KPSC ಅಕ್ರಮದ ಜಾತಕ ಜಾಲಾಡಿದರೆ ಎಲ್ಲೆಲ್ಲೂ ನಿಮ್ಮ ಕುಂಡಲಿ, ನಕ್ಷತ್ರಗಳೇ; ನೇಮಕಾತಿ ಆದೇಶ ನೀಡಲು CM ಗೆ ದೇವೇಗೌಡರು ಪತ್ರ ಬರೆದಿದ್ದು ಏಕೆ?
ಸನ್ಮಾನ್ಯ ಕುಮಾರಣ್ಣನವರೇ, ತಾವೊಬ್ಬ ಕೇಂದ್ರ ಸಚಿವರು, ತೂಕವಿಲ್ಲದ ಮಾತುಗಳನ್ನಾಡಿ ತೂಕ ಕಳೆದುಕೊಳ್ಳಬೇಡಿ, ಕೆಪಿಎಸ್‍ಸಿ ವಿಷಯವಾಗಿ ತಮ್ಮ ವಿರುದ್ದದ ಆರೋಪಗಳಿಗೆ ತಾರ್ಕಿಕ ಉತ್ತರಗಳನ್ನು ನೀಡುವ ಬದಲಾಗಿ ಪಲಾಯನದ ಪತ್ರಿಕಾಗೋಷ್ಠಿ ನಡೆಸಿದ್ದೀರಿ ಎಂದಿದ್ದಾರೆ.

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಪ್ರಕರಣದ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಜಟಾಪಟಿ ಮುಂದುವರೆದಿದೆ.
ಭಾನುವಾರ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ ಕಾನೂನು ಮೀರಿ ನಾನು ಏನೂ ಮಾಡಿಲ್ಲ ಎಂದಿದ್ದರು. ಕುಮಾರಸ್ವಾಮಿ ಆರೋಪಗಳಿಗೆ ಪ್ರಿಯಾಂಕ್ ಖರ್ಗೆ ಪ್ರತ್ಯುತ್ತರ ಕೊಟ್ಟಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವಿದ್ದರೂ, ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಿ ಎಂದು ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿಗೆ ಪತ್ರ ಬರೆದ್ದಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಸನ್ಮಾನ್ಯ ಕುಮಾರಣ್ಣನವರೇ, ತಾವೊಬ್ಬ ಕೇಂದ್ರ ಸಚಿವರು, ತೂಕವಿಲ್ಲದ ಮಾತುಗಳನ್ನಾಡಿ ತೂಕ ಕಳೆದುಕೊಳ್ಳಬೇಡಿ, ಕೆಪಿಎಸ್‍ಸಿ ವಿಷಯವಾಗಿ ತಮ್ಮ ವಿರುದ್ದದ ಆರೋಪಗಳಿಗೆ ತಾರ್ಕಿಕ ಉತ್ತರಗಳನ್ನು ನೀಡುವ ಬದಲಾಗಿ ಪಲಾಯನದ ಪತ್ರಿಕಾಗೋಷ್ಠಿ ನಡೆಸಿದ್ದೀರಿ ಎಂದಿದ್ದಾರೆ.
2011ನೇ ಸಾಲಿನ ಗೆಜೆಟೆಡ್ ಪ್ರೊ ಬೆಷನರಿ ಹುದ್ದೆಗಳ ಆಯ್ಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೇಮಕಾತಿ ರದ್ದುಗೊಳಿಸಿ ತೀರ್ಪು ನೀಡಿದ್ದರೂ, ರಾಜ್ಯ ಸರಕಾರದ ಮೇಲ್ಮನವಿಯನ್ನು ವಜಾಗೊಳಿಸಿದ್ದರೂ ಸಹ ದೇವೇಗೌಡರು ಹಾಗೂ ಕುಮಾರಸ್ವಾಮಿ ಸದರಿ ಅಭ್ಯರ್ಥಿಗಳನ್ನು ನೇಮಕ ಮಾಡುವಂತೆ ಅಂದಿನ ಮುಖ್ಯಮಂತ್ರಿಗೆ ಶಿಫಾರಸ್ಸು ಪತ್ರ ನೀಡಿದ್ದರು ಎಂದು ದೂರಿದ್ದಾರೆ.
