ರಾಜಕೀಯ

Bidadi Township: 'ಪತ್ರ ವ್ಯವಹಾರ'; ವಿಧಾನಸೌಧಕ್ಕೆ ಬನ್ನಿ ಮಾತಾಡೋಣ ಎಂದ ಡಿಕೆಶಿಗೆ HDK ಹೇಳಿದ್ದೇನು? Video

ಉಭಯ ನಾಯಕರು ಬಿಡದಿ ಟೌನ್​ಶಿಪ್ ಯೋಜನೆ ಸಂಬಂಧ ಪರಸ್ಪರ ಬಹಿರಂಗ ಚರ್ಚೆಗೆ ಸಿದ್ಧ ಎಂದು ಹೇಳಿಕೆಗಳನ್ನು ನೀಡುತ್ತಿದ್ದರು. ಇದೀಗ ಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧಕ್ಕೆ ಚರ್ಚೆಗೆ ಬರುವಂತೆ ಪತ್ರ ಬರೆದಿದ್ದಾರೆ.

Bidadi Township: 'ಪತ್ರ ವ್ಯವಹಾರ'; ವಿಧಾನಸೌಧಕ್ಕೆ ಬನ್ನಿ ಮಾತಾಡೋಣ ಎಂದ ಡಿಕೆಶಿಗೆ HDK ಹೇಳಿದ್ದೇನು? Video
ಹೆಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್
Published On :

ಬೆಂಗಳೂರು/ರಾಮನಗರ: ಬಿಡದಿ ಟೌನ್​ಶಿಪ್ ಯೋಜನೆ ಸಂಬಂಧ ಚರ್ಚಿಸಲು ವೇದಿಕೆ ಸಿದ್ಧಗೊಳಿಸಲು ಸಿಎಂ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಧಾನಸೌಧದ ತಮ್ಮ ಕಚೇರಿಗೆ ನಿಮ್ಮವರನ್ನು ಕರೆದುಕೊಂಡು ಬನ್ನಿ ಎಂದು ಆಹ್ವಾನ ನೀಡಿ ನಿನ್ನೆ ಸಿಎಂ ಡಿ ಕೆ ಶಿವಕುಮಾರ್ ಪತ್ರ ಬರೆದಿದ್ದರು. ಇದಕ್ಕೆ ಪತ್ರದ ಮೂಲಕವೇ ಪ್ರತಿಕ್ರಿಯೆ ನೀಡಿರುವ ಹೆಚ್.ಡಿ.ಕುಮಾರಸ್ವಾಮಿ, ಈ ಯೋಜನೆ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ಉಪಯೋಗವಿಲ್ಲ. ಬಾಧಿತ ರೈತರ ಭಾಗದಲ್ಲಿಯೇ ರೈತರ ಜೊತೆಯಲ್ಲಿಯೇ ಚರ್ಚೆ ನಡೆಸೋಣ, ಇದಕ್ಕೆ ನಾನು ಸಿದ್ಧ ಎಂದು ಪ್ರತಿ ಸವಾಲು ಹಾಕಿದ್ದಾರೆ.

ಸಿಎಂ ಡಿಕೆಶಿ ಪತ್ರದಲ್ಲಿ ಏನಿದೆ?

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ, ತಮ್ಮ ಜೊತೆ ನಾನು ಚರ್ಚಿಸಲು ಉತ್ಸುಕನಾಗಿದ್ದು, 26.06.2026ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ತಾವು ಮತ್ತು ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ನನ್ನ ಕಚೇರಿಗೆ ಆಗಮಿಸುವಂತೆ ತಮ್ಮನ್ನು ಕೋರುತ್ತೇನೆ ಎಂದು ಕುಮಾರಸ್ವಾಮಿಗೆ ಸಿಎಂ ಡಿಕೆಶಿ ಪತ್ರ ಬರೆದಿದ್ದಾರೆ.

ಉಭಯ ನಾಯಕರು ಬಿಡದಿ ಟೌನ್​ಶಿಪ್ ಯೋಜನೆ ಸಂಬಂಧ ಪರಸ್ಪರ ಬಹಿರಂಗ ಚರ್ಚೆಗೆ ಸಿದ್ಧ ಎಂದು ಹೇಳಿಕೆಗಳನ್ನು ನೀಡುತ್ತಿದ್ದರು. ಇದೀಗ ಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧಕ್ಕೆ ಚರ್ಚೆಗೆ ಬರುವಂತೆ ಪತ್ರ ಬರೆದಿದ್ದಾರೆ.

