ರಾಜಕೀಯ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮದ್ದೂರಿನಿಂದ ನನ್ನ ಅಥವಾ ಅಭಿಷೇಕ್ ಸ್ಪರ್ಧೆ ಖಚಿತ: ಸುಮಲತಾ ಅಂಬರೀಷ್

2019ರ ಲೋಕಸಭಾ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೆ. ಈಗ ನಾನು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮದ್ದೂರಿನಿಂದ ನನ್ನ ಅಥವಾ ಅಭಿಷೇಕ್ ಸ್ಪರ್ಧೆ ಖಚಿತ: ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್
Published On :

ಮದ್ದೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಂಡಿತ. ಅದು ಯಾವ ಕ್ಷೇತ್ರ ಎಂಬುದನ್ನು ಬಿಜೆಪಿ ವರಿಷ್ಠರು ತೀರ್ಮಾನ ಮಾಡುತ್ತಾರೆ. ಆದರೆ, ಮದ್ದೂರು ಕ್ಷೇತ್ರ ನನ್ನ ಪ್ರಥಮ ಆಯ್ಕೆಯಾಗಿದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಪಕ್ಷದ ವರಿಷ್ಠರ ತೀರ್ಮಾನ

ನಿನ್ನೆ ಅಂಬರೀಷ್ ಅವರ 7ನೇ ವರ್ಷದ ಪುಣ್ಯತಿಥಿ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ದೊಡ್ಡ ಅರಸಿನಕೆರೆ ಗ್ರಾಮದ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಮುಂದಿನ ರಾಜಕೀಯ ಹೆಜ್ಜೆ ಬಗ್ಗೆ ಮಾತನಾಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೆ. ಈಗ ನಾನು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ಪಕ್ಷದ ನಾಯಕರು ಕೈಗೊಳ್ಳುವ ತೀರ್ಮಾನದ ಮೇಲೆ ನಾನು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದಲೇ ಸ್ಪರ್ಧೆಗಿಳಿಯುವಂತೆ ಬಿಜೆಪಿ ನಾಯಕರು ಆಹ್ವಾನ ನೀಡಿದ್ದರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ರಾಜಕಾರಣಕ್ಕೆ ಬರುವ ಮನಸ್ಸು ಇಲ್ಲ ಎಂದು ಹೇಳಿ ನಿರಾಕರಿಸಿದ್ದೆ. ಮದ್ದೂರು ನನ್ನ ಪತಿ ದಿ.ಅಂಬರೀಶ್ ಅವರ ಕರ್ಮಭೂಮಿಯಾಗಿದೆ. ಹೀಗಾಗಿ ನಾನು ಅಥವಾ ಪುತ್ರ ಅಭಿಷೇಕ ಅಂಬರೀಶ್ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಂಬಿ ಅಭಿಮಾನಿಗಳ ಅಪೇಕ್ಷೆಯಾಗಿದೆ. ನಮ್ಮಿಬ್ಬರಲ್ಲಿ ಒಬ್ಬರು ಸ್ಪರ್ಧೆಗಿಳಿದರೆ ಅದು ಈ ಕ್ಷೇತ್ರದಿಂದಲೇ ಮಾತ್ರ ಎಂದರು.

ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶ ಕುರಿತು ನಿರ್ಧಾರ ಕೈಗೊಳ್ಳುವಲ್ಲಿ ಅವನೇ ಸರ್ವ ಸ್ವತಂತ್ರನಾಗಿದ್ದಾನೆ. ಸೂಕ್ತ ಸಮಯದಲ್ಲಿ ಆತ ತಂದೆ ಅಂಬರೀಷ್ ಹಿರಿಯ ಬೆಂಬಲಿಗರು, ಮುಖಂಡರು ಹಾಗೂ ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿದ ನಂತರವೇ ಆತನ ರಾಜಕೀಯ ಪ್ರವೇಶ ನಿರ್ಧಾರವಾಗಲಿದೆ ಎಂದರು.

ಕಾಂಗ್ರೆಸ್‌ ಆತಂರಿಕ ವಿಚಾರ

ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟ ಕಾಂಗ್ರೆಸ್ ಪಕ್ಷದ ವಿಚಾರ. ಇದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ರಾಜಕಾರಣ ಅಂದ ಮೇಲೆ ಯಾವುದೇ ಪಕ್ಷದಲ್ಲಿ ಅಧಿಕಾರಕ್ಕಾಗಿ ಗೊಂದಲ ನಡೆಯುವುದು ಸರ್ವೆ ಸಾಮಾನ್ಯವಾಗಿದೆ. ಆದರೆ, ಕಾಂಗ್ರೆಸ್‌ನಲ್ಲಿ ಕುರ್ಚಿ ಕಾಳಗ ಅತಿರೇಕಕ್ಕೆ ಹೋಗಿದೆ. ಈ ಬಗ್ಗೆ ಮುಂದೆ ಏನಾಗುತ್ತದೆ ಕಾದು ನೋಡೋಣ ಎಂದು ಸುಮಲತಾ ತಿಳಿಸಿದರು.

ಪುತ್ರ ಅಭಿಷೇಕ್ ಅಂಬರೀಶ್ ಮಾತನಾಡಿ, ನನ್ನ ರಾಜಕೀಯ ಪ್ರವೇಶ ಮತ್ತು ಚುನಾವಣೆ ಸ್ಪರ್ಧೆ ಬಗ್ಗೆ ಯಾವುದೇ ವೈಯಕ್ತಿಕ ನಿರ್ಧಾರ ಕೈಗೊಳ್ಳುವುದಿಲ್ಲ. ನನ್ನ ತಾಯಿ ಸುಮಲತಾ ಅಂಬರೀಶ್ ಮತ್ತು ಕುಟುಂಬ ಹಾಗೂ ತಂದೆ ಆಪ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.