ನಾವು ಸುಳ್ಳು ಹೇಳುವವರಲ್ಲ, ಅತ್ತು-ಕರೆದು ನಾಟಕ ಮಾಡೋರಲ್ಲ; ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಡಿಕೆಶಿ ಕನಸು: ಡಿ.ಕೆ ಸುರೇಶ್
ನಾವು ಸುಳ್ಳು ಹೇಳಿ ಕೆಲಸ ಮಾಡುವವರಲ್ಲ. ನಿಮ್ಮ ಬಳಿ ಅತ್ತು ಕರೆದು ನಾಟಕ ಮಾಡುವವರಲ್ಲ. ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವವನು, ಕೊಟ್ಟ ಭರವಸೆ ಈಡೇರುವ ತನಕ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಮಾಗಡಿ: ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಬೆಂಗಳೂರು ದಕ್ಷಿಣ ಜಿಲ್ಲೆಗೆ ನೀರಿನ ಅಭಾವ ನೀಗಿಸುವ ಕೆಲಸವನ್ನ ಡಿ.ಕೆ.ಶಿವಕುಮಾರ್ ಅವರು ಮಾಡುತ್ತಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ರಾಜ್ಯದಲ್ಲಿಯೇ ನಂ.1 ಮಾಡುವ ಕನಸು ಶಿವಕುಮಾರ್ ಅವರದ್ದು ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ಬಣ್ಣಿಸಿದರು.
ಮಾಗಡಿಯ ಚಕ್ರಬಾವಿಯಲ್ಲಿ ಬುಧವಾರ ನಡೆದ ವೈ.ಜಿ.ಗುಡ್ಡ ಏತನೀರಾವರಿ ಯೋಜನೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಸುರೇಶ್ ಅವರು ಮಾತನಾಡಿದರು. ನಾವು ಸುಳ್ಳು ಹೇಳಿ ಕೆಲಸ ಮಾಡುವವರಲ್ಲ. ನಿಮ್ಮ ಬಳಿ ಅತ್ತು ಕರೆದು ನಾಟಕ ಮಾಡುವವರಲ್ಲ. ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವವನು, ಕೊಟ್ಟ ಭರವಸೆ ಈಡೇರುವ ತನಕ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಮಾಗಡಿಯ ಅಭಿವೃದ್ಧಿ 2027- 28 ಕ್ಕೆ ಅಚ್ಚರಿ ಮೂಡಿಸಲಿದೆ. ಪಟ್ಟಣದ ಒಳಗೆ ರಸ್ತೆಗಳು ಅತ್ಯಂತ ಅಚ್ಚುಕಟ್ಟಾಗಿವೆ. ಜೊತೆಗೆ ಗ್ರಾಮೀಣ ಪ್ರದೇಶದ ರಸ್ತೆಗಳು ಸಹ ಅತ್ಯುತ್ತಮ ಸ್ಥಿತಿಯಲ್ಲಿವೆ. ಈ ಕ್ಷೇತ್ರದಲ್ಲಿ 1 ಸಾವಿರ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ" ಎಂದರು.
92 ಕೋಟಿ ರೂಪಾಯಿ ವೆಚ್ಚದಲ್ಲಿ 115 ಕಿ.ಮೀ ದೂರದಿಂದ ಕಾವೇರಿ ನೀರನ್ನು ತಂದು ಚಕ್ರಬಾವಿ ಸೇರಿದಂತೆ ಸುತ್ತಮುತ್ತಲ ಕೆರೆಗಳಿಗೆ ತುಂಬಿಸುವ ಕಾರ್ಯ ಇದಾಗಿದೆ. ಚಕ್ರಬಾವಿ ಕೆರೆಗೆ ನೀರನ್ನು ತುಂಬಿಸುವ ಯೋಜನೆ ಊಹಿಸಲು ಸಾಧ್ಯವಾಗದಂತಹ ಯೋಜನೆ ಎಂದು ಹೇಳಿದರು.
