ಡಿಕೆಶಿ ಬೆಂಬಲಿಗರ ಮೇಲೆ ನಿಗಾ ಇಡಲು ಫೋನ್ ಟ್ಯಾಪಿಂಗ್, ಅನಧಿಕೃತ ತಂಡ ರಚನೆ: ಆರ್.ಅಶೋಕ್ ಗಂಭೀರ ಆರೋಪ
ಗ್ಯಾರಂಟಿ ಯೋಜನೆಗಳ ಲಾಭವನ್ನು ಎಲ್ಲರಿಗೂ ನೀಡುವುದಾಗಿ ಭರವಸೆ ನೀಡಿದ ಕಾಂಗ್ರೆಸ್ ಸರ್ಕಾರ, ಈಗ ಶ್ರೀಮಂತರಿಗೆ ಯೋಜನೆ ತ್ಯಜಿಸುವಂತೆ ಕೇಳುತ್ತಿರುವುದು ರಾಜ್ಯ ಸರ್ಕಾರ ದಿವಾಳಿಯಾಗಿರುವುದಕ್ಕೆ ಸಾಕ್ಷಿ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಂತ್ರಿ ಡಿಕ.ಶಿವಕುಮಾರ್ ಬೆಂಬಲಿಗರ ಫೋನ್'ಗಳನ್ನು ಕದ್ದಾಲಿಕೆ ನಡೆಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ.ಶಿವಕುಮಾರ್ ಅವರ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಿದ್ದರಾಮಯ್ಯ ಅವರು ಎಸ್'ಪಿ ನೇತೃತ್ವದಲ್ಲಿ ಅನಧಿಕೃತ ತಂಡ ರಚಿಸಿದ್ದಾರೆ. ಡಿಕೆ.ಶಿವಕುಮಾರ್ ಕಡೆಯ ಶಾಸಕರ ಚಲನವಲನದ ಮೇಲೆ ನಿಗಾ ವಹಿಸಲು ಫೋನ್ ಟ್ಯಾಪಿಂಗ್ ಮಾಡಿಸುತ್ತಿದ್ದಾರೆಂದು ಹೇಳಿದರು.
ಸರ್ಕಾರದ ವಿರುದ್ಧ ಸಮರಕ್ಕೆ ಸಜ್ಜು
ಮಾರ್ಚ್ 6ರಿಂದ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಧ್ವನಿ ಎತ್ತಲಾಗುವುದು ಎಂದು ಆಶೋಕ್ ಅವರು ಹೇಳಿದರು.
ಆಡಳಿತಾರೂಢ ಕಾಂಗ್ರೆಸ್ ಪಕ್ಷವೇ ಒಡೆದ ಮನೆಯಾಗಿದ್ದು, ಸರ್ಕಾರದ ಅವಧಿ ಅಂತ್ಯದತ್ತ ಸಾಗುತ್ತಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ನಾಯಕತ್ವ ವಿಚಾರದಲ್ಲಿ ಕಾಂಗ್ರೆಸ್ ಶಾಸಕರು ಬೀದಿಯಲ್ಲಿ ನಿಂತು ಮಾತನಾಡುತ್ತಿದ್ದಾರೆ. ಈ ವಿಷಯವನ್ನೂ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಕ್ರಮಗಳು, ಹಿಂದಿನ ಬಜೆಟ್‌ಗಳಲ್ಲಿ ಘೋಷಿಸಿದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದಿರುವುದು, ರಾಜ್ಯವನ್ನು ಸಾಲದ ಬಲೆಗೆ ತಳ್ಳಿರುವುದು, ಹಿಂದೂಗಳ ಮೇಲೆ ದಾಳಿಗಳು, ಬೆಂಗಳೂರಿನ ಘನತ್ಯಾಜ್ಯ ನಿರ್ವಹಣಾ ಸಮಸ್ಯೆ, ಕಂದಾಯ ಇಲಾಖೆಯಲ್ಲಿ ಇ ಖಾತಾ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಬಿಜೆಪಿ ಧ್ವನಿ ಎತ್ತಲಿದೆ ಎಂದು ತಿಳಿಸಿದರು.
ಇದೇ ವೇಳೆ ಮುಖ್ಯಮಂತ್ರಿ ದಾಖಲೆ ಮಟ್ಟದಲ್ಲಿ ಸಾಲ ಮಾಡಿದ್ದಾರೆಂದು ಆರೋಪಿಸಿದ ಅವರು, ಪ್ರತಿ ವ್ಯಕ್ತಿಗೆ ಒಂದು ಲಕ್ಷ ರೂಪಾಯಿ ಸಾಲದ ಹೊರೆ ಬರುವ ಪರಿಸ್ಥಿತಿ ಉಂಟಾಗಿದೆ. ಈ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿದರು.
ಗ್ಯಾರಂಟಿಗಳನ್ನು ಮಾಡುವ ಮುಂಚೆಯೇ ಯೋಚನೆ ಮಾಡಬೇಕಿತ್ತು...
ಗ್ಯಾರಂಟಿ ಯೋಜನೆಗಳ ಲಾಭವನ್ನು ಎಲ್ಲರಿಗೂ ನೀಡುವುದಾಗಿ ಭರವಸೆ ನೀಡಿದ ಕಾಂಗ್ರೆಸ್ ಸರ್ಕಾರ, ಈಗ ಶ್ರೀಮಂತರಿಗೆ ಯೋಜನೆ ತ್ಯಜಿಸುವಂತೆ ಕೇಳುತ್ತಿರುವುದು ರಾಜ್ಯ ಸರ್ಕಾರ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದು ಇದೇ ವೇಳೆ ಟೀಕಿಸಿದರು.
ಖಮೇನಿ ಪರ ಮುಸ್ಲಿಮರ ಮೆರವಣಿಗೆ: ಬಿಜೆಪಿ ಕಿಡಿ
ಇದೇ ವೇಳೆ ಬೆಂಗಳೂರು ಸೇರಿ ದೇಶದ ಕೆಲವು ಭಾಗಗಳಲ್ಲಿ ಇರಾನ್ ಪರ ಮೆರವಣಿಗೆಗಳು ನಡೆದಿರುವುದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಭಾರತವು ಇರಾನ್ ಹಾಗೂ ಇಸ್ರೇಲ್ ಎರಡೂ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಕೇಂದ್ರ ಸರ್ಕಾರ ಯಾವತ್ತೂ ಯುದ್ಧವನ್ನು ಬೆಂಬಲಿಸಿಲ್ಲ ಎಂದು ಹೇಳಿದರು.
ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸು ತರಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕೇಂದ್ರ ಸಚಿವರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳಬೇಕು ಎಂದರು.
ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸು ತರಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



