ರಾಜಕೀಯ

ಪಿಂಚಣಿ ಕೊಡುವ ಯೋಗ್ಯತೆ ಇಲ್ಲ, ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ..?: ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ

ರಾಜ್ಯದ ಖಜಾನೆ ಖಾಲಿಯಾಗಿದ್ದು, ಹಿರಿಯ ನಾಗರಿಕರು, ವಿಧವೆಯರು, ಅನಾಥರು ಹಾಗೂ ತೃತೀಯಲಿಂಗಿಗಳಿಗೆ ನೀಡಬೇಕಾದ ಪಿಂಚಣಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ.

ಪಿಂಚಣಿ ಕೊಡುವ ಯೋಗ್ಯತೆ ಇಲ್ಲ, ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ..?: ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ
ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯದ ಹಿರಿಯ ನಾಗರಿಕರಿಗೆ ಪಿಂಚಣಿ ಕೊಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್‌‍ ಸರ್ಕಾರ, ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಕಾಂಗ್ರೆಸ್ ಸರ್ಕಾರ ತುಮಕೂರಿನಲ್ಲಿ ಮೇ 20ರಂದು ಬೃಹತ್ ಸಮಾವೇಶ ಆಯೋಜಿಸಿದೆ ಎಂದು ಆರೋಪಿಸಿದರು.

ರಾಜ್ಯದ ಖಜಾನೆ ಖಾಲಿಯಾಗಿದ್ದು, ಹಿರಿಯ ನಾಗರಿಕರು, ವಿಧವೆಯರು, ಅನಾಥರು ಹಾಗೂ ತೃತೀಯಲಿಂಗಿಗಳಿಗೆ ನೀಡಬೇಕಾದ ಪಿಂಚಣಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ ಹಾಗೂ ತೃತೀಯಲಿಂಗಿ ಅಲ್ಪಸಂಖ್ಯಾತರಿಗೆ ನೀಡುವ ಸಹಾಯಧನ ಬಾಕಿಯಾಗಿದೆ.

ರಾಜ್ಯದಲ್ಲಿ ಒಟ್ಟು 81.88 ಲಕ್ಷ ಫಲಾನುಭವಿಗಳಿದ್ದು, ಪ್ರತಿ ತಿಂಗಳು ರೂ.894 ಕೋಟಿ ಅಗತ್ಯವಿದೆ. ಬಜೆಟ್‌ನಲ್ಲಿ ವರ್ಷಕ್ಕೆ ರೂ.10,736 ಕೋಟಿ ಮೀಸಲಿದ್ದರೂ ಆ ಹಣ ಜನರಿಗೆ ತಲುಪಿಲ್ಲ ಎಂದು ಆರೋಪಿಸಿದರು.

ಆ್ಯಸಿಡ್ ದಾಳಿ ಸಂತ್ರಸ್ತರಿಗೆ ತಿಂಗಳಿಗೆ ರೂ.10 ಸಾವಿರ ನೆರವು ನೀಡಲು ನಾನು ಸಚಿವನಾಗಿದ್ದಾಗ ಕ್ರಮ ಕೈಗೊಂಡಿದ್ದೆ. ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ನಿಯಮಿತವಾಗಿ ಬಿಡುಗಡೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ದೇವದಾಸಿಯರಿಗೆ ರೂ.2 ಸಾವಿರ, ಸ್ವಾತಂತ್ರ್ಯ ಹೋರಾಟಗಾರರಿಗೆ ರೂ.10 ಸಾವಿರ ಹಾಗೂ ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದ್ದ ರೂ.10 ಸಾವಿರ ಗೌರವಧನವನ್ನೂ ಸರ್ಕಾರ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಉಳಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶ ಮೂಲದವರು ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ಬೆಂಗಳೂರಿನ ಮಹದೇವಪುರ, ಚಿಕ್ಕಮಗಳೂರು ಹಾಗೂ ಕೊಡಗಿನ ಕಾಫಿ ತೋಟಗಳಲ್ಲಿ ಸಾವಿರಾರು ಬಾಂಗ್ಲಾದೇಶಿಗಳು ನೆಲೆಸಿದ್ದಾರೆ ಎಂದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಬಾಂಗ್ಲಾದೇಶ ಮೂಲದವರು ಮತದಾನ ಮಾಡುವುದನ್ನು ತಡೆಯಬಹುದು. ಪ್ರತಿ ಮತಗಟ್ಟೆಯಲ್ಲೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಏಜೆಂಟ್‌ಗಳು ಇದ್ದಾರೆ. ಹೀಗಾಗಿ ನಿಜವಾದ ಮತದಾರರ ಹೆಸರು ಕೈಬಿಡುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇಂಧನ ದರ ಏರಿಕೆ ಕುರಿತು ಮಾತನಾಡಿದ ಅವರು, “ಯುದ್ಧದಂತಹ ಪರಿಸ್ಥಿತಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ಮಲೇಶಿಯಾದಲ್ಲಿ ಶೇ.71ರಷ್ಟು ಪಾಕಿಸ್ತಾನದಲ್ಲಿ ಶೇ.44ರಷ್ಟು , ಯುಎಇಯಲ್ಲಿ ಶೇ.86ರಷ್ಟು, ಅಮೆರಿಕದಲ್ಲಿ ಶೇ.48ರಷ್ಟು, ಶ್ರೀಲಂಕಾದಲ್ಲಿ ಶೇ.41ರಷ್ಟು ಮತ್ತು ನೇಪಾಳದಲ್ಲಿ ಶೇ.51ರಷ್ಟು ದರ ಏರಿಕೆಯಾಗಿದೆ. ಭಾರತದಲ್ಲಿ ಮಾತ್ರ ಶೇ.3ರಷ್ಟು ಏರಿಕೆಯಾಗಿದೆ ಎಂದು ಸಮರ್ಥಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.