Cross-voting: ಬಿಜೆಪಿಗೆ ಸದಾನಂದಗೌಡ ಬಿಗ್ ಶಾಕ್; 'ಪ್ರೆಸ್ಟೀಜ್ ಅಪಾರ್ಟ್‌ಮೆಂಟ್' ಸಭೆಯ ರಹಸ್ಯ ಬಯಲು!
ಪಕ್ಷದೊಳಗಿನ 'ವಿಶ್ವಾಸ ದ್ರೋಹಿ'ಗಳನ್ನು ಪತ್ತೆಹಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ.

ಬೆಂಗಳೂರು: ಇತ್ತೀಚಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದಿಂದ ಕಂಗೆಟ್ಟು, ಆಣೆ ಪ್ರಮಾಣದ ಮೊರೆ ಹೋಗಿರುವ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರು ಬಿಗ್ ಶಾಕ್ ನೀಡಿದ್ದಾರೆ.
ಪಕ್ಷದೊಳಗಿನ 'ವಿಶ್ವಾಸ ದ್ರೋಹಿ'ಗಳನ್ನು ಪತ್ತೆಹಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಕ್ರಾಸ್ ವೋಟಿಂಗ್ ಗೆ ಸಂಬಂಧಿಸಿದಂತೆ ‘ಅಪಾರ್ಟ್‌ಮೆಂಟ್ ನಲ್ಲಿ ನಡೆದ ರಹಸ್ಯ ಸಭೆ’ಕುರಿತು ಸದಾನಂದ ಗೌಡ ಅವರು ಅತ್ಯಂತ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಅಲ್ಲದೆ ಪಕ್ಷದ ರಾಜ್ಯ ನಾಯಕರ ಉದಾಸೀನತೆಯೇ ಕಾಂಗ್ರೆಸ್ ನ ಐದನೇ ಅಭ್ಯರ್ಥಿ ಗೆಲುವಿಗೆ ಪ್ರಮುಖ ಕಾರಣ ಎಂದು ಅವರು ನೇರವಾಗಿ ಚಾಟಿ ಬೀಸಿದ್ದಾರೆ.
"ಕಾಂಗ್ರೆಸ್ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗಲೇ ನಾವು ಎಚ್ಚೆತ್ತುಕೊಳ್ಳಬೇಕಿತ್ತು" ಎಂದು ಮಾತು ಆರಂಭಿಸಿದ ಸದಾನಂದ ಗೌಡ, ತೆರೆಮರೆಯಲ್ಲಿ ನಡೆದ ರಾಜಕೀಯ ಆಪರೇಷನ್‌ನ ಸಂಪೂರ್ಣ ವಿವರವನ್ನು ಬಿಚ್ಚಿಟ್ಟಿದ್ದಾರೆ.
ಜೂನ್ 13 ರಂದು ನನಗೆ ಹೆಬ್ಬಾಳದ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಿಂದ ಒಂದು ಕರೆ ಬಂದಿತ್ತು. ಕಾಂಗ್ರೆಸ್‌ನ ನಾಲ್ಕು ಪ್ರಮುಖ ನಾಯಕರು ಮತ್ತು ಬಿಜೆಪಿಯ ಕೆಲ ಶಾಸಕರು ಅಲ್ಲಿ ರಹಸ್ಯ ಸಭೆ ನಡೆಸುತ್ತಿದ್ದಾರೆ ಎಂದು ಆ ವ್ಯಕ್ತಿ ಮಾಹಿತಿ ನೀಡಿದರು. ನಾನು ತಕ್ಷಣವೇ ಅಲರ್ಟ್ ಆಗಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿಗೆ ಮತ್ತು ಆರ್. ಅಶೋಕ್ ಅವರಿಗೆ ಕರೆ ಮಾಡಿದೆ. ಆದರೆ ಇಬ್ಬರೂ ಸಿಗಲಿಲ್ಲ. ತಕ್ಷಣವೇ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರಿಗೆ ಕಾಲ್ ಮಾಡಿ ವಿಷಯ ತಿಳಿಸಿದೆ. ಅವರು 'ಸರಿ ನೋಡ್ತೇನೆ' ಎಂದರು. ಆದರೆ ಮರುದಿನವೇ ಅದೇ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಪಕ್ಕದ ಮತ್ತೊಂದು ಅಪಾರ್ಟ್‌ಮೆಂಟ್‌ನಲ್ಲಿ ಎರಡನೇ ಸಭೆಯೂ ನಡೆಯಿತು! ಆಗಲೂ ನಾನು ಅದೇ ಪ್ರಧಾನ ಕಾರ್ಯದರ್ಶಿಗೆ ಕರೆ ಮಾಡಿ ಎಚ್ಚರಿಸಿದೆ. ಆದರೆ ನಮ್ಮವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದ್ದಾರೆ.
ವಿಪರ್ಯಾಸ ಎಂದರೆ, ಅಡ್ಡಮತದಾನ ನಡೆದು ಪಕ್ಷಕ್ಕೆ ಭಾರಿ ಮುಖಭಂಗವಾದ ಮೇಲೆ ಅದೇ ಪ್ರಧಾನ ಕಾರ್ಯದರ್ಶಿ ಡಿವಿಎಸ್ ಅವರಿಗೆ ಕರೆ ಮಾಡಿ, "ಅಣ್ಣ ನೀವು ಹೇಳಿದ ಹಾಗೆಯೇ ಆಯ್ತಲ್ಲ!' ಎಂದಿದ್ದರು. ಅದಕ್ಕೆ ಸದಾನಂದ ಗೌಡರು, "ಹೊಳೆ ದಾಟಿದ ಮೇಲೆ ಮತ್ತೇನು ಚರ್ಚೆ?" ಎಂದು ಬೇಸರದಿಂದಲೇ ಸುಮ್ಮನಾಗಿದ್ದಾರೆ.
ಇನ್ನು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಿಎಂ, "ನಾನು ರಾಜ್ಯಾಧ್ಯಕ್ಷರಿಗೆ ಕರೆ ಮಾಡಿ ಸ್ಪಷ್ಟವಾಗಿ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಧರ್ಮದ ಕ್ಷೇತ್ರಕ್ಕೆ ರಾಜಕೀಯವನ್ನು ತೆಗೆದುಕೊಂಡು ಹೋಗಬೇಡಿ. ದೇವರ ಹತ್ತಿರವೂ ರಾಜಕೀಯ ಹೋಗುವುದಾದರೆ ಎಲ್ಲವನ್ನೂ ದೇವರಿಗೇ ಬಿಟ್ಟುಬಿಡಿ. ದೇವರೇ ರಾಜಕೀಯ ಮಾಡಲಿ! ನಮ್ಮಿಂದ ರಾಜಕೀಯ ಮಾಡಲು ಆಗದಿದ್ದರೆ ದೇವರಿಗೇ ಬಿಟ್ಟುಬಿಡಿ" ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



