ಜಾತಿಗಣತಿ ವಿರೋಧಿಸಿದ ಬಿಜೆಪಿ, ಈಗ ಮರು ಸಮೀಕ್ಷೆ ವಿರೋಧಿಸುತ್ತಿರುವುದೇಕೆ: ಡಿ.ಕೆ ಶಿವಕುಮಾರ್ ಪ್ರಶ್ನೆ
ಮನೆ ಮನೆಗೆ ಹೋಗಿ ನಮ್ಮ ಅಧಿಕಾರಿಗಳು ಸಮೀಕ್ಷೆ ಮಾಡಿ ಚೀಟಿಯನ್ನು ಅಂಟಿಸಿದ್ದರು. ಅವರು ಮಾಡಿದ್ದು ವೈಜ್ಞಾನಿಕವಲ್ಲವೇ?

ನವದೆಹಲಿ: ಜಾತಿಗಣತಿ ವಿರೋಧಿಸಿದ ಬಿಜೆಪಿ, ಈಗ ಗೊಂದಲ ನಿವಾರಿಸುವ ಸರ್ಕಾರದ ತೀರ್ಮಾನವನ್ನು ವಿರೋಧಿಸುತ್ತಿರುವುದೇಕೆ?" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, "ಜಾತಿ ಗಣತಿ ವರದಿ ವಿರೋಧ ಮಾಡಿದವರು ಅವರಲ್ಲವೇ? ಅವರು ಜಾತಿಗಣತಿ ವರದಿ ಸ್ವೀಕಾರ ಮಾಡಲಿಲ್ಲ ಯಾಕೆ? ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಈ ವರದಿಯಲ್ಲಿ ಯಾರ ಅಂಕಿ ಅಂಶಗಳು ಬಿಟ್ಟುಹೋಗಿವೆ ಅವರ ಮಾಹಿತಿಯನ್ನು ಸೇರಿಸಲು ಅವಕಾಶ ನೀಡಲಾಗುವುದು. ಈಗಾಗಲೇ ನೀಡಿರುವ ವರದಿಯನ್ನು ನಾವು ಬಳಸಿಕೊಳ್ಳುತ್ತೇವೆ. ಸಮಾಜಗಳಿಗೆ ನ್ಯಾಯ ಒದಗಿಸಬೇಕು, ಗೊಂದಲಗಳನ್ನು ಬಗೆಹರಿಸಲು ನಾವು ಮುಂದಾಗಿದ್ದೇವೆ" ಎಂದು ತಿಳಿಸಿದರು.
ನಾವು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಜೈನ, ಲಂಬಾಣಿ, ಬೆಸ್ತ ಸೇರಿದಂತೆ ಅನೇಕ ಸಮಾಜದ ಜನರು ನನ್ನನ್ನು ಭೇಟಿ ಮಾಡಿ ಆತಂಕ ವ್ಯಕ್ತಪಡಿಸಿದ್ದರು. ನಮ್ಮ ಶಾಸಕರುಗಳು ಅವರ ಅಭಿಪ್ರಾಯ ತಿಳಿಸಿದ್ದರು. ಈ ಹಿಂದೆಯೂ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಾಗಿತ್ತು. ಮನೆ ಮನೆಗೆ ಹೋಗಿ ನಮ್ಮ ಅಧಿಕಾರಿಗಳು ಸಮೀಕ್ಷೆ ಮಾಡಿ ಚೀಟಿಯನ್ನು ಅಂಟಿಸಿದ್ದರು. ಅವರು ಮಾಡಿದ್ದು ವೈಜ್ಞಾನಿಕವಲ್ಲವೇ? ಕಳೆದ ಬಾರಿ ಅನೇಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೇ ತಮ್ಮ ಸಮುದಾಯವನ್ನು ಹೇಳಿಕೊಳ್ಳಲು ಹಿಂಜರಿದರು.
ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರವಾಗಿ ಹತ್ತಾರು ಬಾರಿ ಜಾಹೀರಾತು ನೀಡಲಾಗಿದೆ. ಅಧಿಕಾರಿಗಳು ಹಲವು ಬಾರಿ ಮನೆಗೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದಾರೆ. ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಹೊರರಾಜ್ಯದಲ್ಲಿ ಇರುವವರು ತಮ್ಮ ಮಾಹಿತಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಲಾಗಿದೆ. ನಮ್ಮ ಪಕ್ಷದ ಅಧ್ಯಕ್ಷರು ತಂದೆ ಸ್ಥಾನದಲ್ಲಿ ನಿಂತು ಕೆಲವು ಮಾರ್ಗದರ್ಶನ ನೀಡಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಯಾವ ರೀತಿ ಮಾಡಬೇಕು ಎಂದು ಚರ್ಚೆ ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ 1 ಲಕ್ಷ ಜನರನ್ನು ಒಳಗೊಳ್ಳಬೇಕಾಗುತ್ತದೆ" ಎಂದು ತಿಳಿಸಿದರು.
ಜಾತಿ ಗಣತಿ ವಿಚಾರದಲ್ಲಿ ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿಯಲಾಗಿದೆ ಎಂದು ಕೇಳಿದಾಗ, "ನಾವು ಎಲ್ಲರ ಒತ್ತಡಕ್ಕೂ ಮಣಿದಿದ್ದೇವೆ. ನಾವು ಮಾಧ್ಯಮಗಳ ಒತ್ತಡಕ್ಕೂ ಮಣಿಯುತ್ತೇವೆ" ಎಂದರು. ಸರ್ಕಾರದ ತೀರ್ಮಾನವನ್ನು ವೀರಶೈವ ಸಮಾಜ ಸ್ವಾಗತಿಸಿದೆ ಎಂದು ಕೇಳಿದಾಗ, "ವೀರಶೈವ, ಒಕ್ಕಲಿಗ ಸೇರಿದಂತೆ ಬೇರೆ ಸಮಾಜಗಳ ಸ್ವಾಮೀಜಿಗಳು ನನಗೆ ಕರೆ ಮಾಡಿ ಈ ತೀರ್ಮಾನವನ್ನು ಸ್ವಾಗತಿಸಿದ್ದಾರೆ.
ಎಲ್ಲಾ ಸಮಾಜಗಳ ಸ್ವಾಮೀಜಿಗಳು ತಮ್ಮ ಸಮುದಾಯದವರಿಗೆ ತಿಳುವಳಿಕೆ ನೀಡಿ ಈ ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಮಾಡಬೇಕು. ಈ ಸಮೀಕ್ಷೆಯಲ್ಲಿ ಎಲ್ಲರೂ ತಮ್ಮ ಸಮುದಾಯದ ಬಗ್ಗೆ ಸರಿಯಾಗಿ ವಿವರ ನೀಡಬೇಕು" ಎಂದು ಕರೆ ನೀಡಿದರು.
ಜಾತಿ ಗಣತಿ ವಿಚಾರದಲ್ಲಿ ಹೈಕಮಾಂಡ್ ಮಟ್ಟದಲ್ಲಿ ಡಿ.ಕೆ. ಶಿವಕುಮಾರ್ ಅವರು ಮೇಲುಗೈ ಸಾಧಿಸಿದರೇ ಎಂದು ಕೇಳಿದಾಗ, "ಇದರಲ್ಲಿ ಯಾರ ಕೈ ಮೇಲಾಗುವ ವಿಚಾರವಿಲ್ಲ" ಎಂದು ಸ್ಪಷ್ಟಪಡಿಸಿದರು. ಇದು ನಮ್ಮ ಪಕ್ಷದ ರಾಜಕೀಯ ಅಜೆಂಡಾ. ಇದನ್ನು ಬಿಜೆಪಿಯವರು ಕಾಪಿ ಮಾಡಿದ್ದಾರೆ. ಜಾತಿಗಣತಿ ಮಾಡಿ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕು ಎಂದು ರಾಹುಲ್ ಗಾಂಧಿ ಅವರು ಪ್ರತಿಪಾದಿಸಿದ್ದಾರೆ" ಎಂದು ತಿಳಿಸಿದರು.
ಈ ವಾಲ್ಮೀಕಿ ಹಗರಣಕ್ಕೂ ನಮ್ಮ ಶಾಸಕರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಮ್ಮ ಮುಖಂಡರು ಯಾವುದೇ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿಲ್ಲ. ಅಧಿಕಾರಿಗಳು ದುರ್ಬಳಕೆ ಮಾಡಿದ್ದ ಶೇ.90 ರಷ್ಟು ಹಣವನ್ನು ಮತ್ತೆ ವಶಕ್ಕೆ ಪಡೆಯಲಾಗಿದೆ" ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



