ರಾಜಕೀಯ

ಜಾತಿ ಗಣತಿ ವರದಿ: ಚರ್ಚೆಗೆ ಸರ್ವಪಕ್ಷ ಸಭೆ ಕರೆಯಿರಿ; ನಿಖಿಲ್ ಕುಮಾರಸ್ವಾಮಿ ಒತ್ತಾಯ

ಜೆಡಿಎಸ್ ಯಾವುದೇ ಸಂದರ್ಭದಲ್ಲೂ ಸಮೀಕ್ಷೆಯನ್ನು ವಿರೋಧಿಸುವುದಿಲ್ಲ. ಆದರೆ, ಸಮೀಕ್ಷೆ ಪ್ರಕ್ರಿಯೆಯು ವ್ಯವಸ್ಥಿತವಾಗಿ ನಡೆದಿಲ್ಲ.

ಜಾತಿ ಗಣತಿ ವರದಿ: ಚರ್ಚೆಗೆ ಸರ್ವಪಕ್ಷ ಸಭೆ ಕರೆಯಿರಿ; ನಿಖಿಲ್ ಕುಮಾರಸ್ವಾಮಿ ಒತ್ತಾಯ
ನಿಖಿಲ್ ಕುಮಾರಸ್ವಾಮಿ
Published On :

ಬೆಂಗಳೂರು: 'ಜಾತಿ ಗಣತಿ' ಎಂದೇ ಕರೆಯಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯ ಅಂಕಿ ಅಂಶಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಶನಿವಾರ ಒತ್ತಾಯಿಸಿದ್ದಾರೆ.

ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳ ಧಾರ್ಮಿಕ ಮುಖಂಡರು, ಬುದ್ಧಿಜೀವಿಗಳು ಮತ್ತು ಪ್ರತಿನಿಧಿಗಳನ್ನು ಸಮಾಲೋಚನೆಗೆ ಕರೆಯಬೇಕು. ಒಮ್ಮತದ ಮೂಲಕ ಪರಸ್ಪರ ಒಪ್ಪುವ ಪರಿಹಾರವನ್ನು ಕಂಡುಕೊಳ್ಳಬೇಕು ಎಂದರು.

ಜೆಡಿಎಸ್ ಯಾವುದೇ ಸಂದರ್ಭದಲ್ಲೂ ಸಮೀಕ್ಷೆಯನ್ನು ವಿರೋಧಿಸುವುದಿಲ್ಲ. ಆದರೆ, ಸಮೀಕ್ಷೆ ಪ್ರಕ್ರಿಯೆಯು ವ್ಯವಸ್ಥಿತವಾಗಿ ನಡೆದಿಲ್ಲ. ಸೋರಿಕೆಯಾದ ಅಂಕಿಅಂಶಗಳ ಸತ್ಯಾಸತ್ಯತೆಯನ್ನು ಮಾತ್ರ ಪ್ರಶ್ನಿಸಿದ್ದೇವೆ ಮತ್ತು ಮಾಹಿತಿ ಸತ್ಯದಿಂದ ಕೂಡಿಲ್ಲ ಎಂದು ಹೇಳಿದ್ದೇವೆ. ಸಮೀಕ್ಷೆಯ ವಿಧಾನವೇ ದೋಷಪೂರಿತವಾಗಿದೆ ಎಂದು ಅವರು ಹೇಳಿದರು.

ಯಾವ ಕುಟುಂಬಗಳನ್ನು, ಯಾವ ಮಾನದಂಡದ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗಿದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಹಾಗಾಗಿ ಸಂಪೂರ್ಣ ವರದಿಯನ್ನು ಮರು ಪರಿಶೀಲಿಸಬೇಕು. ವರದಿ ಕುರಿತು ಚರ್ಚಿಸಲು ಸರಕಾರ ಸರ್ವಪಕ್ಷ ಸಭೆ ಕರೆಯಬೇಕು ಎಂದರು.

ಜಾತಿಗಣತಿ ವಿಚಾರಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ನವದೆಹಲಿಗೆ ತೆರಳಿದ್ದರು. ಹೈಕಮಾಂಡ್ ಜೊತೆ ಕುಳಿತು ಚರ್ಚೆ ಮಾಡಿದ ಬಳಿಕ ಜಾತಿ ಗಣತಿ ವಿಚಾರ ಮಾಧ್ಯಮಗಳಲ್ಲಿ ಬಹಳ ಗಂಭೀರವಾದ ಸ್ವರೂಪ ಪಡೆದುಕೊಂಡಿತು. ಮಾಧ್ಯಮಗಳಲ್ಲಿ ಇತ್ತೀಚೆಗೆ ಸಾಕಷ್ಟು ಅಂಕಿ-ಅಂಶಗಳು ಸೋರಿಕೆಯಾಗಿದೆ. ಯಾವ ಜಾತಿ, ಯಾವ ಪಂಗಡ ಎಷ್ಟಿದೆ ಎಂಬುದು ಸೋರಿಕೆಯಾಗಿದೆ. ಅಂಕಿ-ಅಂಶಗಳು ಎಲ್ಲಿಂದ ಬಂತು? ಯಾಕೆ ಬಂತು? ಇದರ ಬಗ್ಗೆ ಚರ್ಚಿಸಬೇಕಿದೆ ಎಂದು ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.