಬದುಕಿದರೆ ಮಾತ್ರ ರಾಜ್ಯ ಉಳಿಯುತ್ತದೆ. ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದ ಕಥೆ ನಮಗೆ ಬೇಡ” ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.