ಡಿ.ಕೆ ಶಿವಕುಮಾರ್ ಸಂಪುಟದಲ್ಲಿ 34ನೇ ಸಚಿವರು ಯಾರಾಗುತ್ತಾರೆ?: ಕಾಂಗ್ರೆಸ್ ನಾಯಕತ್ವಕ್ಕೇ ಕಗ್ಗಂಟು
ಆದರೆ, ಆ ಶಿಫಾರಸಿನ ಹೊರತಾಗಿಯೂ ಅಂತಿಮವಾಗಿ ಚರ್ಚೆಗೆ ಬಂದ ಹೆಸರು ಬದಲಾಗಿದ್ದು, ವಾಸ್ತವವಾಗಿ ಏನಾಯಿತು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಾಗಿ 24 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದ್ದರೂ, ಸಚಿವ ಸಂಪುಟದಲ್ಲಿನ 34ನೇ ಸಚಿವರ ಸ್ಥಾನ ಇನ್ನೂ ಖಾಲಿ ಉಳಿದಿದ್ದು, ಅದು ಇದೀಗ ಜಾತಿ ಸಮೀಕರಣ, ಬಣ ನಿಷ್ಠೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಕ್ಷದೊಳಗಿನ ಪ್ರಭಾವದ ಪರೀಕ್ಷೆಯಾಗಿ ಪರಿಣಮಿಸಿದೆ.
ನಿನ್ನೆ ಸಿದ್ದರಾಮಯ್ಯ ಅವರು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್ ಅವರೊಂದಿಗೆ ಸಾರ್ವಜನಿಕ ವೇದಿಕೆಯನ್ನು ಹಂಚಿಕೊಂಡಿರುವುದು ಹೊಸ ರಾಜಕೀಯ ಊಹಾಪೋಹಗಳಿಗೆ ಕಾರಣವಾಯಿತು. ಮೂಲಗಳ ಪ್ರಕಾರ, ಇದು ಕಾಕತಾಳೀಯವಾಗಿರಲಿಲ್ಲ. ಖಾಲಿ ಇರುವ ಸಚಿವ ಸ್ಥಾನಕ್ಕೆ ಶಿವಣ್ಣನವರ್ ಅವರ ಹೆಸರನ್ನು ಸಿದ್ದರಾಮಯ್ಯ ಅವರೇ ವೈಯಕ್ತಿಕವಾಗಿ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ.
ಆದರೆ, ಆ ಶಿಫಾರಸಿನ ಹೊರತಾಗಿಯೂ ಅಂತಿಮವಾಗಿ ಚರ್ಚೆಗೆ ಬಂದ ಹೆಸರು ಬದಲಾಗಿದ್ದು, ವಾಸ್ತವವಾಗಿ ಏನಾಯಿತು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ ಎಂದು ಮೂಲಗಳು ತಿಳಿಸಿವೆ.
'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ಶಿವಣ್ಣನವರ್ ಅವರನ್ನು ಸಂಪರ್ಕಿಸಿದಾಗ, ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು ಎಂದಷ್ಟೇ ಅವರು ಪ್ರತಿಕ್ರಿಯಿಸಿದರು. ತಮ್ಮ ಹೆಸರು ಸಚಿವ ಸ್ಥಾನಕ್ಕೆ ಪರಿಗಣನೆಯಲ್ಲಿದೆಯೇ ಎಂಬುದನ್ನು ಅವರು ದೃಢಪಡಿಸಲಿಲ್ಲ, ಅಲ್ಲದೆ ಅದನ್ನು ತಳ್ಳಿಹಾಕಲೂ ಇಲ್ಲ.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ಶಿವಣ್ಣನವರ್ ಹಾಗೂ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನದಿಂದ ಕೈಬಿಡಲಾದ ಗಾಯತ್ರಿ ಶಾಂತೇಗೌಡ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಬೆಳವಣಿಗೆ, ಮಾಜಿ ಮುಖ್ಯಮಂತ್ರಿ ಒಂದೇ ಸಮಯದಲ್ಲಿ ಎರಡು ಕಡೆ ಉಂಟಾಗಿರುವ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನ ನಡೆಸುತ್ತಿರುವ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದಕ್ಕೆ ಒಂದು ಸಂಭಾವ್ಯ ಪರಿಹಾರವಾಗಿ ಗಾಯತ್ರಿ ಶಾಂತೇಗೌಡ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸುವ ಪ್ರಸ್ತಾಪವೂ ಚರ್ಚೆಯಲ್ಲಿದೆ ಎನ್ನಲಾಗಿದೆ. ಇದರಿಂದ ಅವರಿಗೆ ಸಮಾಧಾನಕರ ಹುದ್ದೆ ಸಿಗುವುದರ ಜೊತೆಗೆ, ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕದ ಕುರುಬ ಸಮುದಾಯದ ನಾಯಕರಿಗೆ ಒಂದು ಸ್ಥಾನ ಖಾಲಿಯಾಗಲಿದೆ. ಇದು ನಿಜವಾದರೆ, ಯಾರೂ ಸಂಪೂರ್ಣವಾಗಿ ವಂಚಿತರಾಗದಂತೆ, ಎಲ್ಲರಿಗೂ ಏನಾದರೂ ಸಿಗುವಂತೆ ಹಾಗೂ ಜಾತಿ ಸಮತೋಲನದ ಸಂದೇಶವೂ ಹೋಗುವಂತಹ ಕರ್ನಾಟಕ ಕಾಂಗ್ರೆಸ್‌ನ ಸಾಂಪ್ರದಾಯಿಕ ರಾಜಕೀಯ ಪರಿಹಾರ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಗಾಯತ್ರಿ ಶಾಂತೇಗೌಡ, ಈ ಬಗ್ಗೆ ಈಗ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಉತ್ತರ ಕರ್ನಾಟಕದ ಕುರುಬ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯ ಕೇವಲ ಭಾವನಾತ್ಮಕ ಕಾರಣಗಳಿಂದ ಮಾತ್ರವಲ್ಲ ಎಂದು ಮೂಲಗಳು ತಿಳಿಸಿವೆ. ಬಸವರಾಜ ಶಿವಣ್ಣನವರ್, ರಾಘವೇಂದ್ರ ಹಿಟ್ನಾಳ್ ಅಥವಾ ಗವಿಯಪ್ಪ ಎಚ್.ಆರ್. ಅವರಲ್ಲಿ ಯಾರಿಗಾದರೂ ಸಚಿವ ಸ್ಥಾನ ಸಿಕ್ಕರೆ, ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗದ ಸಚಿವರ ಸಂಖ್ಯೆ ಏಳಕ್ಕೆ ಏರಿಕೆಯಾಗಲಿದೆ. ಸಿದ್ದರಾಮಯ್ಯ ಅವರ ಸಾಮಾಜಿಕ-ರಾಜಕೀಯ ನೆಲೆಯ ಪ್ರಮುಖ ಆಧಾರವೆಂದು ಪರಿಗಣಿಸಲ್ಪಡುವ ಕುರುಬ ಸಮುದಾಯಕ್ಕೆ ಸರ್ಕಾರದಲ್ಲಿ ಇದುವರೆಗೆ ಸಿಗದಷ್ಟು ಪ್ರಬಲ ಪ್ರಾತಿನಿಧ್ಯ ದೊರೆಯಲಿದೆ ಎನ್ನಲಾಗಿದೆ.
ಹಿಂದುಳಿದ ವರ್ಗ/ಕುರುಬ ಮತಬ್ಯಾಂಕ್ ಸಿದ್ದರಾಮಯ್ಯ ಅವರ ರಾಜಕೀಯ ಗುರುತಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ರಾಜಕೀಯ ವಲಯದಲ್ಲಿ ಪರಿಗಣಿಸಲಾಗಿದೆ.
ಕುರುಬ ಸಮುದಾಯದವರಷ್ಟೇ ಅಲ್ಲದೆ, ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ಆಕಾಂಕ್ಷಿಗಳೂ ಖಾಲಿ ಇರುವ ಏಕೈಕ ಸಚಿವ ಸ್ಥಾನಕ್ಕಾಗಿ ತಮ್ಮ ಹಕ್ಕು ಮಂಡಿಸುತ್ತಿದ್ದಾರೆ.
ಇದರಿಂದ ಯಾರನ್ನೂ ಅಸಮಾಧಾನಗೊಳಿಸದೇ ಒಬ್ಬರನ್ನು ಆಯ್ಕೆ ಮಾಡುವುದು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗಾಯತ್ರಿ ಶಾಂತೇಗೌಡ ಅವರನ್ನು ಕೊನೆಯ ಕ್ಷಣದಲ್ಲಿ ಕೈಬಿಟ್ಟಿದ್ದರಿಂದ ಉಂಟಾದ ಅಸಮಾಧಾನವನ್ನು ಗಮನಿಸಿದರೆ, ಈ ನಿರ್ಧಾರವು ರಾಜಕೀಯವಾಗಿ ಸಾಕಷ್ಟು ಅಪಾಯವನ್ನು ಒಳಗೊಂಡಿದೆ ಎಂಬ ಅರಿವು ಪಕ್ಷದ ನಾಯಕತ್ವಕ್ಕಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




