ರಾಜಕೀಯ

ದೆಹಲಿಯಲ್ಲಿ ಡಿ.ಕೆ ಶಿವಕುಮಾರ್ Power game: ವೈಯಕ್ತಿಕ ಪ್ರತಿನಿಧಿಯಾಗಿ ಜೋಬಿನ್ ಜೋಸೆಫ್ ನೇಮಕ; ರಾಜಕೀಯ ಲೆಕ್ಕಾಚಾರವೇನು..?

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಟಿಬಿ.ಜಯಚಂದ್ರ ಅವರು ದೆಹಲಿಯಲ್ಲಿನ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು.

ದೆಹಲಿಯಲ್ಲಿ ಡಿ.ಕೆ ಶಿವಕುಮಾರ್ Power game: ವೈಯಕ್ತಿಕ ಪ್ರತಿನಿಧಿಯಾಗಿ ಜೋಬಿನ್ ಜೋಸೆಫ್ ನೇಮಕ; ರಾಜಕೀಯ ಲೆಕ್ಕಾಚಾರವೇನು..?
ಡಿ.ಕೆ.ಶಿವಕುಮಾರ್
Published On :

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಹಾಗೂ ಅಪರೂಪದ ಆಡಳಿತಾತ್ಮಕ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ದೀರ್ಘಕಾಲದ ಆಪ್ತ ಜೋಬಿನ್ ಜೋಸೆಫ್ ಅವರನ್ನು ದೆಹಲಿಯ ಮುಖ್ಯಮಂತ್ರಿ ಕಚೇರಿಯಲ್ಲಿ (CMO) ತಮ್ಮ "ವೈಯಕ್ತಿಕ ಪ್ರತಿನಿಧಿ"ಯನ್ನಾಗಿ (Personal Representative) ನೇಮಕ ಮಾಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ನೇಮಕಾತಿ ನಡೆದಿರುವುದು ಅಪರೂಪವಾಗಿದ್ದು, ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ರಾಜ್ಯ ಸರ್ಕಾರಗಳು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ‘ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ’ಯನ್ನು ನೇಮಕ ಮಾಡುವುದು ರೂಢಿಯಾಗಿದೆ.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಟಿಬಿ.ಜಯಚಂದ್ರ ಅವರು ದೆಹಲಿಯಲ್ಲಿನ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು. 2014ರಿಂದ 2018ರ ಅವಧಿಯಲ್ಲಿ ಶಾಸಕ ಅಪ್ಪಾಜಿ ನಾಡಗೌಡ ಕೂಡ ಇದೇ ಹುದ್ದೆ ನಿರ್ವಹಿಸಿದ್ದರು.

ಆದರೆ, ಜೋಬಿನ್ ಜೋಸೆಫ್ ಅವರ ನೇಮಕಾತಿ ಸರ್ಕಾರದ ಅಧಿಕೃತ ಪ್ರತಿನಿಧಿಯಾಗಿ ಅಲ್ಲ, ಬದಲಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಪ್ರತಿನಿಧಿಯಾಗಿ ಮಾಡಲಾಗಿದೆ.

ಮೂಲಗಳ ಪ್ರಕಾರ ಅವರು ಯಾವುದೇ ವೇತನ ಅಥವಾ ಸರ್ಕಾರಿ ಸೌಲಭ್ಯಗಳನ್ನು ಪಡೆಯದೇ ಉಚಿತ ಸೇವೆಯ (Pro Bono) ಆಧಾರದ ಮೇಲೆ ಕಾರ್ಯನಿರ್ವಹಿಸಲಿದ್ದಾರೆಂದು ತಿಳಿದುಬಂದಿದೆ.

ಜೋಬಿನ್ ಜೋಸೆಫ್ ಅವರು ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಕಚೇರಿಯಿಂದ ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದು, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳು ಹಾಗೂ ರಾಜಕೀಯ ನಾಯಕರೊಂದಿಗೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿಗಳಿಗೆ ನೇರ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಲಿದ್ದಾರೆ.

ಈ ನೇಮಕಾತಿಯ ಸ್ವರೂಪವು ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಖ್ಯಮಂತ್ರಿ ಅವರ ವೈಯಕ್ತಿಕ ಕಚೇರಿಯಿಂದ ಕಾರ್ಯನಿರ್ವಹಿಸುವ ಪ್ರತಿನಿಧಿ ಮತ್ತು ರಾಜ್ಯ ಸರ್ಕಾರದ ಅಧಿಕೃತ ಪ್ರತಿನಿಧಿ ನಡುವೆ ಇರುವ ವ್ಯತ್ಯಾಸದ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ಹುದ್ದೆಯ ನಿಖರ ಜವಾಬ್ದಾರಿಗಳು ಮತ್ತು ಅಧಿಕಾರಗಳ ಕುರಿತು ಇನ್ನೂ ಸ್ಪಷ್ಟತೆ ಲಭ್ಯವಾಗಿಲ್ಲ.

ಕರ್ನಾಟಕದಂತಹ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸುವುದು ಅನುದಾನ, ಅಭಿವೃದ್ಧಿ ಯೋಜನೆಗಳು ಹಾಗೂ ವಿವಿಧ ಆಡಳಿತಾತ್ಮಕ ಅನುಮೋದನೆಗಳ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿನಿಧಿಗಳ ಪಾತ್ರ ನಿರ್ಣಾಯಕವಾಗಿರುತ್ತದೆ. ಆದರೆ, ಜೋಬಿನ್ ಜೋಸೆಫ್ ಅವರ ನೇಮಕಾತಿಯು ವೈಯಕ್ತಿಕ ಮತ್ತು ಉಚಿತ ಸೇವೆಯ ಆಧಾರದ ಮೇಲೆ ನಡೆದಿರುವುದರಿಂದ, ಅವರ ಕಾರ್ಯವ್ಯಾಪ್ತಿ, ಜವಾಬ್ದಾರಿ ಹಾಗೂ ಈಗಾಗಲೇ ದೆಹಲಿಯಲ್ಲಿ ಇರುವ ರಾಜ್ಯ ಸರ್ಕಾರದ ಅಧಿಕೃತ ವ್ಯವಸ್ಥೆಯೊಂದಿಗೆ ಅವರು ಹೇಗೆ ಕಾರ್ಯನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಈ ನೇಮಕಾತಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಡಳಿತ ಶೈಲಿ ಮತ್ತು ಕೇಂದ್ರದೊಂದಿಗೆ ನೇರ ಸಂಪರ್ಕ ಸಾಧಿಸುವ ಪ್ರಯತ್ನದ ಭಾಗವೇ ಎಂಬುದರ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.