ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳ ಪಟ್ಟು: ಬಿಜೆಪಿ, ಜೆಡಿಎಸ್ ನಿಂದ ಸದನದಲ್ಲಿ ಅಹೋರಾತ್ರಿ ಧರಣಿ
ತಮ್ಮ ವಿರುದ್ಧದ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಿದ ಸಚಿವ ಆರ್ ಬಿ ತಿಮ್ಮಾಪುರ ಅವರು, ನಾನೇನು ತಪ್ಪು ಮಾಡಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದರು.

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆ ಮತ್ತು ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, ಈ ಸಂಬಂಧ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ.
ಇಂದು ವಿಧಾನಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ಅಬಕಾರಿ ಇಲಾಖೆಯಲ್ಲಿ, ಪರವಾನಗಿ ನೀಡಲು ಮತ್ತು ವರ್ಗಾವಣೆಯನ್ನು ಸುಗಮಗೊಳಿಸಲು ಲಂಚ ಪಡೆಯಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಆಡಿಯೋ ರೆಕಾರ್ಡಿಂಗ್‌ಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಆದ್ದರಿಂದ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಕ್ಷಣವೇ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.
ರಾಜ್ಯ ಅಬಕಾರಿ ಇಲಾಖೆ ಭ್ರಷ್ಟಾಚಾರದಲ್ಲಿ ಮುಂಚೂಣಿಯಲ್ಲಿದ್ದು, ತಿಮ್ಮಾಪುರ ಅವರಿಗೆ ಪಾಲು ಕೊಡಬೇಕೆಂಬ ಆಡಿಯೋ ವೈರಲ್ ಆಗಿದೆ. ಆ ಆಡಿಯೋ ದಾಖಲೆ ಈ ಪೆನ್‌ಡ್ರೈವ್‌ನಲ್ಲಿದೆ ಎಂದು ಆರ್ ಅಶೋಕ್, ಸದನಕ್ಕೆ ಪೆನ್ಡ್ರೈವ್ ತೋರಿಸಿದರು.
ನನ್ನ ಬಳಿ ಆ ಆಡಿಯೋದ ಪೆನ್ ಡ್ರೈವ್ ಇದೆ. ಇಷ್ಟಿದ್ರೂ ನಾನವನಲ್ಲ ಅಂತ ಸಚಿವರು ಹೇಳುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಪ್ರತಿ ತಿಂಗಳು ಒಂದೊಂದು ಅಂಗಡಿಯಿಂದ 10-15 ಸಾವಿರ ರೂ ಕಲೆಕ್ಷನ್ ಮಾಡಲಾಗ್ತಿದೆ. ಸರಾಸರಿ ಒಂದು ತಿಂಗಳಿ 21 ಕೋಟಿಯಂತೆ ವರ್ಷಕ್ಕೆ 252 ಕೋಟಿ ಕಲೆಕ್ಷನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಮಧ್ಯಪ್ರವೇಶಿಸಿದ ಸುನಿಲ್ ಕುಮಾರ್, ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದಿದ್ದರೆ ಸಚಿವರು ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಇಷ್ಟೆಲ್ಲ ದಾಖಲೆಗಳನ್ನು ಕೊಡುತ್ತಿದ್ದರೂ ಕೇಳಿಸಿಕೊಂಡು ಕೂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಸಚಿವ ಆರ್.ಬಿ.ತಿಮ್ಮಾಪುರ ಅವರಿಂದ ಉತ್ತರ ನೀಡುವಂತೆ ಮತ್ತು ರಾಜೀನಾಮೆ ನೀಡುವಂತೆ ವಿಪಕ್ಷದವರು ಪಟ್ಟು ಹಿಡಿದರು. ಸ್ಪೀಕರ್ ಯು.ಟಿ. ಖಾದರ್ ಸಂಜೆ 6 ಗಂಟೆಗೆ ಸಚಿವರಿಂದ ಉತ್ತರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಸಂಜೆ ಆರು ಗಂಟೆಗೆ ತಮ್ಮ ವಿರುದ್ಧದ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಿದ ಸಚಿವ ಆರ್ ಬಿ ತಿಮ್ಮಾಪುರ ಅವರು, ನಾನೇನು ತಪ್ಪು ಮಾಡಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದರು.
ಈ ಹಿಂದೆ ಶಶಿಕಲಾ ಜೊಲ್ಲೆ ಅವರ ವಿರುದ್ಧ ಮೊಟ್ಟೆ ಹಗರಣ ಕೇಳಿಬಂದಿತ್ತು. ಆಗ ಅವರು ರಾಜೀನಾಮೆ ನೀಡಿಲ್ಲ ಎಂದು ಅಬಕಾರಿ ಸಚಿವರು ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದರು.
ಸಚಿವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಮತ್ತು ಬಿಜೆಪಿ ಸದಸ್ಯರು ಸದನ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಬಳಿಕ ಸ್ಪೀಕರ್ ಯುಟಿ ಖಾದರ್ ಅವರು ಕಲಾಪವನ್ನು ನಾಳೆಗೆ ಮುಂದೂಡಿದರು. ಕಲಾಪ ಮುಂದೂಡಿದರೂ ಪ್ರತಿಭಟನೆ ಮುಂದುವರೆಸಿದ ಬಿಜೆಪ, ಜೆಡಿಎಸ್ ಸದಸ್ಯರು ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲೇ ಆಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



