ಗಾಂಧೀಜಿ ತಂಗಿದ್ದ ಜಾಗದಲ್ಲಿ ಡಿಕೆಶಿ ದರ್ಪದ ಹೆಜ್ಜೆಗಳು! CM ನಿವಾಸವಾಗಿ 'ಕುಮಾರಕೃಪ' ಬದಲಾವಣೆ ಕುರಿತು JDS ಕೆಂಡ
ಬೆಂಗಳೂರಿನ ಅಸ್ಮಿತೆಯಾಗಿರುವ 160 ವರ್ಷಗಳ ಇತಿಹಾಸವಿರುವ ಕುಮಾರಕೃಪಾ ಪಾರಂಪರಿಕ ಕಟ್ಟಡವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ವಾರ್ಥಕ್ಕಾಗಿ ಮಾರ್ಪಡಿಸುತ್ತಿರುವುದು ಖಂಡನೀಯ ಮತ್ತು ಹೇಯ ಎಂದು ಜೆಡಿಎಸ್ ಕೆಂಡ ಕಾರಿದೆ.

ಬೆಂಗಳೂರು: ಕುಮಾರಕೃಪ ಅತಿಥಿ ಗೃಹವನ್ನು ತಮ್ಮ ಅಧಿಕೃತ ನಿವಾಸವಾಗಿ ಬದಲಾಯಿಸುತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಪ್ರತಿಪಕ್ಷ ಜೆಡಿಎಸ್ ಗುರುವಾರ ತೀವ್ರ ವಾಗ್ದಾಳಿ ನಡೆಸಿದೆ.
ಬೆಂಗಳೂರಿನ ಅಸ್ಮಿತೆಯಾಗಿರುವ 160 ವರ್ಷಗಳ ಇತಿಹಾಸವಿರುವ ಕುಮಾರಕೃಪಾ ಪಾರಂಪರಿಕ ಕಟ್ಟಡವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ವಾರ್ಥಕ್ಕಾಗಿ ಮಾರ್ಪಡಿಸುತ್ತಿರುವುದು ಖಂಡನೀಯ ಮತ್ತು ಹೇಯ ಎಂದು ಜೆಡಿಎಸ್ ಕೆಂಡ ಕಾರಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕಾವೇರಿ, ಅನುಗ್ರಹ ನಿವಾಸಗಳಿದ್ದರೂ ಇತಿಹಾಸವನ್ನು ಧ್ವಂಸಗೊಳಿಸಲು ಹೊರಟಿರುವ ಈ ನಡೆ ಉದ್ಧಟತನ ಅಷ್ಟೇ ಅಲ್ಲ, ಮೂರ್ಖತನದ ಪರಮಾವಧಿ ಎಂದು ಟೀಕಿಸಿದೆ. ಅಲ್ಲದೆ ವಿಡಿಯೋದಲ್ಲಿ ಗಾಂಧೀಜಿ ನಡೆದ ಜಾಗದಲ್ಲಿ ಡಿಕೆಶಿ ದರ್ಪದ ಹೆಜ್ಜೆಗಳು ಎಂದಿರುವ ಜೆಡಿಎಸ್, ಇದು ಪ್ರಜಾಪ್ರಭುತ್ವವೋ ಅಥವಾ ಪಾಳೇಗಾರಿಕೆಯೋ? ಎಂದು ಪ್ರಶ್ನಿಸಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ತಂಗಿದ್ದ, ದಿವಾನ್ ಕೆ. ಶೇಷಾದ್ರಿ ಅಯ್ಯರ್ ಅವರ ನೆನಪಿನ ಕುಮಾರಕೃಪ ಪಾರಂಪರಿಕ ಕಟ್ಟಡವನ್ನು ಕೇವಲ ವೈಯಕ್ತಿಕ ತೆವಲಿಗಾಗಿ, ಗೃಹ ಕಚೇರಿ ಮಾಡಿಕೊಳ್ಳಲು ಮಾರ್ಪಾಡು ಮಾಡುತ್ತಿರುವುದು ಇತಿಹಾಸಕ್ಕೆ ಬಗೆಯುವ ಮಹಾದ್ರೋಹ ಎಂದು ಕಿಡಿ ಕಾರಿದೆ.
'ಕುಮಾರಕೃಪ' ಯಾರ ವೈಯಕ್ತಿಕ ಆಸ್ತಿಯೂ ಅಲ್ಲ, ಅದು ಇತಿಹಾಸದ ಹೆಗ್ಗುರುತು. ಪಾರಂಪರಿಕ ಕಟ್ಟಡಗಳ ರಕ್ಷಣೆ ಮಾಡಬೇಕಾದವರೇ ಅದರ ವಿನಾಶಕ್ಕೆ ನಿಂತಿರುವುದು ವಿಪರ್ಯಾಸ. ಗೃಹ ಕಚೇರಿ ನೆಪದಲ್ಲಿ ಅದರ ಮೂಲಸ್ವರೂಪಕ್ಕೆ ಧಕ್ಕೆ ತರುತ್ತಿರುವುದು ಅಕ್ಷಮ್ಯ. ಮುಖ್ಯಮಂತ್ರಿಗಳೇ, ಪಾರಂಪರಿಕ ಕಟ್ಟಡಗಳಿಗೆ ಕೈ ಹಾಕಬೇಡಿ. ಈ ಕೂಡಲೇ ನವೀಕರಣ ಕಾಮಗಾರಿಯನ್ನು ನಿಲ್ಲಿಸಿ ಎಂದು ಆಗ್ರಹಿಸಿದೆ.
ಕುಮಾರಕೃಪಾ ಅತಿಥಿ ಗೃಹದ ಮುಖ್ಯ ಕಟ್ಟಡ ಹಾಗೂ ಅನೆಕ್ಸ್ ಕಟ್ಟಡದ ನವೀಕರಣ ಮಾಡಲಾಗುತ್ತಿದೆ. ಸಿಎಂ ಡಿ.ಕೆ.ಶಿವಕುಮಾರ್ ಕುಮಾರ ಕೃಪ ಅತಿಥಿ ಗೃಹವನ್ನು ಗೃಹ ಕಚೇರಿಯನ್ನಾಗಿ ಮಾಡಲು ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆ ಪಾರಂಪರಿಕ ಕಟ್ಟಡದಲ್ಲಿ ನವೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈವರೆಗೆ ಕುಮಾರಕೃಪಾ ರಸ್ತೆಯಲ್ಲಿನ ಕೃಷ್ಣ ಸಿಎಂ ಗೃಹ ಕಚೇರಿಯಾಗಿತ್ತು. ಆದರೆ, ನೂತನ ಸಿಎಂ ಡಿಕೆಶಿ ಕುಮಾರಕೃಪಾ ಅತಿಥಿ ಗೃಹವನ್ನು ಗೃಹ ಕಚೇರಿ ಮಾಡಲು ತೀರ್ಮಾನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



