'ದಾವಣಗೆರೆ ದಕ್ಷಿಣದಲ್ಲಿ ಅಸಮಾಧಾನ ಇದ್ದಿದ್ದು ನಿಜ, ನಂತರ ಎಲ್ಲ ಸರಿಹೋಯ್ತು, ಸಮರ್ಥ್ ಗೆಲ್ತಾರೆ': ಜಮೀರ್ ಅಹ್ಮದ್ ಖಾನ್
ನನಗೆ ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲ. ಸಿಎಂ ಅವರು ದಾವಣಗೆರೆಗೆ ಹೋಗಲು ಹೇಳಿದ್ದರಂತೆ, ಆದರೆ ಅವರು ಹೋಗಲಿಲ್ಲ ಎಂದು ಸ್ಥಾನದಿಂದ ತೆಗೆದಿದ್ದಾರೆ ಎಂದು ನನಗೆ ಬಂದಿರುವ ಮಾಹಿತಿ.

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಅವರು ರಾಜೀನಾಮೆ ನೀಡಿರುವ ಸಮಯದಲ್ಲಿ ನಾನು ಬೆಂಗಳೂರಿನಲ್ಲಿ ಇರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಸೀರ್ ಅಹ್ಮದ್ ಅವರ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಬೆಂಗಳೂರಿನಲ್ಲಿಂದು ಡಾ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ನನಗೆ ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲ. ಸಿಎಂ ಅವರು ದಾವಣಗೆರೆಗೆ ಹೋಗಲು ಹೇಳಿದ್ದರಂತೆ, ಆದರೆ ಅವರು ಹೋಗಲಿಲ್ಲ ಎಂದು ಸ್ಥಾನದಿಂದ ತೆಗೆದಿದ್ದಾರೆ ಎಂದು ನನಗೆ ಬಂದಿರುವ ಮಾಹಿತಿ. ನನಗೆ ಸಿಎಂ ಅವರ ನಿವಾಸಕ್ಕೆ ಕರೆದಿದ್ದು ಈಗಲೇ ಹೋಗುತ್ತೇನೆ ಎಂದರು.
ದಾವಣಗೆರೆ ದಕ್ಷಿಣದಲ್ಲಿ ಅಸಮಾಧಾನ ಇದ್ದಿದ್ದು ನಿಜ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸಲ್ಮಾನರ ಅಸಮಾಧಾನ ಇದ್ದಿದ್ದು ನಿಜ, ದಾವಣಗೆರೆ ದಕ್ಷಿಣ ಸ್ಥಳೀಯ ಮುಸಲ್ಮಾನ ಮತದಾರರಲ್ಲಿ ಅಸಮಾಧಾನ ಇದ್ದಿದ್ದು ನಿಜ. ಟಿಕೆಟ್ ಕೇಳಿದ್ದರು, ಅವರಿಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದರು, ಆದರೆ ಯಾರು ಏನು ಎಂದು ಯಾರಾದರೂ ಹೆಸರು ಹೇಳಿದ್ದಾರೆಯೇ, ಆಮೇಲೆ ಎಲ್ಲವೂ ಸರಿಹೋಯಿತು. ನಂತರ ನಮ್ಮ ಪಕ್ಷದ ಎಲ್ಲಾ ನಾಯಕರು ಅಭ್ಯರ್ಥಿ ಸಮರ್ಥ್ ಅವರಿಗೆ ಮತ ಕೊಡಿ ಎಂದು ಪ್ರಚಾರದಲ್ಲಿ ಭಾಗಿಯಾಗಿದ್ದರು ಎಂದರು.
ನಾವು ಖಂಡಿತವಾಗಿಯೂ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದರು.
ಸಚಿವ ಜಮೀರ್ ಜೊತೆಗೆ ಇಂದು ಬೆಳಗ್ಗೆ ಪ್ರಿಯಾಂಕ್ ಖರ್ಗೆ, ಭೈರತಿ ಸುರೇಶ್ ಸಹ ಸಿಎಂ ಅವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಜಬ್ಬಾರ್ ರಾಜೀನಾಮೆ ನೀಡಿದ್ದು ಏಕೆ?
ಜಬ್ಬಾರ್ ವಿಚಾರವಾಗಿ ಮಾತನಾಡಿದ ಜಮೀರ್ ಅಹ್ಮದ್, ಸಂವಹನದ ಕೊರತೆ, ಬೇಸರದಿಂದ ಅವರು ಮನನೊಂದು ಮನೆಯಲ್ಲೇ ಉಳಿದಿದ್ದರು. ಅಲ್ಲದೆ, ಅನಾರೋಗ್ಯವೂ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ. ಪಕ್ಷದ ಅಭ್ಯರ್ಥಿಯ ಗೆಲುವು ಮುಖ್ಯ ಎಂದು ಜಬ್ಬಾರ್‌ಗೆ ಮನವಿ ಮಾಡಿದ್ದರೂ, ಪಕ್ಕದ ಮನೆಗೇ ಬಂದು ತಮ್ಮ ಮನೆಗೆ ಎಸ್ಎಸ್ ಮಲ್ಲಿಕಾರ್ಜುನ ಭೇಟಿ ನೀಡಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಜಮೀರ್ ತಿಳಿಸಿದ್ದಾರೆ.
ಇನ್ನು ನಸೀರ್ ಅಹ್ಮದ್ ಅವರ ವಿಷಯದಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ಬಾಗಲಕೋಟೆ ಉಪಚುನಾವಣೆಯ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದರು. ನಸೀರ್ ಅಹ್ಮದ್ ಹತ್ತು ದಿನಗಳ ಕಾಲ ಬಾಗಲಕೋಟೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ದಾವಣಗೆರೆಗೆ ಬಂದು ಹೋಗಲು ಅನುಮತಿ ಕೇಳಿದಾಗ, ಅಲ್ಲಿಯೇ ಉಳಿದು ಕೆಲಸ ಮಾಡಲು ಮುಖ್ಯಮಂತ್ರಿಗಳು ಸೂಚಿಸಿದ್ದರು ಎಂದು ಜಮೀರ್ ಅಹ್ಮದ್ ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



