ದಾವಣಗೆರೆ ಲೋಕಸಭಾ ಚುನಾವಣೆ: ಪ್ರಭಾ ಮಲ್ಲಿಕಾರ್ಜುನ್‌ಗೆ ಒತ್ತಾಯ ಮಾಡಿ ಟಿಕೆಟ್ ಕೊಟ್ಟಿದ್ದು ನಾವೇ; DCM ಡಿ.ಕೆ ಶಿವಕುಮಾರ್
ಅವರು ಕೇಳದಿದ್ದರೂ, ನಾವು ಬಲವಂತವಾಗಿ ಅವರನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ದಾವಣಗೆರೆಯಲ್ಲಿ ಹಲವಾರು ಬಾರಿ ಸೋಲು ಕಂಡಿದ್ದ ಹಿನ್ನೆಲೆಯಲ್ಲಿ, ಅವರು ನಿಂತರೆ ಗೆಲುವು ಸಾಧ್ಯವೆಂದು ನಂಬಿದ್ದೆವು.

ಬೆಂಗಳೂರು: ದಾವಣಗೆರೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೀಗ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಕರ್ನಾಟಕ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭೆಯಲ್ಲಿ ದಾವಣಗೆರೆ ಕ್ಷೇತ್ರದ ಟಿಕೆಟ್ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಹೇಗೆ ಸಿಕ್ಕಿತು ಎಂಬ ಸತ್ಯದ ಕುರಿತು ಮಾತನಾಡಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಲು ನಾವೇ ಒತ್ತಾಯ ಮಾಡಿದ್ದೆವು ಎಂಬ ಸತ್ಯವನ್ನು ಬಹಿರಂಗಪಡಿಸಿದರು. “ಅವರು ಕೇಳದಿದ್ದರೂ, ನಾವು ಬಲವಂತವಾಗಿ ಅವರನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ದಾವಣಗೆರೆಯಲ್ಲಿ ಹಲವಾರು ಬಾರಿ ಸೋಲು ಕಂಡಿದ್ದ ಹಿನ್ನೆಲೆಯಲ್ಲಿ, ಅವರು ನಿಂತರೆ ಗೆಲುವು ಸಾಧ್ಯವೆಂದು ನಂಬಿದ್ದೆವು. ಈಗ ಗೆದ್ದು ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್ತಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕುಟುಂಬ ರಾಜಕಾರಣದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ. ಎಲ್ಲಾ ಪಕ್ಷದಲ್ಲೂ ಇದ್ದೇ ಇದೆ. ದಾವಣಗೆರೆಯಲ್ಲಿ ಶಾಮನೂರು ಕುಟುಂಬದಿಂದ ಮೊದಲಿನಿಂದಲೂ ಮೂರು ಜನ ರಾಜಕಾರಣದಲ್ಲಿದ್ದರು. ಈಗಲೂ 3 ಜನ ರಾಜಕಾರಣದಲ್ಲಿದ್ದಾರೆ ಎಂದರು.
ಟಿಕೆಟ್ ಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಅದರಲ್ಲಿ ತಪ್ಪೇನು ಇಲ್ಲ. ದಾವಣಗೆರೆಯಲ್ಲಿ ಬಹಳಷ್ಟು ಜನ ನಾಮಪತ್ರ ಸಲ್ಲಿಸಿದ್ದು, ಅವರಲ್ಲಿ ಹೆಚ್ಚಿನವರು ನಮ್ಮವರೇ. ನಮ್ಮ ನಾಯಕರೆಲ್ಲರೂ ಅವರ ಜತೆ ಮಾತನಾಡುತ್ತಾರೆ. ಎಲ್ಲವೂ ಸರಿ ಹೋಗಲಿದೆ. ಸೋಮವಾರ ನಾನು ಹಾಗೂ ಸಿದ್ದರಾಮಯ್ಯನವರು ದಾವಣಗೆರೆ ಹಾಗೂ ಬಾಗಲಕೋಟೆ ಪ್ರವಾಸ ಮಾಡಿ ಬಂದಿದ್ದೇವೆ ಎಂದು ಹೇಳಿದರು.
ನಮ್ಮ ಸರ್ಕಾರದ ಜನಪರ ಕಾರ್ಯಕ್ರಮ, ಶಾಮನೂರು ಶಿವಶಂಕರಪ್ಪ ಅವರು ಈ ಭಾಗಕ್ಕೆ ನೀಡಿರುವ ಕೊಡುಗೆಯಿಂದ ಈ ಭಾಗದ ಜನರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಲಿದ್ದಾರೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರೂ ಗ್ರಾಮೀಣ ಭಾಗದ ಜನರ ಸೇವೆ ಮಾಡಲು ತಮ್ಮದೇ ಆದ ಆಸೆ, ಆಕಾಂಕ್ಷೆಯೊಂದಿಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಸಮರ್ಥ್ ಅವರು ಮತ್ತೆ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವುದನ್ನು ಶಾಮನೂರು ಶಿವಶಂಕರಪ್ಪನವರೇ ತಡೆದು ಇಲ್ಲೇ ಇದ್ದು ವೃತ್ತಿ ಮಾಡುವಂತೆ ಹೇಳಿದ್ದರು. ಕ್ಷೇತ್ರದ ಜನತೆ, ಎಲ್ಲಾ ವರ್ಗದ ಮುಖಂಡರು, ಪಕ್ಷದ ವರಿಷ್ಠರು ಎಲ್ಲರೂ ಚರ್ಚೆ ಮಾಡಿ ಈ ತೀರ್ಮಾನ ಮಾಡಿದ್ದೇವೆ ಎಂದರು.
ದಾವಣಗೆರೆ ಜಿಲ್ಲೆ ಬೆಂಗಳೂರಿಗಿಂತ ಬಹಳ ಉತ್ತಮವಾಗಿ ಯೋಜಿತವಾಗಿ ರೂಪುಗೊಂಡಿರುವ ನಗರವಾಗಿದೆ. ಇದರ ಅಭಿವೃದ್ಧಿಗೆ ನೂರಾರು ಕೋಟಿ ರೂ. ಮೊತ್ತದ ಪ್ಯಾಕೇಜ್ ಗಳನ್ನು ನೀಡಲಾಗಿದೆ. ಈ ಭಾಗಕ್ಕೆ ಶಾಮನೂರು ಶಿವಶಂಕರಪ್ಪ ಅವರು ಕೊಟ್ಟಿರುವ ಕೊಡುಗೆ, ಶಿಕ್ಷಣ ಸಂಸ್ಥೆ ಆ ಮೂಲಕ ಈ ಜಿಲ್ಲೆ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದೆ. ಈ ಜಿಲ್ಲೆಯ ಈ ಪ್ರಗತಿಗೆ ಕೊಡುಗೆ ನೀಡಿದ್ದು ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ಹಾಗೂ ಅವರ ಸಂಸ್ಥೆ. ಇದೆಲ್ಲವನ್ನು ಜನ ಸ್ಮರಿಸುತ್ತಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



