ಸಿದ್ದರಾಮಯ್ಯ ರಾಜಕೀಯ ಜೀವನ, ಉತ್ತರಾಧಿಕಾರಿ ಹೇಳಿಕೆಗೆ ಡಾ.ಯತೀಂದ್ರ ನೀಡಿದ ಸ್ಪಷ್ಟನೆಯೇನು?
ರಾಜ್ಯ ಸರ್ಕಾರದಲ್ಲಿ ಸಿಎಂ ಹುದ್ದೆ ಬದಲಾವಣೆ ಕೂಗಿನ ಮಧ್ಯೆ ಯತೀಂದ್ರ ನೀಡಿರುವ ಹೇಳಿಕೆಗೆ ಭಾರೀ ಮಹತ್ವ ಸಿಕ್ಕಿದೆ.

ಬೆಳಗಾವಿ: ತಂದೆಯವರ ರಾಜಕೀಯ ಜೀವನ ಅಂತಿಮ ಘಟ್ಟದಲ್ಲಿದೆ, ಸತೀಶ್ ಜಾರಕಿಹೊಳಿಯವರು ಅವರ ಉತ್ತರಾಧಿಕಾರಿಯಾಗಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ರಾಜಕೀಯವಾಗಿ ಭಾರೀ ಸದ್ದು ಮಾಡುತ್ತಿದೆ.
ರಾಜ್ಯ ಸರ್ಕಾರದಲ್ಲಿ ಸಿಎಂ ಹುದ್ದೆ ಬದಲಾವಣೆ ಕೂಗಿನ ಮಧ್ಯೆ ಯತೀಂದ್ರ ನೀಡಿರುವ ಹೇಳಿಕೆಗೆ ಭಾರೀ ಮಹತ್ವ ಸಿಕ್ಕಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಯತೀಂದ್ರ, ತಂದೆಯವರು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡವರು. ಅದೇ ಸಿದ್ಧಾಂತದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಕೂಡ ನಂಬಿಕೆ ಇಟ್ಟುಕೊಂಡು ಹೋಗುತ್ತಿದ್ದಾರೆ. ಆ ರೀತಿ ಸೈದ್ಧಾಂತಿಕವಾಗಿ ರಾಜಕಾರಣ ಮಾಡುವವರನ್ನು ಲೀಡ್ ಮಾಡಲಿ ಅನ್ನೋ ಉದ್ದೇಶ ಇಟ್ಟುಕೊಂಡು ಹೇಳಿದ್ದೇನೆ. ರಾಜಕೀಯ ಉತ್ತರಾಧಿಕಾರಿ ಬಗ್ಗೆ ನಾನು ಮಾತನಾಡಿಲ್ಲ ಎಂದಿದ್ದಾರೆ.
2028ರ ವಿಧಾನಸಭಾ ಚುನಾವಣೆಯಲ್ಲಿ ತಂದೆಯವರು ಸ್ಪರ್ಧಿಸಲ್ಲ: ಡಾ. ಯತೀಂದ್ರ
ಮುಂದಿನ ರಾಜಕೀಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂಬ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಯತೀಂದ್ರ, 2028ರ ವಿಧಾನಸಭಾ ಚುನಾವಣೆಯಲ್ಲಿ ತಂದೆಯವರು ಸ್ಪರ್ಧಿಸಲ್ಲ ಎಂದಿದ್ದಾರೆ. ಅದು ಆದ ಮೇಲೆ ಜಾತ್ಯತೀತ ಸಿದ್ಧಾಂತ ಇಟ್ಟುಕೊಂಡ ಸಾಕಷ್ಟು ನಾಯಕರಿದ್ದಾರೆ. ಇವರೆಲ್ಲರನ್ನೂ ಸತೀಶ್ ಜಾರಕಿಹೊಳಿ ಮುನ್ನಡೆಸಲಿ ಎಂದರು.
2028ರ ನಂತರ ಆ ರೀತಿ ಲೀಡ್ ಮಾಡೋರು ಬೇಕು. ಸೈದ್ಧಾಂತಿಕ ರಾಜಕಾರಣ ಮಾಡುವವರ ಪೈಕಿ ಸಚಿವ ಸತೀಶ್ ಸಹ ಒಬ್ಬರು. ಆ ರೀತಿ ಸಿದ್ಧಾಂತ ಇಟ್ಟುಕೊಂಡವರಿಗೆ ಸತೀಶ್ ಮಾರ್ಗದರ್ಶನ ಮಾಡಲಿ. ನಾಳೆಯೇ ಕೊನೆ ದಿನ ಅಲ್ಲ, 2028ರ ಚುನಾವಣೆ ಗಮನದಲ್ಲಿಟ್ಟುಕೊಂಡು ಹೇಳಿರುವೆ ಎಂದಿದ್ದಾರೆ.
ನವೆಂಬರ್ ಕ್ರಾಂತಿ ಕೇವಲ ಊಹೆ
ನವೆಂಬರ್ ಕ್ರಾಂತಿ ಕೇವಲ ಊಹಾಪೋಹ. ನಾಯಕತ್ವದ ಬದಲಾವಣೆ ಪ್ರಶ್ನೆ ಇಲ್ಲ, ಪಕ್ಷದಲ್ಲಿ ಆ ರೀತಿ ಚರ್ಚೆ ನಡೆದಿಲ್ಲ. ಆ ರೀತಿ ಸಿಎಂ ಆಗುವ ಅರ್ಹತೆ ಇದ್ದವರು ಹಲವು ನಾಯಕರು ಇದ್ದಾರೆ. ಈ ಬಗ್ಗೆ ಎಲ್ಲಾ ಶಾಸಕರು ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸದ್ಯಕ್ಕೆ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ. ಸಿದ್ದರಾಮಯ್ಯ ಹೊರತುಪಡಿಸಿದರೆ ಅವರ ಸ್ಥಾನ ತುಂಬುವ ಶಕ್ತಿ ಸತೀಶ್‌ಗೆ ಖಂಡಿತಾ ಇದೆ. ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿಯಾದ ಬಳಿಕ ಆ ಸ್ಥಾನ ತುಂಬುವ ಶಕ್ತಿ ತುಂಬುವ ಕೆಲವೇ ನಾಯಕರಲ್ಲಿ ಸತೀಶ್ ಜಾರಕಿಹೊಳಿ ಒಬ್ಬರು ಎಂದರು.
ನಿನ್ನೆ ಡಾ. ಯತೀಂದ್ರ ಹೇಳಿದ್ದೇನು?
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಎಂಎಲ್‌ಸಿ ಡಾ. ಯತೀಂದ್ರ, ನಮ್ಮ ತಂದೆಯವರು ರಾಜಕೀಯದ ಕೊನೆಗಾಲದಲ್ಲಿದ್ದಾರೆ. ವೈಚಾರಿಕವಾಗಿ ಪ್ರಗತಿಪರ ತತ್ವ, ಸಿದ್ಧಾಂತ ಇರುವ ನಾಯಕ ಬೇಕು. ಮಾರ್ಗದರ್ಶನ ಮಾಡಿ ನೇತೃತ್ವ ವಹಿಸಿಕೊಳ್ಳುವ ನಾಯಕ ಬೇಕು. ಸಚಿವ ಸತೀಶ್ ಜಾರಕಿಹೊಳಿ ಅಂತಹ ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




