ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಿ: ಹೈಕಮಾಂಡ್ ಗೆ ಬಿಜೆಪಿ ಸಂಸದ ಸುಧಾಕರ್ ಆಗ್ರಹ
ಶ್ರೀರಾಮುಲು ನಂತರ ಇದೀಗ ವಿಜಯೇಂದ್ರ ವಿರುದ್ಧ ಮತ್ತೊಬ್ಬ ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ. ಕೆ. ಸುಧಾಕರ್ ಅವರು ಬಹಿರಂಗವಾಗಿಯೇ ಗುಡುಗಿದ್ದಾರೆ.

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು, ಒಬ್ಬರಾದ ಮೆಲೆ ಒಬ್ಬರು ಬಹಿರಂಗವಾಗಿಯೇ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಹಾಗೂ ಶ್ರೀರಾಮುಲು ನಂತರ ಇದೀಗ ವಿಜಯೇಂದ್ರ ವಿರುದ್ಧ ಮತ್ತೊಬ್ಬ ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ. ಕೆ. ಸುಧಾಕರ್ ಅವರು ಬಹಿರಂಗವಾಗಿಯೇ ಗುಡುಗಿದ್ದಾರೆ.
ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸಂದೀಪ್ ಅವರನ್ನು ಆಯ್ಕೆ ಮಾಡಿರುವುದರಿಂದ ಸಿಡಿದೆದ್ದಿರುವ ಸುಧಾಕರ್ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲಾಧ್ಯಕ್ಷರ ನೇಮಕದಲ್ಲಿ ವಿಜಯೇಂದ್ರ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದ ಆರೋಪಿಸಿದ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಸುಧಾಕರ್ ಅವರು, ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿಮ್ಮ ನಾಯಕತ್ವದಲ್ಲಿ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಒಂದು ಸೀಟು ಗೆಲ್ಲಿ ನೋಡೋಣ ಎಂದು ಕೆ. ಸುಧಾಕರ್ ಅವರು ವಿಜಯೇಂದ್ರ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ತಮಗೆ ಬೇಕಾದವರಿಗೆ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷರನ್ನು ಮಾಡಿಕೊಂಡಿದ್ದಾರೆ. ಇವತ್ತಿನ ರಾಜ್ಯಾಧ್ಯಕ್ಷ ಮಿಸ್ಟರ್ ಬಿ.ವೈ. ವಿಜಯೇಂದ್ರ ಅವರ ಧೋರಣೆ ಬೇಸರ ತಂದಿದೆ ಎಂದು ಅಸಮಾಧಾನ ಹೊರಹಾಕಿದರು.
ಬಿಜೆಪಿಯನ್ನು ನಂಬಿ ಇಲ್ಲಿ ಆಂತರಿಕ ಪ್ರಜಾಪ್ರಭುತ್ವ, ಆರ್ಎಸ್ಎಸ್ ಆದರ್ಶ ಇದೆ ಎಂದು ಪಕ್ಷದ ತತ್ವ ಸಿದ್ದಾಂತ ಒಪ್ಪಿ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡಿದೆ. ಬಿಜೆಪಿಗೆ ಮರಳು ಭೂಮಿಯಂತಿದ್ದ ಚಿಕ್ಕಬಳ್ಳಾಪುರದಲ್ಲಿ ನನ್ನ ರಾಜಕೀಯ ಭವಿಷ್ಯವನ್ನು ಒತ್ತೆ ಇಟ್ಟು ಬಿಜೆಪಿ ಸೇರಿದ್ದೆ. ಯಡಿಯೂರಪ್ಪನವರನ್ನು ಸಿಎಂ ಮಾಡಬೇಕು ಎಂದು 17 ಜನ ಬಿಜೆಪಿಗೆ ಬಂದೆವು. ಯಡಿಯೂರಪ್ಪನವರು ರಾಜೀನಾಮೆ ಕೊಟ್ಟ ಮೇಲೆ ಬೊಮ್ಮಾಯಿ ಅವರ ಜೊತೆ ಕೂಡಾ ಅಷ್ಟೇ ವಿಶ್ವಾಸದಿಂದ ಕೆಲಸ ಮಾಡಿದ್ದೇನೆ. ಅಂತಿಮವಾಗಿ ನನಗೆ ಬಿಜೆಪಿ ತತ್ವ ಸಿದ್ದಾಂತ ಅಷ್ಟೇ ಮುಖ್ಯ. ಪಕ್ಷ ಏನು ಹೇಳಿದೆಯೋ ಅದನ್ನು ಮಾಡಿಕೊಂಡು ಬಂದಿದ್ದೇನೆ. ಒಂದು ಬಾರಿ ನನಗೆ ಚಿಕ್ಕಬಳ್ಳಾಪುರದಲ್ಲಿ ಆಘಾತ ಆಯಿತು. ಇವತ್ತು ಪಕ್ಷ ಕಟ್ಟುತ್ತೇವೆ ಎಂದು ಹೊರಟಿದ್ದವರು ಟಾರ್ಗೆಟ್ ಮಾಡಿ ಸೋಲಿಸುವಂತಹ ಪ್ರಯತ್ನ ಮಾಡಿದರು ಎಂದು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಯಾರನ್ನೂ ವಿಶ್ವಾಸಕ್ಕೆ ತೆಗದುಕೊಳ್ಳುವ ಜಾಯಮಾನ ಅವರದ್ದು ಅಲ್ಲ. ಇವರ ದರ್ಪ, ಇವರ ಅಹಂಕಾರ. ಅವರ ಹತ್ತಿರ ಸಾವಿರಾರು ಕೋಟಿ ಇರಬಹುದು. ಇವರ ಹಿಂಬಾಲಕರು ನನ್ನ ಸೋಲಿಸಲು ಪ್ರಯತ್ನ ಪಟ್ಟರು. ಜಿಲ್ಲಾಧ್ಯಕ್ಷರ ವಿಚಾರಕ್ಕೆ ಸೌಜನ್ಯಕ್ಕೂ ನನ್ನ ಜೊತೆ ಚರ್ಚೆ ಮಾಡಿಲ್ಲ. ಫೋನ್ ಮಾಡಿದರೂ ರೆಸ್ಪಾಂಡ್ ಮಾಡಲ್ಲ. ನಡ್ಡಾ ಅವರಿಗೆ ಮೆಸೇಜ್ ಹಾಕಿದರೆ ಅಪಾಯಿಂಟ್ ಮೆಂಟ್ ಕೊಡುತ್ತಾರೆ. ಆದ್ರೆ, ಇವರು ಎರಡು ಮೂರು ಬಾರಿ ಅಪಾಯಿಂಟ್ ಮೆಂಟ್ ಫಿಕ್ಸ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ. ನಮ್ಮನ್ನು ತುಳಿಯಲು, ಸಮಾಧಿ ಮಾಡಲು ಹೊರಟಿದ್ದೀರಾ? ಎಂದು ವಿಜಯೇಂದ್ರರನ್ನು ಖಾರವಾಗಿಯೇ ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