ಶಿಫಾರಸು ಲಾಬಿ ಮಾಡುವುದರ ಹಿಂದೆ ಕುಮಾರಸ್ವಾಮಿಯವರ ಹಿತಾಸಕ್ತಿ ಏನಿತ್ತು? ಉಚ್ಛ ನ್ಯಾಯಾಲಯವೇ ಈ ಆಯ್ಕೆಯಲ್ಲಿ ಅಕ್ರಮವನ್ನು ಕಂಡಿರುವಾಗ ಕುಮಾರಸ್ವಾಮಿ ಮತ್ತು ದೇವೇಗೌಡರು ಕ್ಲೀನ್ ಚಿಟ್ ನೀಡಿ ಶಿಫಾರಸು ಮಾಡಿದ್ದೇಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಮಾಡಿದರೆ ಮೃಷ್ಟಾನ್ನ, ಬೇರೆಯವರು ಮಾಡಿದರೆ ಚಿತ್ರಾನ್ನವೇ?. ಕುಮಾರಸ್ವಾಮಿರವರೇ, ತಮ್ಮ ಸಂಬಂಧಿಕ ಅಧಿಕಾರಿಗಳ ನೇಮಕಾತಿಯನ್ನು ರದ್ದುಪಡಿಸಿದ್ದರೂ, ಸಿಎಟಿ ಯಿಂದ ತಡೆಯಾಜ್ಞೆ ತಂದು ಐಎಎಸ್‍ಗೆ ಭಡ್ತಿ ಕೊಡಿಸಿ ಮುಂದುವರೆಸಿರುವುದು ಯಾರ ಚಿತಾವಣೆಯಿಂದ ಎಂಬುದು ಎಲ್ಲರಿಗೂ ತಿಳಿದಿದೆ. ಇದರ ಬಗ್ಗೆ ತಾವು ಮಾತನಾಡುವುದಿಲ್ಲವೇಕೆ? ಎಂದು ಅವರು ಕೇಳಿದ್ದಾರೆ.
ಅಕ್ರಮದಲ್ಲಿ ಜೈಲಿಗೆ ಹೋಗಿದ್ದ ಹಿಂದಿನ ಕೆಪಿಎಸ್‍ಸಿ ಅಧ್ಯಕ್ಷರೊಬ್ಬರನ್ನು ಭೇಟಿಯಾಗಲು ಕುಮಾರಸ್ವಾಮಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದು ಜಗತ್ತಿಗೆ ತಿಳಿದಿಲ್ಲ ಎಂದುಕೊಂಡಿದ್ದಾರಾ? ಜೈಲಿಗೆ ಹೋಗಿ ಭೇಟಿಯಾಗುವಂತಹದ್ದೇನಿತ್ತು? ತಮ್ಮ ಹೆಸರು ಹೊರಬರದಂತೆ ಮನವಿ ಮಾಡುವುದಕ್ಕಾ, ಬೆದರಿಕೆ ಹಾಕುವುದಕ್ಕಾ? ಎಂದು ಅವರು ಕಿಡಿಕಾರಿದ್ದಾರೆ.
ಕುಮಾರಸ್ವಾಮಿಯವರೇ, ಕೆಪಿಎಸ್‍ಸಿಯ ಅಕ್ರಮದ ಜಾತಕವನ್ನು ಜಾಲಾಡಿದರೆ ಎಲ್ಲೆಲ್ಲೂ ನಿಮ್ಮ ಕುಂಡಲಿ, ನಕ್ಷತ್ರಗಳೇ ಕಾಣಸಿಗುತ್ತವೆ. ಉಚ್ಛ ನ್ಯಾಯಾಲಯದ ಅದೇಶವನ್ನೇ ಧಿಕ್ಕರಿಸಿ ನೇಮಕಾತಿ ಶಿಫಾರಸು ಮಾಡಿದ್ದವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೇಮಕಾತಿಯನ್ನು ಪ್ರಶ್ನಿಸುತ್ತಿರುವುದು ಹಾಸ್ಯವಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