ಸಿಎಂಗೆ ಹೆಚ್ ಡಿಕೆ ಪ್ರತಿಕ್ರಿಯೆ

'ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಚರ್ಚೆಗೆ ಆಹ್ವಾನಿಸಿದ್ದಕ್ಕೆ ಸಿಎಂ ಅವರಿಗೆ ಧನ್ಯವಾದಗಳು. ಆದರೆ, ಬಿಡದಿ ಸಮಗ್ರ ಉಪನಗರ ಯೋಜನೆ ಅನುಷ್ಠಾನದಿಂದ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಎಂಟು ಗ್ರಾಮಗಳು ಮತ್ತು ಹಾರೋಹಳ್ಳಿ ತಾಲೂಕಿನ ಒಂದು ಗ್ರಾಮದ ರೈತರು, ಗ್ರಾಮಸ್ಥರು ಮತ್ತು ಪಾಲುದಾರರು ಹಲವಾರು ಸಮಸ್ಯೆ ಮತ್ತು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ, ಈ ಭಾಗದಲ್ಲಿರುವ ಅಪಾರ ಪರಿಸರ ಸಂಪತ್ತಿಗೆ ಹಾನಿಯಾಗುತ್ತದೆ.

ಈ ಹಿನ್ನೆಲೆಯಲ್ಲಿ ತಾವು ಪ್ರಸ್ತಾಪಿಸಿರುವ ಸಭೆಯನ್ನು ರಾಮನಗರ ಜಿಲ್ಲೆಯ ಬಿಡದಿ ಅಥವಾ ಬಾಧಿತ ಪ್ರದೇಶವಾದ ಭೈರಮಂಗಲದ ಯಾವುದಾದರೂ ಸೂಕ್ತ ಸಾರ್ವಜನಿಕ ಸ್ಥಳದಲ್ಲಿ ಸಭೆ ಕರೆಯುವುದು ಸಮಂಜಸ ಎನಿಸುತ್ತದೆ. ಈ ಮೇಲೆ ಸೂಚಿಸಿದ ಸ್ಥಳಗಳಲ್ಲಿ ಬಿಡದಿ ಸಮಗ್ರ ಉಪನಗರ ಯೋಜನೆಯಿಂದ ಬಾಧಿತರಾಗಿರುವ ರೈತರು, ಗ್ರಾಮಸ್ಥರು, ಕೃಷಿ ಕಾರ್ಮಿಕರು, ಹೈನುಗಾರಿಕೆ ಉದ್ಯಮದಲ್ಲಿರುವ ರೈತ ಮಹಿಳೆಯರು, ಸಣ್ಣ ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಬಾಧಿತ ಇತರ ಪಾಲುದಾರರನ್ನು ಭಾಗವಹಿಸಲು ಅವಕಾಶ ನೀಡಿದಲ್ಲಿ ಈ ಸಭೆಯಲ್ಲಿ ಮುಕ್ತ ಮನಸ್ಸಿನ ಚರ್ಚೆ ನಡೆಸಿ, ಬಾಧಿತ ವರ್ಗದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶವಾಗುತ್ತದೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಮತ್ತು ನಿಲುವುವಾಗಿದೆ‌' ಎಂದು ಪತ್ರದಲ್ಲಿ ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.

'ಈ ಯೋಜನೆಯ ರಚನೆ ಮತ್ತು ಅನುಷ್ಠಾನದಲ್ಲಿ ನನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎನ್ನುವುದನ್ನು ಈ ಪತ್ರದ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ಮುಂದುವರೆದು, ವಿಧಾನಸೌಧದಲ್ಲಿ ನಡೆಸಲು ಉದ್ದೇಶಿಸಿರುವ ಸಭೆಯಲ್ಲಿ ಬಾಧಿತ ರೈತ ವರ್ಗ, ಗ್ರಾಮಸ್ಥರು ಮತ್ತು ಪಾಲುದಾರರನ್ನು ಆಹ್ವಾನಿಸದೇ ಅವರನ್ನು ಹೊರಗೆ ಇಟ್ಟು ಸಭೆ ನಡೆಸುವುದರಿಂದ ಸಭೆ ಫಲಪ್ರದವಾಗುವುದಿಲ್ಲ.

ತಾವು ನಿಗದಿಪಡಿಸಿದ 26-06-2026ರಂದು ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳು ಇರುವುದರಿಂದ ಬ್ಯುಸಿಯಾಗಿದ್ದೇನೆ. ಈ ಉದ್ದೇಶಿತ ಸಭೆಯನ್ನು 27-06-2026ರಂದು ಅಥವಾ ನಂತರ ಸೂಕ್ತದಿನ ಬಿಡದಿ ಅಥವಾ ಭೈರಮಂಗಲದ ಸೂಕ್ತ ಸ್ಥಳದಲ್ಲಿ ಆಯೋಜಿಸಿ, ಬಾಧಿತ ವರ್ಗದ ಜನರನ್ನು ಆಹ್ವಾನಿಸಿ ಸಭೆ ನಡೆಸಬೇಕೆಂದು ಕೋರುತ್ತೇನೆ' ಎಂದು ಹೆಚ್ ಡಿ ಕುಮಾರಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.