3 ವರ್ಷ ಪೂರೈಸುವ ಮುನ್ನ ದೆಹಲಿಗೆ ಸಿದ್ದರಾಮಯ್ಯ ದೌಡು: ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ..!
ಹೈಕಮಾಂಡ್ ಭೇಟಿ ವೇಳೆ ಸಚಿವ ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಹಾಗೂ ನಿಗಮ-ಮಂಡಳಿ ನೇಮಕಾತಿಗಳ ಕುರಿತು ಮಹತ್ವದ ಚರ್ಚೆಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸುವ ಹೊತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇದು ಸಾಮಾನ್ಯ ಭೇಟಿಯಂತೆ ಕಾಣುತ್ತಿದ್ದರೂ, ಇದರ ಹಿಂದೆ ದೊಡ್ಡ ರಾಜಕೀಯ ಬದಲಾವಣೆಗಳ ಸುಳಿವು ಇದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿವೆ.
ಹೈಕಮಾಂಡ್ ಭೇಟಿ ವೇಳೆ ಸಚಿವ ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಹಾಗೂ ನಿಗಮ-ಮಂಡಳಿ ನೇಮಕಾತಿಗಳ ಕುರಿತು ಮಹತ್ವದ ಚರ್ಚೆಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಉನ್ನತ ನಾಯಕರನ್ನು ಭೇಟಿಯಾಗಿ ರಾಜ್ಯ ರಾಜಕೀಯ ಪರಿಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಇತ್ತೀಚೆಗೆ ಸಚಿವ ಡಿ.ಸುಧಾಕರ್ ಅವರ ನಿಧನದಿಂದ ಖಾಲಿಯಾಗಿರುವ ಸ್ಥಾನ ಸೇರಿದಂತೆ ಈಗಾಗಲೇ ಇರುವ ಎರಡು ಖಾಲಿ ಸ್ಥಾನಗಳು ಸಂಪುಟ ವಿಸ್ತರಣೆಗೆ ತುರ್ತು ಕಾರಣಗಳಾಗಿವೆ. ಆದರೆ, ಕೇವಲ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವುದಷ್ಟೇ ಅಲ್ಲ, ಸಂಪೂರ್ಣ ಸಂಪುಟ ಪುನರ್‌ರಚನೆ ಕುರಿತಂತೆಯೂ ಗಂಭೀರ ಚರ್ಚೆಗಳು ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ ಕಾಂಗ್ರೆಸ್ ಒಳವಲಯದಲ್ಲಿ ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ ಹಾಗೂ ಗುಂಪುಗಾರಿಕೆಯನ್ನು ಸಮತೋಲನಗೊಳಿಸುವ ಒತ್ತಡ ಹೆಚ್ಚಾಗಿದ್ದು, ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಕೂಡ ಬಲವಾಗಿ ಕೇಳಿಬರುತ್ತಿದೆ.
ಇದೇ ವೇಳೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆಯ ನಡೆ ಅನುಸರಿಸುತ್ತಿದೆ.
ನಗರ ಪ್ರದೇಶಗಳಲ್ಲಿ ಪಕ್ಷದೊಳಗಿನ ಅಸಮಾಧಾನ ಮುಂದುವರಿದರೆ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ಪಕ್ಷದ ನಾಯಕರಲ್ಲಿದೆ.
ಇದಲ್ಲದೆ, ನಾಯಕತ್ವ ಬದಲಾವಣೆ ಕೂಡ ಮತ್ತೊಂದು ಮಹತ್ವದ ವಿಚಾರವಾಗಿದ್ದು, ಸರ್ಕಾರ ಮೂರು ವರ್ಷ ಪೂರೈಸುವ ಹೊತ್ತಿನಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಬಹುದೇ ಎಂಬ ಪ್ರಶ್ನೆಯೂ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇದರ ಜೊತೆಗೆ ಸುಮಾರು 80ಕ್ಕೂ ಹೆಚ್ಚು ನಿಗಮ, ಮಂಡಳಿ ಹಾಗೂ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರ ಅವಧಿ ಮುಗಿದಿರುವುದರಿಂದ ಹೊಸ ನೇಮಕಾತಿಗಳಿಗಾಗಿ ಭಾರೀ ಲಾಬಿ ನಡೆಯುತ್ತಿದೆ.
ಈ ನೇಮಕಾತಿಗಳು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸುವುದರ ಜೊತೆಗೆ GBA ಚುನಾವಣೆಗೊ ಮುನ್ನ ಸಂಘಟನೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಬಹುದು ಎಂದು ಕಾಂಗ್ರೆಸ್ ನಾಯಕರು ಲೆಕ್ಕ ಹಾಕಿದ್ದಾರೆ.
ಒತ್ತಡ ಸಾಕಷ್ಟಿದೆ. ನಿಗಮ-ಮಂಡಳಿ ನೇಮಕಾತಿಗಳು ಸ್ಥಳೀಯ ಚುನಾವಣೆಗಳಿಗೆ ಮೊದಲು ಕಾರ್ಯಕರ್ತರನ್ನು ಉತ್ತೇಜಿಸಬಹುದು. ಆದರೆ, ವಿಳಂಬವಾದರೆ, ಹತಾಶೆ ಬೆಳೆಯುವ ಅಪಾಯವೂ ಇದೆ ಎಂದು ಕಾಂಗ್ರೆಸ್ ಕಾರ್ಯಕಾರಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



