ಕೇಂದ್ರ ಬಜೆಟ್ ರಾಜ್ಯಕ್ಕೆ ನಿರಾಶೆ ಮೂಡಿಸಿದೆ, ಕರ್ನಾಟಕಕ್ಕೆ ಖಾಲಿ ಚೊಂಬು: ಸಿಎಂ ಸಿದ್ದರಾಮಯ್ಯ ಕಿಡಿ
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಚೊಂಬು ಕೊಡುವುದನ್ನು ಮುಂದುವರೆಸಿದೆ ಎಂದರು.

ಮೈಸೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ 2025-26ನೇ ಸಾಲಿನ ಬಜೆಟ್ ರಾಜ್ಯ ಮತ್ತು ದೇಶದ ದೃಷ್ಟಿಯಿಂದ ಬಹಳ ನಿರಾಶಾದಾಯಕ ಬಜೆಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಚೊಂಬು ಕೊಡುವುದನ್ನು ಮುಂದುವರೆಸಿದೆ. ಕರ್ನಾಟಕದ ದೃಷ್ಟಿಯಿಂದ ಇದೊಂದು ನಿರಾಶದಾಯಕ ಮತ್ತು ದೂರದೃಷ್ಟಿ ಇಲ್ಲದ ಬಜೆಟ್ ಎಂದು ಹೇಳಿದರು.
ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಅನೇಕ ಬೇಡಿಕೆಗಳನ್ನು ಇಟ್ಟಿತ್ತು. ನಮ್ಮ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಒಂದೇ ಒಂದು ಬೇಡಿಕೆಯೂ ಈಡೇರಿಲ್ಲ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ಗಾತ್ರವೂ ಕಡಿಮೆ ಆಗಿದೆ. ಕಳೆದ ಬಾರಿಗಿಂತ 1.04 ಲಕ್ಷ ಕೋಟಿ ಕಡಿಮೆ ಆಗಿದೆ. ತೆರಿಗೆ ಅವರು ಅಂದುಕೊಂಡಷ್ಟು ಸಂಗ್ರಹಿಸಿಲ್ಲ. ಕೇಂದ್ರ ಸರ್ಕಾರ 15,68,936 ಕೋಟಿ ಸಾಲ ಪಡೆಯುತ್ತಿದೆ. 12,70,000 ಕೋಟಿ ರೂ. ಬಡ್ಡಿ ಕಟ್ಟುತ್ತಿದೆ. ಈ ದೇಶದ ಸಾಲದ ಪ್ರಮಾಣ 202 ಲಕ್ಷ ಕೋಟಿಯಿಂದ 205 ಲಕ್ಷ ಕೋಟಿ ರೂ.ಗೆ ಏರುತ್ತಿದೆ. ಈ ಬಜೆಟ್ ನಿರಾಶದಾಯಕ ಬಜೆಟ್ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ ಹೆಚ್ಚು ತೆರಿಗೆ ಕಟ್ಟುತ್ತಿರುವ ರಾಜ್ಯಗಳಲ್ಲಿ 2ನೇ ಸ್ಥಾನದಲ್ಲಿದೆ. ರಾಜಕೀಯ ಕಾರಣಕ್ಕೆ ಬಿಹಾರ, ಆಂಧ್ರ ಪ್ರದೇಶಕ್ಕೆ ಹೆಚ್ಚು ಅನುದಾನ ಸಿಕ್ಕಿದೆ. ಮೇಕೆದಾಟು, ಭದ್ರಾ ಮೇಲ್ದಂಡೆ, ಕೃಷ್ಣ ಮೇಲ್ದಂಡೆ ಯೋಜನೆ ಯಾವುದಕ್ಕೂ ಹಣ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡುತ್ತೇವೆ ಎಂದು ಕಳೆದ ಬಾರಿ ಘೋಷಿಸಿದ್ದರು. ಈವರೆಗೆ ಒಂದೂ ನಯಾಪೈಸೆಯೂ ಬಂದಿಲ್ಲ ಎಂದರು.
ರಾಜಸ್ಥಾನ ಬಿಟ್ಟರೆ ಕರ್ನಾಟಕ ಹೆಚ್ಚು ಒಣ ಭೂಮಿ ಇರುವ ರಾಜ್ಯ. ಈ ರಾಜ್ಯಕ್ಕೆ ನೀರಾವರಿ ಯೋಜನೆಗಳಿಗೆ ಒಂದು ರೂಪಾಯಿ ಕೊಟ್ಟಿಲ್ಲ. ರಾಯಚೂರಿಗೆ ಏಮ್ಸ್ ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷೆ ಇತ್ತು. ಕೇಂದ್ರ ಸಚಿವ ನಡ್ಡಾ ಇದಕ್ಕೆ ಭರವಸೆ ಕೊಟ್ಟಿದ್ದರು. ಅದರ ಪ್ರಸ್ತಾಪವೂ ಇಲ್ಲ ಎಂದು ಸಿಎಂ ಗುಡುಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


