ರಾಜಕೀಯ

ಎಚ್‌ಡಿ ಕುಮಾರಸ್ವಾಮಿ ಮಟ್ಟ ಹಾಕುವುದು ಅಸಾಧ್ಯ: ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ

ಕುಮಾರಸ್ವಾಮಿ ಅವರ ಬೆನ್ನಿಗೆ ಪಕ್ಷದ ಲಕ್ಷಾಂತರ ಕಾರ್ಯಕರ್ತರು ದೃಢವಾಗಿ ನಿಂತಿದ್ದಾರೆ.

ಎಚ್‌ಡಿ ಕುಮಾರಸ್ವಾಮಿ ಮಟ್ಟ ಹಾಕುವುದು ಅಸಾಧ್ಯ: ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ
ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ
Published On :

ಬೆಂಗಳೂರು: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್‌ ಪಕ್ಷವನ್ನು ದುರ್ಬಲಗೊಳಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಆದರೆ, ಅವರ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಭಾನುವಾರ ಹೇಳಿದರು.

ನಗರದಲ್ಲಿ ನಡೆದ ಜೆಡಿಎಸ್ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, 'ನಮ್ಮದು ಸಮರ್ಥ ನಾಯಕರು ಮತ್ತು ನಿಷ್ಠಾವಂತ ಕಾರ್ಯಕರ್ತರ ಪಕ್ಷವಾಗಿದ್ದು, ನಮ್ಮ ಪಕ್ಷವನ್ನು ಬೇರೆಯವರಿಂದ ನಾಶಮಾಡುವುದು ಅಸಾಧ್ಯ. ಮಾರ್ಚ್‌ನಿಂದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಪಕ್ಷದ ಕಾರ್ಯಕರ್ತರ ಮನೆಗಳಲ್ಲಿದ್ದು, ಪಕ್ಷವನ್ನು ಬಲಪಡಿಸುವತ್ತ ಗಮನ ಹರಿಸುತ್ತೇನೆ. ಸದಸ್ಯತ್ವ ಅಭಿಯಾನವನ್ನು ಮತ್ತಷ್ಟು ಹುರುಪಿನೊಂದಿಗೆ ಮುಂದುವರಿಸಲಾಗುತ್ತದೆ ಎಂದು ಹೇಳಿದರು.

ಕುಮಾರಸ್ವಾಮಿ ಅವರಿಗೆ ಪಕ್ಷದ ಬೆಂಬಲವನ್ನು ಪುನರುಚ್ಚರಿಸಿದ ಅವರು, ಕುಮಾರಸ್ವಾಮಿ ಅವರನ್ನು ಮಟ್ಟ ಹಾಕುವುದು ಅಸಾಧ್ಯವಾದ ಕೆಲಸ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನ ಯೋಜನೆಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದರು.

ಕುಮಾರಸ್ವಾಮಿ ಅವರನ್ನು ಮಟ್ಟ ಹಾಕಲು ಸಾಧ್ಯವಾದರೆ ಜೆಡಿಎಸ್‌ ನೆಲಕಚ್ಚುತ್ತದೆ ಎಂದು ಕಾಂಗ್ರೆಸ್‌ ನಂಬಿದೆ. ಆದರೆ, ಅವರು ಇದರಲ್ಲಿ ಯಶಸ್ವಿಯಾಗುವುದಿಲ್ಲ. ಏಕೆಂದರೆ, ಕುಮಾರಸ್ವಾಮಿ ಅವರ ಬೆನ್ನಿಗೆ ಪಕ್ಷದ ಲಕ್ಷಾಂತರ ಕಾರ್ಯಕರ್ತರು ದೃಢವಾಗಿ ನಿಂತಿದ್ದಾರೆ. ಹೀಗಾಗಿ, ಅವರು ಪ್ರಬಲರಾಗಿದ್ದಾರೆ ಮತ್ತು ಅವರನ್ನು ಮಟ್ಟ ಹಾಕುವುದು ಸುಲಭವಲ್ಲ ಎಂದು ತಿಳಿಸಿದರು.

'ಜೆಡಿಎಸ್‌ ಪಕ್ಷವನ್ನು ಕುಟುಂಬದ ಪಕ್ಷ ಎಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆ. ಯಾರೇ ಆಗಲಿ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿ ಅಲ್ಲಿನ ಗೋಡೆಗಳ ಮೇಲೆ ನೇತಾಡುವ ಫೋಟೊಗಳನ್ನು ನೋಡುವಂತೆ ನಾನು ಒತ್ತಾಯಿಸುತ್ತೇನೆ. ನಂತರ ನೀವು ಯಾವ ಪಕ್ಷವು ನಿಜವಾಗಿಯೂ ಕುಟುಂಬದಿಂದ ನಡೆಸಲ್ಪಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವಿರಿ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಭೆಯನ್ನುದ್ದೇಶಿಸಿ ಮಾತನಾಡಿ, ಸದಸ್ಯರು ಒಗ್ಗಟ್ಟಾಗಿ ಇರುವಂತೆ ಮನವಿ ಮಾಡಿದರು. ಪಕ್ಷ ಸಂಘಟನೆಯಲ್ಲಿ ಹಿಂದೆ ಬೀಳಬೇಡಿ ಎಲ್ಲರೂ ಒಗ್ಗೂಡಿ ಪಕ್ಷವನ್ನು ಬಲಪಡಿಸೋಣ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.