ಟಿವಿಕೆ ಉದಯಕ್ಕೆ ದ್ರಾವಿಡ ಪಕ್ಷಗಳ ವೈಫಲ್ಯ ಕಾರಣ: ಬಿಜೆಪಿ ಸಂಸದ ಯದುವೀರ್
ವಿಜಯ್ ಮತ್ತು ಅವರ ಟಿವಿಕೆ ಪಕ್ಷದ ಬೆಳವಣಿಗೆ ಎಲ್ಲರಿಗೂ ಆಶ್ಚರ್ಯ ತಂದಿದೆ. ಆದರೆ, ದ್ರಾವಿಡ ಪಕ್ಷಗಳ ವಿರುದ್ಧ ಜನರು ತೋರಿಸಿರುವ ವಿರೋಧ ನಮಗೆ ಅಚ್ಚರಿ ತಂದಿಲ್ಲ.

ಬೆಂಗಳೂರು: ತಮಿಳುನಾಡಿನಲ್ಲಿ ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಅವರ ರಾಜಕೀಯ ಬೆಳವಣಿಗೆ ದ್ರಾವಿಡ ರಾಜಕೀಯದ ವಿರುದ್ಧ ಜನರಲ್ಲಿ ಉಂಟಾದ ಅಸಮಾಧಾನದ ಪ್ರತಿಫಲ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೇಳಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿಜಯ್ ಮತ್ತು ಅವರ ಟಿವಿಕೆ ಪಕ್ಷದ ಬೆಳವಣಿಗೆ ಎಲ್ಲರಿಗೂ ಆಶ್ಚರ್ಯ ತಂದಿದೆ. ಆದರೆ, ದ್ರಾವಿಡ ಪಕ್ಷಗಳ ವಿರುದ್ಧ ಜನರು ತೋರಿಸಿರುವ ವಿರೋಧ ನಮಗೆ ಅಚ್ಚರಿ ತಂದಿಲ್ಲ. ಒಡಕು ರಾಜಕೀಯ, ದುರ್ಬಲ ಆರ್ಥಿಕ ನಿರ್ವಹಣೆ ಹಾಗೂ ರಾಜ್ಯದ ಮೇಲೆ ಹೆಚ್ಚುವರಿ ಹೊರೆ ಹಾಕಿದ ನೀತಿಗಳ ವಿರುದ್ಧ ಜನರು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಿದರು.
“ದ್ರಾವಿಡ ಪಕ್ಷಗಳಿಗಿಂತ ಹೆಚ್ಚಿನ ಜನಾದೇಶ ವಿಜಯ್ ಅವರಿಗೆ ದೊರೆತಿರುವುದು ಭಾರತದೆಲ್ಲೆಡೆ ರಾಜಕೀಯವಾಗಿ ಅಧ್ಯಯನ ಮಾಡಬೇಕಾದ ವಿಷಯವಾಗಿದೆ. ತಮಿಳುನಾಡಿನಲ್ಲಿ ಈ ರೀತಿಯ ರಾಜಕೀಯ ಬದಲಾವಣೆ ಈ ಮೊದಲು ಕೂಡ ನಡೆದಿತ್ತು.
ಹಿಂದೆ ಎಂಜಿಆರ್ ಅವರ ಕಾಲದಲ್ಲೂ ಇದೇ ರೀತಿಯ ರಾಜಕೀಯ ಅಲೆ ನೋಡಿದ್ದೇವೆ. 1990ರ ದಶಕದಲ್ಲೂ ಅದೇ ರೀತಿಯ ಬೆಳವಣಿಗೆ ನಡೆದಿದೆ. ಇದನ್ನು ಕೇವಲ ಅಲೆ ಎಂದು ಹೇಳುವುದು ಸರಿಯಲ್ಲ; ಇದು ಸ್ಪಷ್ಟ ಜನಾದೇಶ ಎಂದು ಹೇಳಿದರು.
ಡಿಕೆಶಿ ಭೇಟಿ: ನೀರಾವರಿ ಯೋಜನೆಗಳ ಕುರಿತು ಚರ್ಚೆ
ಇದೇ ವೇಳೆ ಮೈಸೂರು ಭಾಗದ ಬಾಕಿ ಉಳಿದಿರುವ ಏತ ನೀರಾವರಿ ಯೋಜನೆಗಳ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಯದುವೀರ್ ಅವರು ಹೇಳಿದರು.
“ಕೆ.ಆರ್.ನಗರ ಮತ್ತು ಹುಣಸೂರು ಭಾಗದ ಏತ ನೀರಾವರಿ ಯೋಜನೆಗಳು ನನ್ನ ಕ್ಷೇತ್ರಕ್ಕೆ ಸೇರದಿದ್ದರೂ, ಅವುಗಳನ್ನು ಶೀಘ್ರ ಆರಂಭಿಸುವಂತೆ ಮನವಿ ಮಾಡಿದ್ದೇವೆ. ಕೊಡಗು ಭಾಗದಲ್ಲೂ ಏತ ನೀರಾವರಿ ಯೋಜನೆ ಜಾರಿಗೆ ತರುವ ಪ್ರಸ್ತಾವವನ್ನು ಸಚಿವಾಲಯಕ್ಕೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಕಾವೇರಿ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಮೈಸೂರು ಭಾಗದಲ್ಲಿ ಕೆಲವು ಸೇತುವೆಗಳ ನಿರ್ಮಾಣಕ್ಕೂ ಮನವಿ ಸಲ್ಲಿಸಿರುವುದಾಗಿ ಅವರು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



