ಜಿಲ್ಲಾ-ತಾಲ್ಲೂಕು ಪಂಚಾಯಿತಿ ಚುನಾವಣೆ: BJP-JDS ಪ್ರತ್ಯೇಕ ಸ್ಪರ್ಧೆ ಸಾಧ್ಯತೆ
ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ವಿಧಾನಸಭಾ ಉಪಚುನಾವಣೆ ಸೇರಿದಂತೆ ನಂತರದ ಎಲ್ಲಾ ಚುನಾವಣೆಗಳಲ್ಲಿ ಎರಡೂ ಮೈತ್ರಿ ಪಕ್ಷಗಳಾಗಿಯೇ ಸ್ಪರ್ಧೆಗಿಳಿದಿತ್ತು.

ಬೆಂಗಳೂರು: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಶೀಘ್ರದಲ್ಲೇ ಘೋಷಣೆಯಾಗಲಿದ್ದು, ಚುನುವಾಣೆಯಲ್ಲಿ ಮೈತ್ರಿ ಪಕ್ಷಗಳಾ ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧೆಗಿಳಿಯುವ ಸಾಧ್ಯತೆಗಳಿವೆ.
ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ವಿಧಾನಸಭಾ ಉಪಚುನಾವಣೆ ಸೇರಿದಂತೆ ನಂತರದ ಎಲ್ಲಾ ಚುನಾವಣೆಗಳಲ್ಲಿ ಎರಡೂ ಮೈತ್ರಿ ಪಕ್ಷಗಳಾಗಿಯೇ ಸ್ಪರ್ಧೆಗಿಳಿದಿತ್ತು.
ಆದರೆ, ಜಿಲ್ಲಾ-ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆಗಿಳಿಯಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ಹಿರಿಯ ನಾಯಕರೊಬ್ಬರು ಮಾತನಾಡಿ, ಪಕ್ಷದ ಆಂತರಿಕ ಚರ್ಚೆಯ ಸಮಯದಲ್ಲಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಿಳಿಯುವಂತೆ ಹಲವರು ಅಭಿಪ್ರಾಯಪಟ್ಟಿದ್ದಾರೆ. ನಾವು ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಬಹುದು, ಆದರೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಸಮಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಪಕ್ಷವಾಗಿ ಮುಂದೆ ಬರುತ್ತೇವೆ. ಎರಡೂ ಪಕ್ಷಗಳು ಸ್ಫರ್ಧೆಗಿಳಿಯಲಿದ್ದು, ಇದು 'ಸ್ನೇಹಪರ ಹೋರಾಟ'ವಾಗಿರುತ್ತದೆ" ಎಂದು ಹೇಳಿದ್ದಾರೆ.
ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಇಲ್ಲ. ಆದರೆ ಕರ್ನಾಟಕದಲ್ಲಿ, ಚುನಾವಣೆಗಳಲ್ಲಿ ಸೋಲು ಕಂಡರೂ ಹಳೆಯ ಮೈಸೂರು ಪ್ರದೇಶದ ಮೇಲೆ ಇನ್ನೂ ನಮ್ಮ ಹಿಡಿತವಿದೆ. ಎನ್‌ಡಿಎ ಪಾಲುದಾರರಾಗಿ, ನಾವು ವಿಧಾನಸಭೆ ಮತ್ತು ಇತರ ಚುನಾವಣೆಗಳಲ್ಲಿ ಒಟ್ಟಾಗಿ ಸ್ಪರ್ಧಿಸುತ್ತೇವೆ. ಆದರೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿ ಪ್ರಾದೇಶಿಕ ಪಕ್ಷವಾಗಿ ಪ್ರತ್ಯೇಕವಾಗಿ ಸ್ಪರ್ಧೆಗಿಳಿಯಬೇಕಾಗುತ್ತವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ಭೇಟಿಯ ನಂತರ ಬಿಜೆಪಿ ಕೂಡ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ.
ಪಕ್ಷದ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ನಮ್ಮದು ರಾಷ್ಟ್ರೀಯ ಪಕ್ಷ. ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ್-ತಾಲ್ಲೂಕು ಚುನಾವಣೆಗಳನ್ನು ಘೋಷಿಸಿದಾಗ, ನಮ್ಮ ರಾಷ್ಟ್ರೀಯ ನಾಯಕರು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ನಾವು ಅವರ ಸೂಚನೆಗಳನ್ನು ಪಾಲಿಸುತ್ತೇವೆಂದು ಹೇಳಿದ್ದಾರೆ.
ಮುಂದಿನ ಒಂದು ವಾರದಲ್ಲಿ, ಬಾಕಿ ಇರುವ ಒಂಬತ್ತು ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆಯನ್ನೂ ಪೂರ್ಣಗೊಳಿಸುತ್ತೇವೆ. ಇದು ಪೂರ್ಣಗೊಂಡ ಬಳಿಕ ಚುನಾವಣೆಗಾಗಿ ಪಕ್ಷವನ್ನು ಬಲಪಡಿಸಲು ಯೋಜನೆಗಳನ್ನು ರೂಪಿಸುತ್ತೇವೆಂದು ತಿಳಿಸಿದ್ದಾರೆ.
ರಾಜ್ಯದಲ್ಲಿ1,130 ಜಿಲ್ಲಾ ಪಂಚಾಯತ್ ಮತ್ತು 3,671 ತಾಲ್ಲೂಕು ಪಂಚಾಯತ್ ಕ್ಷೇತ್ರಗಳಿವೆ. ಪಂಚಾಯತ್ ಚುನಾವಣೆ ಕೊನೆಯದಾಗಿ 2016 ರಲ್ಲಿ ನಡೆದಿತ್ತು. ನಂತರ 2021 ರಲ್ಲಿ ನಡೆಯಬೇಕಿತ್ತು. ಆದರೆ, ನ್ಯಾಯಾಲಯದಲ್ಲಿನ ಪ್ರಕರಣಗಳು, ಕೋವಿಡ್ ಮತ್ತು ಕ್ಷೇತ್ರ ಪುನರ್ವಿಂಗಡಣೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಚುನಾವಣೆಗಳು ವಿಳಂಬವಾಗಿದ್ದವು.
ಕೆಲವು ತಿಂಗಳ ಹಿಂದೆ, ಚುನಾವಣೆ ನಡೆಸುವಂತೆ, ಸಿದ್ಧತೆಗಳ ಆರಂಭಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ನ್ಯಾಯಾಲಯ ಸೂಚನೆ ಬೆನ್ನಲ್ಲೇ ಸರ್ಕಾರ ಚುನಾವಣೆಗೆ ದಿನಾಂಕ ಘೋಷಣೆ ಮಾಡಲು ಸಿದ್ಧತೆ ನಡೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



