ರಾಜಕೀಯ

ನನ್ನ‌ ವಿರುದ್ಧ ಪ್ರತಿಭಟನೆ ಮಾಡಿದರೆ, ನಿಮ್ಮ ತಂದೆ ಬಂಡವಾಳ ಬಯಲು; ವಿಜಯೇಂದ್ರಗೆ ಪ್ರಿಯಾಂಕ್ ಖರ್ಗೆ ಬೆದರಿಕೆ: ಯತ್ನಾಳ್ ಹೊಸ ಬಾಂಬ್

ರಾಜ್ಯದಲ್ಲಿ ಅಡ್ಜಸ್ಟ್ ಮೆಂಟ್'ಗೆ ಒಳಗಾಗದ ನಾಲ್ವರನ್ನು ಗುರಿ ಮಾಡಲಾಗಿದೆ ಎಂದ ಅವರು, ನಾನು, ಸಿಟಿ.ರವಿ, ಚಕ್ರವರ್ತಿ ಸೂಲಿಬೆಲೆ, ಪ್ರಮೋದ್ ಮುತಾಲಿಕ್, ಪ್ರತಾಪ್ ಸಿಂಹ್ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.

ನನ್ನ‌ ವಿರುದ್ಧ ಪ್ರತಿಭಟನೆ ಮಾಡಿದರೆ, ನಿಮ್ಮ ತಂದೆ ಬಂಡವಾಳ ಬಯಲು; ವಿಜಯೇಂದ್ರಗೆ ಪ್ರಿಯಾಂಕ್ ಖರ್ಗೆ ಬೆದರಿಕೆ: ಯತ್ನಾಳ್ ಹೊಸ ಬಾಂಬ್
ವಿಜಯೇಂದ್ರ- ಬಸನಗೌಡ ಪಾಟೀಲ್ ಯತ್ನಾಳ್ — online desk
Published On :

ವಿಜಯಪುರ: ಕಲಬುರಗಿಯಲ್ಲಿ ನನ್ನ‌ ವಿರುದ್ಧ ಪ್ರತಿಭಟನೆಗೆ ಬರಬೇಡಿ, ಬಂದರೆ ನಿಮ್ಮ ತಂದೆಯ ಬಂಡವಾಳ ಬಯಲು ಮಾಡುತ್ತೇನೆಂದು ವಿಜಯೇಂದ್ರಗೆ ಪ್ರಿಯಾಂಕ್ ಖರ್ಗೆ ಬೆದರಿಕೆ ಹಾಕಿದ್ದರು. ಇದೇ ಕಾರಣಕ್ಕಾಗಿ ವಿಜಯೇಂದ್ರ ಕಲಬುರಗಿಯಲ್ಲಿ ನಡೆದ ಪ್ರತಿಭಟನೆಗೆ ಹೋಗಿರಲಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶನಿವಾರ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಜಯೇಂದ್ರ ಹಿತೈಷಿಗಳೇ ದೊಡ್ಡ ಮಟ್ಟದ ಹೋರಾಟ ಆಯೋಜನೆ ಮಾಡಿದ್ದರು. ಆದರೂ, ವಿಜಯೇಂದ್ರ ಈ ಹೋರಾಟಕ್ಕೆ ಯಾಕೆ ಹೋಗಲಿಲ್ಲ? ಗೈರಾಗಿದ್ದು ಯಾಕೆ? ಸುರಕ್ಷತೆಯ ಭಯವೇ? ಇದಕ್ಕೆ ವಿಜಯೇಂದ್ರನೇ ಉತ್ತರಿಸಬೇಕು.

ವಿಜಯೇಂದ್ರಗೆ ನಿಮ್ಮ ತಂದೆಯ ಎಲ್ಲ ವಿಷಯಗಳನ್ನು ಹೊರ ತೆಗೆಯುತ್ತೇನೆಂದು ಪ್ರಿಯಾಂಕ್ ಖರ್ಗೆಯವರು ಧಮ್ಕಿ ಹಾಕಿದ್ದರು. ಕಲಬುರಗಿಯಲ್ಲಿ ನನ್ನ‌ ವಿರುದ್ಧ ಪ್ರತಿಭಟನೆಗೆ ಬರಬೇಡಿ, ಬಂದರೆ ನಿಮ್ಮ ತಂದೆಯ ಬಂಡವಾಳ ಬಯಲು ಮಾಡುತ್ತೇನೆಂದು ವಿಜಯೇಂದ್ರಗೆ ಪ್ರಿಯಾಂಕ್ ಖರ್ಗೆ ಬೆದರಿಕೆ ಹಾಕಿದ್ದರು. ಈ ಭಯದ ಕಾರಣಕ್ಕೆ ವಿಜಯೇಂದ್ರ ಹೋಗಿಲ್ಲ ಎಂದು ದೂರಿದರು.

ಇದೇ ವೇಳೆ ರಾಜ್ಯದಲ್ಲಿ ಅಡ್ಜಸ್ಟ್ ಮೆಂಟ್'ಗೆ ಒಳಗಾಗದ ನಾಲ್ವರನ್ನು ಗುರಿ ಮಾಡಲಾಗಿದೆ ಎಂದ ಅವರು, ನಾನು, ಸಿಟಿ.ರವಿ, ಚಕ್ರವರ್ತಿ ಸೂಲಿಬೆಲೆ, ಪ್ರಮೋದ್ ಮುತಾಲಿಕ್, ಪ್ರತಾಪ್ ಸಿಂಹ್ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.

