ರಾಜಕೀಯ

ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ 'ಕೈ' ಶಾಸಕರ ಲಾಬಿ: ಖರ್ಗೆ ಭೇಟಿ; ಸಚಿವ ಸಂಪುಟ ಪುನಾರಚನೆಗೆ ಒತ್ತಾಯ

ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳಾಗಿರುವ ಶಾಸಕರು ತಮ್ಮ ಬೇಡಿಕೆಗಳನ್ನು ನೇರವಾಗಿ ಹೈಕಮಾಂಡ್ ಗಮನಕ್ಕೆ ತರಲು ದೆಹಲಿಗೆ ಭೇಟಿ ನೀಡಿದ್ದಾರೆಂದು ಭೇಟಿಯನ್ನು ತಿಳಿದುಬಂದಿದೆ.

ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ 'ಕೈ' ಶಾಸಕರ ಲಾಬಿ: ಖರ್ಗೆ ಭೇಟಿ; ಸಚಿವ ಸಂಪುಟ ಪುನಾರಚನೆಗೆ ಒತ್ತಾಯ
ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಶಾಸಕರು.
Published On :

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನರ್‌ರಚನೆ ಚರ್ಚೆಗಳು ಜೋರಾಗುತ್ತಿರುವ ನಡುವೆಯೇ, ರಾಜ್ಯದ 15ಕ್ಕೂ ಹೆಚ್ಚು ಶಾಸಕರ ನಿಯೋಗವು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಶೀಘ್ರದಲ್ಲೇ ಸಚಿವ ಸಂಪುಟದಲ್ಲಿ ಬದಲಾವಣೆಗಳಾಗಲಿವೆ ಎಂಬ ಊಹಾಪೋಹಗಳು ಹರಿದಾಡುತ್ತಿರುವ ಸಮಯದಲ್ಲೇ ಈ ಭೇಟಿ ನಡೆದಿರುವುದು ಗಮನಾರ್ಹವಾಗಿದೆ.

ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳಾಗಿರುವ ಶಾಸಕರು ತಮ್ಮ ಬೇಡಿಕೆಗಳನ್ನು ನೇರವಾಗಿ ಹೈಕಮಾಂಡ್ ಗಮನಕ್ಕೆ ತರಲು ದೆಹಲಿಗೆ ಭೇಟಿ ನೀಡಿದ್ದಾರೆಂದು ಭೇಟಿಯನ್ನು ತಿಳಿದುಬಂದಿದೆ.

ಸೋಮವಾರ ಸಂಜೆ ದೆಹಲಿಯಲ್ಲಿರುವ ಖರ್ಗೆ ಅವರ ನಿವಾಸದಲ್ಲಿ ಈ ಸಭೆ ನಡೆದಿದ್ದು, ಬೆಳಿಗ್ಗೆ ಬೆಂಗಳೂರಿನಲ್ಲಿ ಇದ್ದ ಖರ್ಗೆ ಅವರು ನಂತರ ದೆಹಲಿಗೆ ತೆರಳಿ ಶಾಸಕರನ್ನು ಭೇಟಿಯಾದರು ಎಂದು ತಿಳಿದುಬಂದಿದೆ.

ಸಭೆಯ ನಂತರ ಮಾತನಾಡಿದ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು, ಖರ್ಗೆ ಅವರು ನಮ್ಮ ಮನವಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದು, ಪಕ್ಷದ ಹಿತದೃಷ್ಟಿಯಿಂದ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಇದರಿಂದ ಸಚಿವ ಸಂಪುಟ ಪುನರ್‌ರಚನೆ ಶೀಘ್ರದಲ್ಲೇ ನಡೆಯುವ ನಿರೀಕ್ಷೆ ಮತ್ತಷ್ಟು ಬಲವಾಗುತ್ತಿದೆ.

ಈ ನಡುವೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು, ಅನಾವಶ್ಯಕ ಗೊಂದಲ ಸೃಷ್ಟಿಸದಂತೆ ಶಾಸಕರಿಗೆ ಎಚ್ಚರಿಕೆ ನೀಡಿದ ಹಿನ್ನೆಲೆ ಈ ಭೇಟಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಆದರೆ. ಜಯಚಂದ್ರ ಅವರು ಇದಕ್ಕೆ ಪ್ರತಿಕ್ರಿಯಿಸಿ, ಪಕ್ಷದ ಅಧ್ಯಕ್ಷರನ್ನೇ ಭೇಟಿಯಾಗಿರುವುದರಿಂದ ಇದು ಯಾವುದೇ ಶಿಸ್ತು ಉಲ್ಲಂಘನೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಅವಕಾಶವಿದೆ ಎಂಬುದನ್ನೂ ಅವರು ಒತ್ತಿ ಹೇಳಿದ್ದಾರೆ.

ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ ಅವರು ಮಾತನಾಡಿ, ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಹಾಗೂ ದಾವಣಗೆರೆ ದಕ್ಷಿಣ-ಬಾಗಲಕೋಟೆ ಉಪಚುನಾವಣೆ ಫಲಿತಾಂಶಗಳು ಮೇ 4ರಂದು ಹೊರಬಂದ ನಂತರ ಸಚಿವ ಸಂಪುಟ ಪುನರ್‌ರಚನೆ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಈ ನಿಯೋಗದಲ್ಲಿ ಬೆಳ್ಳೂರು ಗೋಪಾಲಕೃಷ್ಣ, ವಿಜಯ ಕುಲಕರ್ಣಿ, ಕೆ. ಶಡಕ್ಷರಿ ಸೇರಿದಂತೆ ಹಲವು ಶಾಸಕರು ಭಾಗಿಯಾಗಿದ್ದು, ಇವರು ಇನ್ನೂ ಕೆಲವು ದಿನಗಳ ಕಾಲ ದೆಹಲಿಯಲ್ಲೇ ಉಳಿದು ಮುಂದಿನ ಹಂತದ ಮಾತುಕತೆಗಳನ್ನು ನಡೆಸಲು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವರನ್ನು ಕೂಡ ಭೇಟಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದರಿಂದ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ಇನ್ನಷ್ಟು ಗಾಢವಾಗುವ ನಿರೀಕ್ಷೆ ಇದೆ.

ಇನ್ನೊಂದೆಡೆ, ಕೆಲವು ಎಸ್‌ಸಿ ಸಮುದಾಯದ ಶಾಸಕರು, ವಿಶೇಷವಾಗಿ ಕೊಳ್ಳೆಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಸೇರಿದಂತೆ ಕೆಲವರು ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾತ್ಕಾಲಿಕವಾಗಿ ಕರ್ನಾಟಕಕ್ಕೆ ಮರಳಿ, ನಂತರ ಮತ್ತೆ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.