ಕೇಂದ್ರದ ಅನ್ಯಾಯದ ವಿರುದ್ದ ಹೋರಾಟ ನಡೆಸಲು ದಕ್ಷಿಣ ರಾಜ್ಯಗಳ ಜತೆ ಮಾತುಕತೆ: ಸಿಎಂ ಸಿದ್ದರಾಮಯ್ಯ
ಕ್ಷೇತ್ರ ಮರುವಿಂಗಡಣೆ ನಡೆದಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಕೇಂದ್ರ ಗೃಹ ಸಚಿವರ ಹೇಳಿಕೆ ನಂಬಿಕೆಗೆ ಅರ್ಹವಾಗಿಲ್ಲ.

ಬೆಂಗಳೂರು: ಕೇಂದ್ರದ ರಾಜ್ಯಕ್ಕೆ ಆಗುತ್ತಿರುವ ಸರಣಿ ಅನ್ಯಾಯಗಳನ್ನು ನೋಡಿಯೂ ರಾಜ್ಯದಿಂದ ಲೋಕಸಭೆಗೆ ಆರಿಸಿಹೋಗಿರುವ ಹದಿನೇಳು ಬಿಜೆಪಿ ಮತ್ತು ಇಬ್ಬರು ಜೆಡಿಎಸ್ ಸಂಸದರು ಜೀತದಾಳುಗಳಂತೆ ಬಾಯಿಗೆ ಬೀಗಹಾಕಿಕೊಂಡು ಕೂತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಬಳಿಕ ದಕ್ಷಿಣ ಭಾರತದ ರಾಜ್ಯಗಳ ಒಂದೇ ಒಂದು ಕ್ಷೇತ್ರ ಸಹ ಕಡಿಮೆಯಾಗಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿನ್ನೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇಂದು ಸರಣಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಕ್ಷೇತ್ರ ಮರುವಿಂಗಡಣೆ ನಡೆದಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಕೇಂದ್ರ ಗೃಹ ಸಚಿವರ ಹೇಳಿಕೆ ನಂಬಿಕೆಗೆ ಅರ್ಹವಾಗಿಲ್ಲ. ಇದು ದಕ್ಷಿಣದ ರಾಜ್ಯಗಳಲ್ಲಿ ಗೊಂದಲ ಹುಟ್ಟಿಸುವ ದುರುದ್ದೇಶದಿಂದ ಕೂಡಿದೆ ಎಂದಿದ್ದಾರೆ.
ಕೇಂದ್ರ ಗೃಹ ಸಚಿವರ ಈ ಹೇಳಿಕೆಯನ್ನು ನೋಡಿದರೆ ಅವರಿಗೆ ಒಂದೋ ಮಾಹಿತಿಯ ಕೊರತೆ ಇದೆ, ಇಲ್ಲವಾದರೆ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳಿಗೆ ಅನ್ಯಾಯ ಮಾಡುವ ದುರುದ್ದೇಶ ಇದೆ ಎಂದಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆಗೆ ತೋರುತ್ತಿರುವ ಅತ್ಯುತ್ಸಾಹವನ್ನು ನೋಡಿದರೆ ತಮ್ಮ ಪಕ್ಷದ ಕೀರ್ತಿಪತಾಕೆ ಹಾರಿಸುವುದಕ್ಕೆ ಪ್ರತಿರೋಧ ಒಡ್ಡುತ್ತಿರುವ ದಕ್ಷಿಣದ ರಾಜ್ಯಗಳ ಜನತೆಗೆ ಶಿಕ್ಷಿಸುವ ದುರುದ್ದೇಶ ಇರುವಂತೆ ಕಾಣಿಸುತ್ತಿದೆ. ಕರ್ನಾಟಕದ ಜನತೆ ಬಿಜೆಪಿಯನ್ನು ಬೆಂಬಲಿಸದೆ ಇದ್ದರೆ ರಾಜ್ಯಕ್ಕೆ ನರೇಂದ್ರ ಮೋದಿ ಅವರ ಆಶೀರ್ವಾದ ಇರುವುದಿಲ್ಲ ಎಂದು ವಿಧಾನಸಭಾ ಚುನಾವಣಾ ಪ್ರಚಾರದ ಕಾಲದಲ್ಲಿ
ಬಿಜೆಪಿ ಅಧ್ಯಕ್ಷರಾದ ಜೆಪಿ ನಡ್ಡಾ ಅವರು ನೀಡಿದ್ದ ಎಚ್ಚರಿಕೆ ನಮ್ಮ ರಾಜ್ಯದ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಒಂದೊಂದು ಕ್ರಮದಲ್ಲಿಯೂ ನಿಜವಾಗುತ್ತಿದೆ ಎಂದಿದ್ದಾರೆ.
