ರೈತರು, ಬಾಣಂತಿಯರು, ಅಧಿಕಾರಿಗಳ ಸಮಾಧಿ ಮೇಲೆ ನಡೆಸುತ್ತಿರುವ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ: ಆರ್. ಅಶೋಕ
ಶೇಕಡಾ 60 ಕಮಿಷನ್ ಸರ್ಕಾರ' ಪ್ರಾಮಾಣಿಕ ಅಧಿಕಾರಿಗಳನ್ನು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತೆ ಮಾಡುತ್ತಿದೆ. ಮೂರನೇ ಬಾರಿಗೆ ಬಿಯರ್ ದರ ಹೆಚ್ಚಾಗಿದೆ.

ಚಿಕ್ಕಮಗಳೂರು: ರಾಜ್ಯದ ಸಾಮಾನ್ಯ ಜನರು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯನ್ನು ಎದುರಿಸುತ್ತಿರುವಾಗ, ಗಡಿಯಲ್ಲಿ ಯುದ್ಧದಂತಹ ಪರಿಸ್ಥಿತಿ ಮುಂದುವರಿದಿರುವಾಗ, ರಾಜ್ಯ ಸರ್ಕಾರಕ್ಕೆ 'ಸಾಧನಾ ಸಮಾವೇಶ'ದ ಅಗತ್ಯವಿತ್ತೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನಿಸಿದರು.
ರೈತರು, ಬಾಣಂತಿಯರು ಮತ್ತು ಪ್ರಾಮಾಣಿಕ ಅಧಿಕಾರಿಗಳ ಸಮಾಧಿಗಳ ಮೇಲೆ ರಾಜ್ಯ ಸರ್ಕಾರ ಸಾಧನಾ ಸಮಾವೇಶ ನಡೆಸಲು ಹೊರಟಿದೆ ಎಂದು ಕಿಡಿಕಾರಿದರು. ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ. ಕಳೆದ ಎರಡು ವರ್ಷಗಳಲ್ಲಿ, ಸುಮಾರು 2,000 ರೈತರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ, 'ಶೇಕಡಾ 60 ಕಮಿಷನ್ ಸರ್ಕಾರ' ಪ್ರಾಮಾಣಿಕ ಅಧಿಕಾರಿಗಳನ್ನು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತೆ ಮಾಡುತ್ತಿದೆ. ಮೂರನೇ ಬಾರಿಗೆ ಬಿಯರ್ ದರ ಹೆಚ್ಚಾಗಿದೆ. ಖಜಾನೆ ಖಾಲಿಯಾಗಿದ್ದು, ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ. ಮದ್ಯದ ದರ ಹೆಚ್ಚಳ ಆಗಿರುವುದರಿಂದ ಕಳ್ಳತನ ಹೆಚ್ಚಾಗಲಿದೆ.
ಜನೌಷಧಿ ಯೋಜನೆಗೆ ಎಳ್ಳು ನೀರು ಹಾಕಿದೆ. ಎರಡು ವರ್ಷ ತುಂಬುತ್ತಿರುವ ಬೇಜವಬ್ದಾರಿ ಸರ್ಕಾರ ಇದು ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು. 'ಎರಡು ವರ್ಷಗಳ ಸರ್ಕಾರದ ಸಾಧನೆ ಏನು, ಯಾವುದಾದರೂ ಅಣೆಕಟ್ಟೆ ಕಟ್ಟಿದ್ದಾರಾ, ಕಟ್ಟಿರುವ ಅಣೆಕಟ್ಟೆಯ ಎತ್ತರ ಜಾಸ್ತಿ ಮಾಡಿದ್ದಾರಾ, ಗೇಟ್ ರಿಪೇರಿ ಸಾಧ್ಯವಾಗಿಲ್ಲ. ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ' ಎಂದು ಪ್ರಶ್ನಿಸಿದರು.
ಗುತ್ತಿಗೆದಾರರಿಗೆ ಬಿಲ್ ಪಾವತಿಯಗಿಲ್ಲ. ಕಮಿಷನ್ ಮೊತ್ತ ಶೇ 60ಕ್ಕೆ ಏರಿಕೆಯಾಗಿದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ₹187 ಕೋಟಿ ಲೂಟಿ ಮಾಡಿದರು. ಪ್ರಾಮಾಣಿಕ ಅಧಿಕಾರಿಗಳು ಬಲಿಯಾದರು, 2 ಸಾವಿರ ರೈತರ ಆತ್ಮಹತ್ಯೆಯಾಗಿದೆ. ಎಲ್ಲರ ಸಮಾಧಿ ಮೇಲೆ ಸಾಧನಾ ಸಮಾವೇಶ ನಡೆಸಲು ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶ ಯುದ್ಧದ ಸಂದರ್ಭ ಎದುರಿಸುತ್ತಿದೆ. ಈ ವೇಳೆ ಸಮಾವೇಶ ಬೇಕೆ? ಕಾಂಗ್ರೆಸ್ ಗೆ ಭವಿಷ್ಯ ಇಲ್ಲ. ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಸಾಧನಾ ಸಮಾವೇಶ ಮುಗಿದ ಬಳಿಕ ಸರ್ಕಾರ ಉಳಿಯುವುದು ಅನುಮಾನ ಎಂದರು.
ಪಾಕಿಸ್ತಾನದ ಸುಳ್ಳುಗಳ ಬಗ್ಗೆ ಇತರ ರಾಷ್ಟ್ರಗಳಿಗೆ ತಿಳಿಸಲು ಮೋದಿ ಸರ್ಕಾರ ಸರ್ವಪಕ್ಷ ಸಂಸದೀಯ ನಿಯೋಗವನ್ನು ಕಳುಹಿಸುತ್ತಿದೆ. ಕಾಂಗ್ರೆಸ್ ತನ್ನದೇ ಆದ ಸಂಸದ ಶಶಿ ತರೂರ್ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರಿಂದ ಪಾಠ ಕಲಿಯಬೇಕು. ಜನರು ಕಾಂಗ್ರೆಸ್ ಸರ್ಕಾರಕ್ಕೆ ದಾರಿ ತೋರಿಸಲು ಕಾಯುತ್ತಿದ್ದಾರೆ" ಎಂದು ಅಶೋಕ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



