ದಿವಾಳಿದಾರನೆಂದು ಘೋಷಣೆಯಾದ MLC ನಸೀರ್ ಅಹ್ಮದ್ ಅನರ್ಹರಾಗುತ್ತಾರಾ? ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದೇನು?
ನಸೀರ್ ಅಹ್ಮದ್ ಅವರ ವಿಧಾನ ಪರಿಷತ್ ಸದಸ್ಯತ್ವದ ಅವಧಿ 2026ರ ಜೂನ್ 30ರಂದು ಅಂತ್ಯಗೊಳ್ಳಲಿದೆ.

ಬೆಂಗಳೂರು: ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT)ಯ ಬೆಂಗಳೂರು ಪೀಠವು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು "ದಿವಾಳಿಕೋರ" ಎಂದು ಘೋಷಿಸಿದ್ದರೂ, ಅವರು ತಮ್ಮ ಎಂಎಲ್‌ಸಿ ಸ್ಥಾನದಿಂದ ಅನರ್ಹರಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ನಸೀರ್ ಅಹ್ಮದ್ ಅವರ ವಿಧಾನ ಪರಿಷತ್ ಸದಸ್ಯತ್ವದ ಅವಧಿ 2026ರ ಜೂನ್ 30ರಂದು ಅಂತ್ಯಗೊಳ್ಳಲಿದೆ.
ಅವರನ್ನು ದಿವಾಳಿದಾರ ಎಂದು ಘೋಷಿಸಿರುವುದು ವೈಯಕ್ತಿಕ ವಿಷಯ. ಇದರ ಬಗ್ಗೆ ನಮಗೆ ಯಾವುದೇ ಸಂಬಂಧವಿಲ್ಲ. ಯಾರಾದರೂ ಅಧಿಕೃತವಾಗಿ ದೂರು ಸಲ್ಲಿಸದ ಹೊರತು ನಾವು ಸ್ವಯಂಪ್ರೇರಿತವಾಗಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ದೂರು ಬಂದರೂ ಅವರಿಗೆ ನೊಟೀಸ್ ಜಾರಿ ಮಾಡಿ, ಉತ್ತರಿಸಲು ಮೂರು ದಿನಗಳ ಕಾಲಾವಕಾಶ ನೀಡುವ ಮೂಲಕ ಅಗತ್ಯ ಪ್ರಕ್ರಿಯೆ ಆರಂಭಿಸುತ್ತೇವೆ.
ನ್ಯಾಯಾಲಯಕ್ಕಿಂತ ಸದನವೇ ಶ್ರೇಷ್ಠ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್( The New Indian Express) ಪ್ರತಿನಿಧಿಗೆ ತಿಳಿಸಿದರು.
ಈ ಕುರಿತು ಅವರು 1965ರಲ್ಲಿ ಉತ್ತರ ಪ್ರದೇಶದ ಒಬ್ಬ ಶಾಸಕರು ಸ್ಪೀಕರ್‌ಗೆ ಬೆನ್ನು ತೋರಿಸಿ ಸೆಲ್ಯೂಟ್ ಮಾಡಿ ಅವಮಾನಿಸಿದ್ದ ಪ್ರಕರಣವನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಆ ಪ್ರಕರಣ ರಾಷ್ಟ್ರಪತಿಗಳವರೆಗೂ ತಲುಪಿದ್ದು, ಅಂತಿಮವಾಗಿ ಸದನವೇ ಶ್ರೇಷ್ಠ ಎಂಬುದು ಸಾಬೀತಾಯಿತು ಎಂದು ಹೇಳಿದರು.
ಇದೇ ವೇಳೆ, ನಸೀರ್ ಅಹ್ಮದ್ ಅವರು ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್ ಪ್ರತಿನಿಧಿಗೆ ಪ್ರತಿಕ್ರಿಯಿಸಿ, ಎನ್‌ಸಿಎಲ್‌ಟಿ ಆದೇಶವನ್ನು ಚೆನ್ನೈ ಪೀಠದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT)ಯಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.
ಎನ್‌ಸಿಎಲ್‌ಟಿ ಪ್ರಕ್ರಿಯೆಗೆ ತಡೆ ನೀಡುವಂತೆ ಮನವಿ ಸಲ್ಲಿಸಲಿದ್ದು, ಇಂದು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು.