ತೆರಿಗೆ ಹಂಚಿಕೆ, ಜಿಎಸ್ ಟಿ ಮತ್ತು ಪ್ರಕೃತಿ ವಿಕೋಪ ಪರಿಹಾರದಲ್ಲಿ ಅನ್ಯಾಯ, ರಾಜ್ಯಕ್ಕೆ ಕಂಟಕವಾಗಿರುವ ಹೊಸ ಶಿಕ್ಷಣ ನೀತಿ ಮತ್ತು ಯುಜಿಸಿ ನಿಯಮಾವಳಿಗಳಿಗೆ ತಿದ್ದುಪಡಿಯೂ ಸೇರಿದಂತೆ ಕೇಂದ್ರ ಸರ್ಕಾರದ ಪ್ರತಿಯೊಂದು ಕ್ರಮವೂ ರಾಜ್ಯವನ್ನು ಶಿಕ್ಷಿಸುವ ದುರುದ್ದೇಶದಿಂದ ಕೂಡಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.
ಈ ಎಲ್ಲ ಅನ್ಯಾಯದ ವಿರುದ್ಧ ರಾಷ್ಟ್ರಮಟ್ಟದಲ್ಲಿ ದನಿ ಎತ್ತದಂತೆ ಮಾಡಲು ಸಂಸತ್ ನಲ್ಲಿ ದಕ್ಷಿಣದ ರಾಜ್ಯಗಳ ದನಿಯನ್ನು ಇನ್ನಷ್ಟು ಕ್ಷೀಣಗೊಳಿಸುವ ದುರುದ್ದೇಶದಿಂದ ಕೇಂದ್ರದ ಬಿಜೆಪಿ ಸರ್ಕಾರ ಈಗ ಕ್ಷೇತ್ರ ಮರುವಿಂಗಡಣೆಯ ಹೊಸ ಅಸ್ತ್ರವನ್ನು ಎತ್ತಿಕೊಂಡಿದೆ ಎಂದು ಸಿಎಂ ಕಿಡಿ ಕಾರಿದ್ದಾರೆ.
ಕ್ಷೇತ್ರ ಮರುವಿಂಗಡಣೆಯ ಪರಿಣಾಮಗಳ ಬಗ್ಗೆ ಹಲವಾರು ಅಧ್ಯಯನಗಳು ನಡೆದಿವೆ. ಇವುಗಳ ಪ್ರಕಾರ ಇತ್ತೀಚಿನ ಜನಗಣತಿಯನ್ನು(2021 ಇಲ್ಲವೇ 2031) ಮಾತ್ರ ಆಧರಿಸಿ ಕ್ಷೇತ್ರ ಮರುವಿಂಗಡಣೆ ನಡೆದರೆ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28ರಿಂದ 26ಕ್ಕೆ ಇಳಿಯುವ ಸಾಧ್ಯತೆ ಇದೆ. ಇದೇ ರೀತಿ ಆಂಧ್ರಪ್ರದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 42ರಿಂದ 34, ಕೇರಳದ ಸಂಖ್ಯೆ 20ರಿಂದ 12ಕ್ಕೆ, ತಮಿಳುನಾಡಿನ ಸಂಖ್ಯೆ 39ರಿಂದ 31ಕ್ಕೆ ಇಳಿಯಲಿದೆ.
ಇದೇ ವೇಳೆ ಉತ್ತರಪ್ರದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 80ರಿಂದ 91, ಬಿಹಾರದ ಸಂಖ್ಯೆ 40ರಿಂದ 50, ಮಧ್ಯಪ್ರದೇಶದ ಸಂಖ್ಯೆ 29ರಿಂದ 33ಕ್ಕೆ ಏರಿಕೆಯಾಗಲಿದೆ. ಇದನ್ನು ಅನ್ಯಾಯ ಎನ್ನದೆ ನ್ಯಾಯ ಎನ್ನಲು ಸಾಧ್ಯವೇ?
ಈ ಅನ್ಯಾಯವನ್ನು ಖಂಡಿತ ಸಹಿಸಲು ಸಾಧ್ಯವಿಲ್ಲ. ಕ್ಷೇತ್ರ ಮರುವಿಂಗಡಣೆಯಿಂದ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗಬಾರದೆಂದರೆ ಒಂದೋ 1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಬೇಕು. ಇಲ್ಲವಾದರೆ ಜನಸಂಖ್ಯೆಯ ಮಾನದಂಡವನ್ನು ಕೈಬಿಟ್ಟು ಈಗಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಅನುಪಾತಕ್ಕನುಗುಣವಾಗಿ ಹೆಚ್ಚಿಸಬೇಕು ಎಂದಿದ್ದಾರೆ.
