ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ: ಕಾಂಗ್ರೆಸ್ ಸರ್ಕಾರದ ವಿರುದ್ಧ 6 ನಿರ್ಣಯ ಮಂಡನೆ
ಸರ್ಕಾರದ ವೈಫಲ್ಯ, ಅಬಕಾರಿ ಹಗರಣ, ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ದುರ್ಬಳಕೆ, ಒಳಮೀಸಲು ವರ್ಗೀಕರಣ ಅನ್ಯಾಯ, ಎ ಖಾತಾ, ಬಿ ಖಾತಾ ಮೂಲಕ ಭ್ರಷ್ಟಾಚಾರ, ಕಸದ ಅವ್ಯವಹಾರ ಸೇರಿ ಆರು ನಿರ್ಣಯಗಳನ್ನು ಮಂಡನೆ ಮಾಡಲಾಗಿದೆ.

ಬೆಂಗಳೂರು: ನಗರದಲ್ಲಿ ಗುರುವಾರ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸುವ ಪಣ ತೊಟ್ಟು, ಜಿಬಿಎ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಸಂಕಲ್ಪ ಮಾಡುವುದರ ಜೊತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ, ಭ್ರಷ್ಟಾಚಾರದ ವಿರುದ್ಧ ಖಂಡನಾ ನಿರ್ಣಯ ಸೇರಿ ಒಟ್ಟು 6 ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು (ಫೆಬ್ರವರಿ 19) ನಡೆದ ಕಾರ್ಯಕಾರಿಣಿಯನ್ನು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಉದ್ಘಾಟಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಮಾರೋಪ ಭಾಷಣ ಮಾಡಿದರು.
ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆರು ನಿರ್ಣಯಗಳನ್ನು ಮಂಡಿಸಲಾಗಿದೆ. ಸರ್ಕಾರದ ವೈಫಲ್ಯ, ಅಬಕಾರಿ ಹಗರಣ, ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ದುರ್ಬಳಕೆ, ಒಳಮೀಸಲು ವರ್ಗೀಕರಣ ಅನ್ಯಾಯ, ಎ ಖಾತಾ, ಬಿ ಖಾತಾ ಮೂಲಕ ಭ್ರಷ್ಟಾಚಾರ, ಕಸದ ಅವ್ಯವಹಾರ ಸೇರಿ ಆರು ನಿರ್ಣಯಗಳನ್ನು ಮಂಡನೆ ಮಾಡಲಾಗಿದೆ.
ಇದೇ ವೇಳೆ VB-G-RAM-G ಕಾಯ್ದೆಯನ್ನು ಪರಿಚಯಿಸಿದ್ದಕ್ಕಾಗಿ ಮತ್ತು ವಂದೇ ಮಾತರಂಗೆ ರಾಷ್ಟ್ರಗೀತೆಯ ಸ್ಥಾನಮಾನವನ್ನು ನೀಡಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದೆ.
ಸಭೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾಗಿದ್ದು, ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾಂಗ್ರೆಸ್ ಸರ್ಕಾರ ಬಂದಾಗಿಂದ ಅಧಿಕಾರ ಗೊಂದಲ ಇದೆ. ಸರ್ಕಾರ ರಚನೆ ವೇಳೆ ಸಿಎಂ ಯಾರಾಗಬೇಕು ಅಂತ ತೀರ್ಮಾನ ಮಾಡಲು ಇವರಿಂದ ಆಗಲಿಲ್ಲ. ಹತ್ತು ದಿನಗಳ ಕಾಲ ಸಿಎಂ ಯಾರಾಗಬೇಕು ಅಂತ ಚರ್ಚಿಸಿದ್ರು. ಆ ಮೂಲಕ ಪ್ರಜಾಪ್ರಭುತ್ವದ ಅಪಮಾನ ಮಾಡಿದ್ರು. ಈಗಲೂ ಕುರ್ಚಿ ಕಚ್ಚಾಟ ನಿಂತಿಲ್ಲ ಎಂದು ಹೇಳಿದೆ.