ಪರಿಸರ ಇಲಾಖೆಯ ಒಂದಷ್ಟು ತೊಡಕುಗಳು ಇದ್ದ ಕಾರಣ ಇನ್ನೊಂದೆರಡು ಕಿಲೋಮೀಟರ್ ಕಾಮಗಾರಿ ಬಾಕಿಯಿದೆ. ಮೇ ತಿಂಗಳ ಹೊತ್ತಿಗೆ ಕಾಮಗಾರಿ ಮುಗಿಯಲಿದೆ. ಇನ್ನು ವರ್ಷದ 365 ದಿನವೂ ವೈ.ಜಿ.ಗುಡ್ಡ ಕಾವೇರಿ ನೀರಿನಿಂದ ತುಂಬಿರಲಿದೆ. ಅಂದರೆ ಅಷ್ಟೂ ದಿನವೂ ನಿಮ್ಮ ಕೆರೆಗಳು ತುಂಬಿರುತ್ತವೆ. ಉಪಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿ ಇನ್ನೆರಡು ವರ್ಷದೊಳಗೆ ಈ ಯೋಜನೆಯನ್ನು ಸಂಪೂರ್ಣಗೊಳಿಸಬೇಕು. ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಮನವಿ ಮಾಡುತ್ತೇನೆ" ಎಂದು ಹೇಳಿದರು.
ಕಾವೇರಿ ನದಿ ದೂರವಿದೆ ಅಂದರೆ ಪಶ್ಚಿಮದಿಂದ ಪೂರ್ವಕ್ಕೆ ನೀರನ್ನು ತಂದು ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ವೈ.ಜಿ.ಗುಡ್ಡಕ್ಕೆ ಕಾವೇರಿ ನೀರು ಬರುತ್ತಿದೆ ಎಂದು ಯಾರೂ ಊಹಿಸಿರಲಿಲ್ಲ. ನಾನು ಸಂಸದನಾಗಿದ್ದಾಗ ಸ್ಥಳೀಯ ನಾಯಕರಾದ ಚಂದ್ರೇಗೌಡರ ಒಟ್ಟಿಗೆ ಸ್ಥಳಕ್ಕೆ ಭೇಟಿ ಮಾಡಿ ಅದಕ್ಕೆ ಹೇಗೆ ನೀರನ್ನು ತುಂಬಿಸಬಹುದು ಅಧಿಕಾರಿಗಳ ಬಳಿ ಚರ್ಚೆ ನಡೆಸಿದೆ" ಎಂದರು.
ಹಿಂದಿನ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಅವರು ನೀರಾವರಿ ಸಚಿವರಾಗಿದ್ದಾಗ ಈ ಭಾಗದ ಮುಖ್ಯ ಎಂಜಿನಿಯರ್ ಆಗಿದ್ದ ಮೋಹನ್ ಅವರ ಬಳಿ ನೀರು ಹರಿಸುವ ಕುರಿತು ಚರ್ಚೆ ನಡೆಸಿದೆ. ಕಾವೇರಿ ನೀರನ್ನು ಕಣ್ವ ಜಲಾಶಯಕ್ಕೆ ತಂದು ನಂತರ ಹೇಗೆ ಮಂಚನಬೆಲೆ ವೈ.ಜಿ ಗುಡ್ಡಕ್ಕೆ ತರಬಹುದು ಎಂದು ಯೋಜನೆ ತಯಾರಿಸಲು ಹೇಳಿದೆ. ಆನಂತರ ಇದರ ಸಾಧ್ಯತೆಗಳನ್ನು ಚರ್ಚೆ ನಡೆಸಿ ಸತ್ತೇಗಾಲದಿಂದ ವೈ.ಜಿ.ಗುಡ್ಡಕ್ಕೆ ಕಾವೇರಿ ನೀರು ತರಲಾಗಿದೆ" ಎಂದರು.
ನನ್ನ ಮೇಲೆ ನಿಮ್ಮೆಲ್ಲರ ಆಶೀರ್ವಾದ ಮುಂದಕ್ಕಾದರೂ ಇರುತ್ತದೆ ಎಂದು ಭಾವಿಸಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟವರ ಋಣವನ್ನ ಉಸಿರು ಇರುವ ತನಕ ತೀರಿಸುತ್ತೇನೆ. ಬಮುಲ್ ಅಧ್ಯಕ್ಷನನ್ನಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ. ಅಂದರೆ ಪ್ರತಿದಿನ ಹಾಲು, ಮೊಸರು, ತುಪ್ಪ ತೆಗೆದುಕೊಳ್ಳಿ, ಹಸು ಕಟ್ಟಿ ಎಂದು ಹೇಳುವ ಕೆಲಸ ನೀಡಿದ್ದೀರಿ. ರೈತರನ್ನು ಕಾಪಾಡುವ ಕಾರ್ಯವನ್ನು ನನ್ನ ಎಲ್ಲಾ ಸಹೋದ್ಯೋಗಿಗಳು ಹಾಗೂ ನಾವು ಮಾಡಲಿದ್ದೇವೆ" ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




