ಅಹಿಂದ ಅಧಿಪತ್ಯದ ಮೇಲೆ ‘ಸಾಹುಕಾರ್’ ಕಣ್ಣು: ಸತೀಶ್ ಜಾರಕಿಹೊಳಿಗೆ ವರವಾಯ್ತಾ ದಾವಣಗೆರೆ ದಂಗಲ್..?
ಈ ಬೆಳವಣಿಗೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಸತೀಶ್ ಜಾರಕಿಹೊಳಿ ಅವರು, ಇದೀಗ ಡ್ಯಾಮೇಜ್ ಕಂಟ್ರೋಲ್'ಗೆ ಮುಂದಾಗಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಬಳಿಕ ಅಹಿಂದ ಅಧಿಪತ್ಯವನ್ನು ಮುನ್ನಡೆಸುವ ತಂತ್ರ ಹೊಂದ್ದಾರೆಂದು ಹೇಳಲಾಗುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತರಿಗೆ ಹೇಗೆ ವೋಟ್ ಬ್ಯಾಂಕ್ ಇದೆಯೋ, ಅದೇ ರೀತಿ ಅಹಿಂದಗೂ ತನ್ನ ಮತಬ್ಯಾಂಕ್ ಇದೆ. ಚೂರು ಚೂರಾಗಿದ್ದ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳಿಗೆ ಸಮಾಜವಾದದ ಬೆಸುಗೆ ಹಾಕಿದ್ದೇ ಸಿದ್ದರಾಮಯ್ಯ. ಇದೇ ಅಹಿಂದ ಬಲದಿಂದ ಸಿದ್ದರಾಮಯ್ಯ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯೂ ಆಗಿದ್ದಾರೆ. ಈಗ ಅವರ ಬಳಿಕ ಯಾರು ಈ ಅಹಿಂದ ಅಧಿಪತಿ ಎನ್ನುವ ಚರ್ಚೆ ಶುರುವಾಗಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಎದುರಾಗಿರುವ ಸಂದರ್ಭವೊಂದು ಸತೀಶ್ ಜಾರಕಿಹೊಳಿಯವರಿಗೆ ವರವಾಗಿ ಪರಿಣಮಿಸಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಳಿಕ, ರಾಜ್ಯ ಕಾಂಗ್ರೆಸ್ ಮುಸ್ಲಿಂ ನಾಯಕರ ಬಂಡಾಯ ಎದುರಿಸುತ್ತಿದೆ. ಅಲ್ಪಸಂಖ್ಯಾತರ ಮೆಚ್ಚಿನ ಪಕ್ಷ ಇದೀಗ ಅದೇ ಅಲ್ಪಸಂಖ್ಯಾತರ ಆಕ್ರೋಶಕ್ಕೆ ಗುರಿಯಾಗಿದೆ.
ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ನಾಸೀರ್ ಅಹ್ಮದ್ ಅವರನ್ನು ವಜಾಗೊಳಿಸಲಾಗಿದ್ದು, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥರಾಗಿದ್ದ ಕೆ.ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಈ ಕ್ರಮಗಳು ವಿಶೇಷವಾಗಿ ಅಲ್ಪಸಂಖ್ಯಾತ ಮತಬ್ಯಾಂಕ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಸತೀಶ್ ಜಾರಕಿಹೊಳಿ ಅವರು, ಇದೀಗ ಡ್ಯಾಮೇಜ್ ಕಂಟ್ರೋಲ್'ಗೆ ಮುಂದಾಗಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಬಳಿಕ ಅಹಿಂದ ಅಧಿಪತ್ಯವನ್ನು ಮುನ್ನಡೆಸುವ ತಂತ್ರ ಹೊಂದ್ದಾರೆಂದು ಹೇಳಲಾಗುತ್ತಿದೆ.
ಮೇ 4 ರಂದು ಉಪಚುನಾವಣೆ ಫಲಿತಾಂಶ ಪ್ರಕಟವಾದ ನಂತರ, ಎಚ್.ಸಿ.ಮಹದೇವಪ್ಪ ಮತ್ತು ಕೆ.ಎನ್.ರಾಜಣ್ಣ ಅವರೊಂದಿಗೆ ಜಾರಕಿಹೊಳಿ ದೆಹಲಿಗೆ ತೆರಳಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಅಲ್ಪಸಂಖ್ಯಾತ ನಾಯಕರ ವಿರುದ್ಧ ‘ಕಠಿಣ’ ಕ್ರಮ’ದಿಂದ ಪಕ್ಷದ ಭವಿಷ್ಯಕ್ಕೆ ಆಗಬಹುದಾದ ಹಾನಿ ಬಗ್ಗೆ ಮನವರಿಕೆ ಮಾಡಿಕೊಡಲು ಯೋಜನೆ ರೂಪಿಸಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಇದೇ ಸಂದರ್ಭದಲ್ಲಿ ಜಮೀರ್ ಬೆನ್ನಿಗೆ ನಿಂತಿರುವ ಸಿದ್ದರಾಮಯ್ಯ ಅವರು, ನಿಮ್ಮ ನಿಲುವನ್ನು ಹೈಕಮಾಂಡ್'ಗೆ ವಿವರಿಸಿ ಎಂದು ಜಮೀರ್ ಅವರಿಗೆ ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಜಾರಕಿಹೊಳಿ ಮತ್ತು ಮಹದೇವಪ್ಪ ಅವರು, ಜಮೀರ್ ಅವರೊಂದಿಗೆ ಉಪಾಹಾರ ಸಭೆ ನಡೆಸಿ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ, ಜಾರಕಿಹೊಳಿ–ಶಿವಕುಮಾರ್ ಬಣಗಳ ನಡುವಿನ ಆಂತರಿಕ ಸ್ಪರ್ಧೆ ಕೂಡ ಸ್ಪಷ್ಟವಾಗಿ ಗೋಚರಿಸುತ್ತಿದೆ. ಡಿಕೆ.