ಸಿಟಿ ರವಿ ಅವರನ್ನು ಮುಗಿಸಬೇಕೆಂಬ ಷಡ್ಯಂತ್ರ ಅಡಗಿದೆ. ರಾಜ್ಯದಲ್ಲಿ ಜನಪ್ರತಿನಿಧಿಗಳಿಗೆ ಭದ್ರತೆ ಇಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸುವರ್ಣಸೌಧದಲ್ಲಿ ಗೂಂಡಾಗಳು ಹೊಕ್ಕರು, ಅವರ ಹೆಸರು ಕೇಳಿದ್ದೀರಿ. ಏನೇನಾ ಆಗಿದೆ ಎಂದು ತಿಳಿದಿದೆ. ಸುವರ್ಣಸೌಧದಲ್ಲಿ ಇಷ್ಟೊಂದು ಭದ್ರತೆ ಇಧ್ದಾಗಲೇ ಒಳಗೆ ಬಂದರು. ಕಾನೂನು ಸುವ್ಯವಸ್ಥೆ ಎಲ್ಲಿದೆ? ಯಾವ ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ? ಅವರನ್ನು ಒಳಗೆ ಹೇಗೆ ಬಿಟ್ಟಿರಿ? ಸಿಟಿರವಿಯವರನ್ನು ಯಾವಾಗ ಬಂಧಿಸಿದರು ಎಂದು ಗೃಹ ಸಚಿವರಿಗೆ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಗೊತ್ತಿರಲಿಲ್ಲ ಎಂದರು,

ಬಳಿಕ ಬಿಜೆಪಿ ಮಾಜಿ ಶಾಸಕರ ಸಭೆ ವಿಚಾರ ಕುರಿತು ಮಾತನಾಡಿ, ಶುಕ್ರವಾರ ನನಗೆ 17 ಮಂದಿ ಕರೆ ಮಾಡಿದ್ದರು. ನಾವು ಯಾರೂ ಆತ್ಮಸಾಕ್ಷಿಯಾಗಿ ಹೋಗಿಲ್ಲ. ರಾಜ್ಯಧ್ಯಕ್ಷ ಹುದ್ದೆಯಲ್ಲಿರುವುದರಿಂದ ಹೋಗಿದ್ದೆವು. ನಾವು ಪಕ್ಷದ ವಿರುದ್ಧ ಹೋಗಿಲ್ಲ. ಅವರು ಸಭೆ ಕರೆದಿರುವ ಬಗ್ಗೆ ನಮ್ಮದೇನು ವಿರೋಧವಿಲ್ಲ. ಅವರೆಲ್ಲ ಮಾಜಿ ಆಗರು ಕಾರಣರು ಯಾರು? ಅದು ಅಲ್ಲಿ ಚರ್ಚೆ ಆಗಬೇಕಿತ್ತಲ್ಲ? ಅದರ ಆತ್ಮಾವಲೋಕನ ಆಗಬೇಕಿತ್ತಲ್ಲ? ಅವರೆಲ್ಲಾ ಆಯ್ಕೆ ಆಗಿದ್ದರೆ ಇಂದು ನಮ್ಮ ಸರ್ಕಾರ ಇರುತ್ತಿತ್ತು. ಅವರೆನ್ನೆಲ್ಲ ಸೋಲಿಸಿದ ಕಾಣದ ಕೈಗಳು ಯಾವುವು? ಆ ಕೈಗಳು ಎರಡೋ, ನಾಲ್ಕೋ ಅನ್ನುವುದು ಚರ್ಚೆ ಆಗಬೇಕಿತ್ತಲ್ಲ? ಈಗ ಸಾಂತ್ವನ ಹೇಳುತ್ತಿದ್ದಾರೆ. ನೀವು ಸೋತಿದ್ದೀರಿ, ಪಾಪ ನಾವು ಇಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೆವು. 2 ವರ್ಷಗಳ ನಂತರ ಇವರಿಗೆ ಈಗ ಬೇಕಾಗಿದೆ ಎಂದು ಟೀಕಿಸಿದರು.

ಇದೇ ವೇಳೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಅವರು, ಮಾಧ್ಯಮಗಳಲ್ಲಿ ಸುದ್ದಿ ನೋಡಿ ಅಂಜಿ ಹೋದೆ.. ನಡುಗಿ ಹೋದೆ.. ಅಖಾಡಕ್ಕಿಳಿದ ಯಡಿಯೂರಪ್ಪ.. ಯತ್ನಾಳ್ ಗೆ ಭಾರೀ ಹಿನ್ನಡೆ.. ವಾಹ್ ರೇ ವಾಹ್ ಮಾಧ್ಯಮಗಳೇ ಎಂದು ಯತ್ನಾಳ್ ಗರಂ ಆದರು. ಯಾರು ಅಖಾಡಕ್ಕಿಳಿದರೆ ಆಗೋದೇನಿದೆ? ಯತ್ನಾಳ್ ಗೆ ಯಾರೂ ಏನೂ ಮಾಡೋಕೆ ಆಗಲ್ಲ. ನೀವು ಎರಡು ದಿನ ಸುದ್ದಿ ಹೊಡಿರಿ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.