ಕಾಂಗ್ರೆಸ್ ಕುರ್ಚಿ ಗಲಾಟೆ ಆಡಳಿತದ ಮೇಲೆ ಪರಿಣಾಮ ಬೀರಿದೆ. ಈ ಸರ್ಕಾರ ರಾಜ್ಯವನ್ನು ಸಾಲದ ಸಮುದ್ರಕ್ಕೆ ನೂಕಿದೆ. ಇವರ ಗ್ಯಾರಂಟಿಗಳು ವಿಫಲವಾಗಿವೆ, ಗ್ಯಾರಂಟಿಗಳು ಎಲ್ಲಿವೆ ಅಂತ ಜನ ಹುಡುಕ್ತಿದ್ದಾರೆ. ಏಳು ಲಕ್ಷ ಕೋಟಿಗೂ ಹೆಚ್ಚು ಸಾಲ ಈ ಸರ್ಕಾರ ಒಂದೇ ಮಾಡಿದೆ ಎಂದು ವಾಗ್ದಾಳಿ ನಡೆಸಿದೆ.
ಇವರ ಭ್ರಷ್ಟಾಚಾರ ರಾಜ್ಯದ ಸಾಲ ಹೆಚ್ಚಾಗಲು ಕಾರಣ. ಕರ್ನಾಟಕ ಸರ್ಕಾರದ ಭ್ರಷ್ಟಾಚಾರ ಮಾಡೆಲ್ ದೇಶದಲ್ಲಿ ಚರ್ಚೆ ಆಗ್ತಿದೆ. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ ಅಂತ ಸಿಎಂ ಒಪ್ಕೊಂಡಿದ್ದಾರೆ. ಇದು ಭ್ರಷ್ಟಾಚಾರ ಮಾಡೋ ಸರ್ಕಾರ, ಭ್ರಷ್ಟರನ್ನು ರಕ್ಷಿಸುವ ಸರ್ಕಾರ. ಸಂಘಟನೆ ಶಕ್ತಿಯಿಂದ ಈ ಸರ್ಕಾರ ಕಿತ್ತೊಗೆಯಬೇಕು. ಯುವಕರಿಗೆ ಉದ್ಯೋಗ ಸಿಕ್ತಿಲ್ಲ. ರಾಜ್ಯ ಡ್ರಗ್ಸ್ ಫ್ಯಾಕ್ಟರಿ, ಡ್ರಗ್ಸ್ ಮಾಫಿಯಾ ಹೆಚ್ಚಾಗಿದೆ. ಇಲ್ಲಿನ ಪೊಲೀಸರು ಡ್ರಗ್ಸ್ ಫ್ಯಾಕ್ಟರಿ ಪತ್ತೆ ಮಾಡಲಿಲ್ಲ. ಹೊರಗಿನ ಪೊಲೀಸರು ಬಂದು ಪತ್ತೆ ಮಾಡಬೇಕಾಯಿತು ಎಂದು ಕಿಡಿಕಾರಿದರು.
ಸೋಲಿನ ಸೇಡು ತೀರಿಸಿಕೊಳ್ಳುವ ಸಮಯ ಬಂದಿದೆ. ಕಾಂಗ್ರೆಸ್ಗೆ ಉತ್ತರ ಕೊಡುವ ಸಮಯ ಬಂದಿದೆ. ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಅಪಮಾನ ಮಾಡಿದೆ. ತಮ್ಮ ವೋಟ್ ಬ್ಯಾಂಕ್ಗಾಗಿ ವಂದೇ ಮಾತರಂಗೆ ವಿರೋಧ ಮಾಡುತ್ತಿದೆ. ಈ ದೇಶದ ಮೇಲೆ ಯಾವುದೇ ರೀತಿಯ ಹಲ್ಲೆ ನಾವು ಸಹಿಸಲ್ಲ. ವಕ್ಫ್ ಮೂಲಕ ರೈತರ ಜಮೀನು ಕಬಳಿಕೆಗೆ ಮುಂದಾಗಿದೆ. ವಕ್ಫ್ಗೆ ಒಂದಿಂಚೂ ಜಾಗ ಕೊಡಲು ಬಿಡಲ್ಲ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮಾನಸಿಕ, ಬೌದ್ಧಿಕ ದಿವಾಳಿ ಆಗಿದೆ. ಅದೇ ರೀತಿ ಕರ್ನಾಟಕ ಕಾಂಗ್ರೆಸ್ ಸರ್ಕಾರವೂ ದಿವಾಳಿ ಆಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳಲ್ಲಿ ಈ ಭ್ರಷ್ಟ ಸರ್ಕಾರದ ಮುಖಕ್ಕೆ ಹೊಡೆದು ಓಡಿಸೋಣ ಎಂದು ಕರೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