ಶಿವಕುಮಾರ್ ಅವರು ಎಐಸಿಸಿ ರಾಜ್ಯ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ ಮೂಲಕ ಅಲ್ಪಸಂಖ್ಯಾತ ನಾಯಕರ ವಿರುದ್ಧದ ವರದಿ ಹೈಕಮಾಂಡ್‌ಗೆ ತಲುಪುವಂತೆ ನೋಡಿಕೊಂಡಿದ್ದರು ಎನ್ನಲಾಗುತ್ತಿದೆ. ವರದಿಯಲ್ಲಿ ಜಬ್ಬಾದ್ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಕುರಿತು ಸಾಕ್ಷಿಗಳಿದ್ದವು. ಆಧರೆ, ನಾಸೀರ್ ಹಾಗೂ ಜಮೀರ್ ವಿರುದ್ಧ ಯಾವುದೇ ಪುರಾವೆಗಳು ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಎಲ್ಲಾ ಬೆಳವಣಿಗೆ ನಡುವೆ ಹೇಳಿಕೆ ನೀಡಿರುವ ಮಾಜಿ ಸಚಿವ ರಾಜಣ್ಣ ಅವರು, ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರನ್ನು ರಕ್ಷಿಸುವಲ್ಲಿ ಈ ರೀತಿ ಅಸಹಾಯಕರಾಗುತ್ತಾರೆಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರ 'ವೋಟ್ ಚೋರಿ' ಅಭಿಯಾನವನ್ನು ಟೀಕಿಸಿದ್ದಕ್ಕಾಗಿ ರಾಜಣ್ಣ ಅವರನ್ನು ಈ ಹಿಂದೆ ಸಂಪುಟದಿಂದ ವಜಾಗೊಳಿಸಲಾಗಿತ್ತು.
ವೇಣುಗೋಪಾಲ್ ಅವರನ್ನು ಮನವೊಲಿಸಿದ ನಂತರ ಅವರನ್ನು ಮತ್ತೆ ಸಂಪುಟಕ್ಕೆ ಕರೆತರುವುದಾಗಿ ಸಿಎಂ ರಾಜಣ್ಣ ಮತ್ತು ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಸಿಎಂ ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಇದೇ ವೇಳೆ ರಾಜಣ್ಣ ಅವರು ಹೆಚ್.ಡಿ.ರೇವಣ್ಣ ಜೊತೆ ಸಂಪರ್ಕದಲ್ಲಿದ್ದು, ಭವಿಷ್ಯದಲ್ಲಿ ಜೆಡಿಎಸ್ ಸೇರುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಣ್ಣ ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಸಿದ್ದರಾಮಯ್ಯ ಬಹಳ ಹಿಂದೆಯೇ ಅಸಹಾಯಕರಾಗಿದ್ದರು, ಆದರೆ, ರಾಜಣ್ಣ ಅವರಿಗೆ ಈಗ ಅದರ ಅರಿವಾಗುತ್ತಿದೆ ಎಂದು ಹೇಳಿದ್ದಾರೆ.
ಈ ನಡುವೆ ಸಿದ್ದರಾಮಯ್ಯ ಮೌನ ಕುರಿತು ಮಾತನಾಡಿರುವ ಸಚಿವ ಮಹದೇವಪ್ಪ ಅವರು ಸಿದ್ದರಾಮಯ್ಯ ಅವರು ಟಗರು. ‘ಟಗರು ಅಂದರೆ ಟಗರೇ ಅಲ್ವಾ? ಕೋಪಬಂದ್ರೆ ಗುದ್ದುಬಿಡುತ್ತೆ. ರಾಜಣ್ಣ ಅವರಿಗೆ ಸಿಎಂ ಮೇಲೆ ಪ್ರೀತಿ ಇದೆಯಲ್ಲಾ, ಹಾಗಾಗಿ ಅವರು ಸಿಎಂ ಜೋರಾಗಿ ಮಾತಾಡಬೇಕು ಅಂತಾರೆ. ಜೋರಾಗಿ ಮಾತಾಡಿದ್ರು ಇಲ್ಲದಿದ್ದರರೂ ಯಾವ ಯಾವ ಕಾಲದಲ್ಲಿ ಏನು ಮಾಡಬೇಕು ಅಂತ ಮುಖ್ಯಮಂತ್ರಿಗಳಿಗೆ ಗೊತ್ತಿದೆ ಎಂದು ತಿಳಿಸಿದರು.
ಸಿಎಂ ಏನು ಮಾಡ್ತಾ ಇಲ್ಲ? ಅಸಹಾಯಕರು ಎಂಬ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, “ಸಿಎಂ ಯಾವಾಗ ದುರ್ಬಲ ಆಗಿದ್ದಾರೆ, ಯಾವಾಗಲೂ ಗಟ್ಟಿನೇ ಅವರು. ಸಮನ್ವಯತೆ ಕಾಪಾಡೋಕೆ ಏನು ಬೇಕೋ ಅದು ಮಾಡ್ತಾರೆ ಎಂದು ಸಮರ್ಥಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