ಇತ್ತೀಚಿನ ಜನಸಂಖ್ಯೆಯ ಅನುಪಾತದಲ್ಲಿ ಕ್ಷೇತ್ರ ಮರುವಿಂಗಡಣೆ ನಡೆದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಕಟ್ಟಿಟ್ಟ ಬುತ್ತಿ ಎನ್ನುವುದು ನಮಗೆ ಸ್ಪಷ್ಟವಾಗಿ ಅರ್ಥವಾಗಿದೆ. ಈ ಅನ್ಯಾಯವನ್ನು ತಪ್ಪಿಸಲಿಕ್ಕಾಗಿಯೇ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಹಿಂದಿನ ಎರಡು ಕ್ಷೇತ್ರ ಮರುವಿಂಗಡಣೆಗೆ 1971ರ ಜನಗಣತಿಯನ್ನೇ ಆಧಾರವಾಗಿಟ್ಟುಕೊಳ್ಳಲಾಗಿತ್ತು.
ಕಳೆದ 50 ವರ್ಷಗಳಲ್ಲಿ ದಕ್ಷಿಣದ ರಾಜ್ಯಗಳು ಪರಿಣಾಮಕಾರಿ ಕ್ರಮಗಳ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಿರುವುದು ಮಾತ್ರವಲ್ಲ, ಅಭಿವೃದ್ದಿಯ ಪಥದಲ್ಲಿ ಮುನ್ನಡೆಯುತ್ತಿವೆ. ಇದೇ ವೇಳೆ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶದಂತಹ ಉತ್ತರದ ರಾಜ್ಯಗಳು ಜನಸಂಖ್ಯೆಯ ನಿಯಂತ್ರಣದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದು ಮಾತ್ರವಲ್ಲ, ಅಭಿವೃದ್ದಿಯ ಹಾದಿಯಲ್ಲಿ ಇನ್ನೂ ಕುಂಟುತ್ತಾ ಸಾಗಿದೆ.
ಇದರಿಂದಾಗಿ ಕ್ಷೇತ್ರ ಮರುವಿಂಗಡಣೆಯನ್ನು ಇತ್ತೀಚಿನ ಜನಗಣತಿಯಿಂದ ಪಡೆದ ಜನಸಂಖ್ಯೆಯ ಅನುಪಾತದ ಮೇಲೆ ನಡೆಸಿದರೆ ಜನಸಂಖ್ಯೆ ನಿಯಂತ್ರಣ ಮಾಡಿರುವ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಲಿದೆ. ಇಲ್ಲದೆ ಇದ್ದರೆ ಉತ್ತರದ ರಾಜ್ಯಗಳ ಕ್ಷೇತ್ರಗಳ ಪ್ರಮಾಣದಲ್ಲಿ ಏರಿಕೆ ಆಗಲಾರದು.
ಈ ಎರಡೂ ಬೆಳವಣಿಗಳಿಂದ ದಕ್ಷಿಣದ ರಾಜ್ಯಗಳೇ ನಷ್ಟ ಅನುಭವಿಸಲಿದೆ ಎನ್ನುವುದು ಗೃಹ ಸಚಿವ ಅವರಿಗೆ ತಿಳಿದಿಲ್ಲವೇ? ಎಂದು ಸಿಎಂ ಪ್ರಶ್ನಿಸಿದ್ದಾರೆ.
ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಾದ ರಾಜ್ಯ ಬಿಜೆಪಿ ನಾಯಕರು ಪರಸ್ಪರ ಕೆಸರೆರಚಾಟ ನಡೆಸುತ್ತಾ ಬೀದಿ ಜಗಳದಲ್ಲಿ ಮಗ್ನರಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಜಾತಿ-ಧರ್ಮ ಪಕ್ಷ -ಪಂಥಗಳ ಭೇದವನ್ನು ಮರೆತು ಕನ್ನಡಿಗರೆಲ್ಲರೂ ಒಂದಾಗಿ ಒಂದೇ ದನಿಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ದನಿ ಎತ್ತಬೇಕಾಗಿದೆ. ಈ ಅನ್ಯಾಯದ ವಿರುದ್ದ ಸಮಗ್ರ ರೂಪದ ಹೋರಾಟವನ್ನು ನಡೆಸಲು ನೆರೆಯ ದಕ್ಷಿಣದ ರಾಜ್ಯಗಳ ಜೊತೆಯಲ್ಲಿಯೂ ಮಾತುಕತೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನ್ಯಾಯಕ್ಕೀಡಾಗಿರುವ ಎಲ್ಲ ರಾಜ್ಯಗಳ ಜೊತೆಗೂಡಿ ಸಂಘಟಿತವಾದ ಹೋರಾಟ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