ಏನಿದು ಪ್ರಕರಣ?
ಬೆಂಗಳೂರು ಮೂಲದ ಈಗಾಗಲೇ ದಿವಾಳಿ ಪ್ರಕ್ರಿಯೆಗೆ ಒಳಗಾಗಿ ಮುಚ್ಚಲ್ಪಟ್ಟಿರುವ ತಮ್ಮ ಹಿಂದಿನ ಸಂಸ್ಥೆ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಪಡೆದಿದ್ದ 1,454 ಕೋಟಿ ರೂಪಾಯಿ ಸಾಲವನ್ನು ಮರುಪಾವತಿಸಲು ವಿಫಲರಾಗಿದ್ದಾರೆ ಎಂಬ ಆರೋಪದ ಮೇರೆಗೆ, ದಿವಾಳಿ ಮತ್ತು ದಿವಾಳಿತನ ಸಂಹಿತೆ (IBC) ಅಡಿಯಲ್ಲಿ ನಸೀರ್ ಅಹ್ಮದ್ ಅವರನ್ನು ಎನ್‌ಸಿಎಲ್‌ಟಿ ದಿವಾಳಿದಾರರೆಂದು ಘೋಷಿಸಿದೆ.
ಐಬಿಸಿ ಕಾಯ್ದೆಯ ಸೆಕ್ಷನ್ 125ರ ಅಡಿಯಲ್ಲಿ ದಿವಾಳಿಗೆ ಸಂಬಂಧಿಸಿದ ವೃತ್ತಿಪರ ರವೀಂದ್ರ ಬೆಳೆಯೂರು ಅವರನ್ನುಟ್ರಸ್ಟಿಯಾಗಿ ನೇಮಿಸಲಾಗಿದ್ದು, ನಸೀರ್ ಅಹ್ಮದ್, ಅವರ ಪತ್ನಿ ನುಝ್ಹತ್ ಆಯಿಷಾ ನಸೀರ್ ಹಾಗೂ ಪುತ್ರ ಅವೈಜ್ ಅಹ್ಮದ್ ಅವರ ಎಲ್ಲಾ ಆಸ್ತಿಪಾಸ್ತಿಗಳನ್ನು ತಮ್ಮ ವಶಕ್ಕೆ ಪಡೆಯುವಂತೆ ಸೂಚಿಸಲಾಗಿದೆ. ಸಾಲಕ್ಕೆ ಈ ಮೂವರು ಖಾತರಿದಾರರಾಗಿದ್ದರು.
ನುಝ್ಹತ್ ಹಾಗೂ ಅವೈಜ್ ಸಂಸ್ಥೆಯ ನಿರ್ದೇಶಕರಾಗಿದ್ದರೆ, 2019ರಲ್ಲಿ ಆರಂಭವಾದ ದಿವಾಳಿ ಪ್ರಕ್ರಿಯೆಯ ಬಳಿಕ ಸಂಸ್ಥೆ ಮುಚ್ಚುವ ಮೊದಲು ನಸೀರ್ ಅಹ್ಮದ್ ಅವರು ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಐಬಿಸಿ ಕಾಯ್ದೆಯ ಸೆಕ್ಷನ್ 140 ಹಾಗೂ ಭಾರತೀಯ ಸಂವಿಧಾನದ 191(1)(ಸಿ) ವಿಧಿಯ ಪ್ರಕಾರ, 'ವಿಮೋಚನೆ ಹೊಂದದ ದಿವಾಳಿದಾರ' (Undischarged Insolvent) ಆಗಿದ್ದರೆ ಶಾಸಕ ಅಥವಾ ವಿಧಾನ ಪರಿಷತ್ ಸದಸ್ಯ ಅನರ್ಹರಾಗುತ್ತಾರೆ. ಈ ಹಿನ್ನೆಲೆಯಲ್ಲಿ ನಸೀರ್ ಅಹ್ಮದ್ ಅವರು ಎಂಎಲ್‌ಸಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಸೀರ್ ಅಹ್ಮದ್ ಅವರನ್ನು ತಮ್ಮ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



