ಯೋಗೇಶ್ವರ್ ಬಿಜೆಪಿಯ ಕಟ್ಟಾಳು ಅಲ್ಲ; ತಮ್ಮ ಕಾಲಿನ ಮೇಲೆ ತಾವೇ ಕಲ್ಲಾಕಿಕೊಂಡಿದ್ದಾರೆ: ಆರ್.ಅಶೋಕ್
ಯೋಗೇಶ್ವರ್ ಅವರನ್ನು ಉಳಿಸಿಕೊಳ್ಳಲು ಹೈಕಮಾಂಡ್ ಜೊತೆ ಚರ್ಚೆ ಮಾಡಿದ್ದೆವು. ಅವರು ಐದು ಕಡೆಯಿಂದ ಬಿ ಫಾರಂ ತಂದಿದ್ದರು ಎಂದು ಸುದ್ದಿ ಇದೆ. ನಮ್ಮ ಮಾತು ಕೇಳದೆ ಕಾಂಗ್ರೆಸ್ ಸೇರಿದ್ದಾರೆ ಎಂದರು.

ಬೆಂಗಳೂರು: ಸಿ.ಪಿ ಯೋಗೇಶ್ವರ್ ಬಿಜೆಪಿಯ ಕಟ್ಟಾಳು ಏನಾಗಿರಲಿಲ್ಲ. ಬಿಜೆಪಿಯ ಸಿದ್ಧಾಂತದಿಂದ ಬಂದವರಲ್ಲ. ಸೈಕಲ್ ಪಾರ್ಟಿ, ಪಕ್ಷೇತರ, ಹೀಗೆ ಬೇರೆ ಬೇರೆ ಪಕ್ಷದಿಂದ ಬಂದವರು. ನಾವೂ ಕೂಡ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಗಂಭೀರವಾಗಿ ಮಾಡಿದ್ದೆವು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯೋಗೇಶ್ವರ್ ಅವರನ್ನು ಉಳಿಸಿಕೊಳ್ಳಲು ಹೈಕಮಾಂಡ್ ಜೊತೆ ಚರ್ಚೆ ಮಾಡಿದ್ದೆವು. ಅವರು ಐದು ಕಡೆಯಿಂದ ಬಿ ಫಾರಂ ತಂದಿದ್ದರು ಎಂದು ಸುದ್ದಿ ಇದೆ. ನಮ್ಮ ಮಾತು ಕೇಳದೆ ಕಾಂಗ್ರೆಸ್ ಸೇರಿದ್ದಾರೆ ಎಂದರು. ಕಾಂಗ್ರೆಸ್ ಬದಲು ಜೆಡಿಎಸ್‌ನಿಂದಲೇ ಯೋಗೇಶ್ವರ್ ನಿಲ್ಲಬಹುದಿತ್ತು. ಎನ್‌ಡಿಎಗೆ ಅನುಕೂಲ ಆಗುತ್ತಿತ್ತು. ಸಿಪಿವೈ ಈಗ ಪಕ್ಷ ದ್ರೋಹ ಮಾಡಿ ಹೋಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ. ನಾವೆಲ್ಲರೂ ಇದು ಜೆಡಿಎಸ್ ಟಿಕೆಟ್, ಹೆಚ್‌ಡಿಕೆ ಅವರೇ ತೀರ್ಮಾನ ಮಾಡಬೇಕು ಎಂದು ಹೇಳಿಕೊಂಡು ಬಂದಿದ್ದೆವು. ಹೆಚ್‌ಡಿಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೆಡಿಎಸ್ ಚಿನ್ಹೆಯಡಿ ಸ್ಪರ್ಧೆಗೆ ಆಫರ್ ಕೊಟ್ಟರು. ಯಾವ ಚಿನ್ಹೆ ಆದರೇನು ಇಲ್ಲಿದ್ದರೆ ಎನ್‌ಡಿಎಯಿಂದನೇ ಸ್ಪರ್ಧೆ ಮಾಡುತ್ತಿದ್ದರು. ಸಿಪಿವೈ ನಮ್ಮಲ್ಲಿ ಸೀನಿಯರ್ ಲೀಡರ್ ಆಗಿದ್ದರು. ಈಗ ಕಾಂಗ್ರೆಸ್‌ನಲ್ಲಿ ಲಾಸ್ಟ್ ಬೆಂಚ್ ಆಗುತ್ತಾರೆ. ಅವರನ್ನು ಅಲ್ಲಿ ಬೆಳೆಯಲು ಡಿಕೆಶಿ ಬಿಡಲ್ಲ. ಕಾಂಗ್ರೆಸ್ ಸೇರಿ ಸಿಪಿವೈ ತಮ್ಮ ಭವಿಷ್ಯ ಹಾಳು ಮಾಡಿಕೊಂಡರು ಎಂದು ವಾಗ್ದಾಳಿ ನಡೆಸಿದರು.
ಮಂಗಳವಾರವೇ ಸಿಪಿವೈ ಕಾಂಗ್ರೆಸ್ ಸೇರುತ್ತಾರೆ ಎಂದು ನಮಗೆಲ್ಲ ಸುಳಿವಿತ್ತು. ಇದರ ಬಗ್ಗೆ ಜೋಷಿಗೆ ಹೆಚ್‌ಡಿಕೆ ಹೇಳಿದ್ದರು. ಆದರೂ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆವು. ಯೋಗೇಶ್ವರ್ ಕಾಂಗ್ರೆಸ್‌ನಲ್ಲಿ ಒಬ್ಬ ಲೀಡರ್ ಆಗಿ ಬೆಳೆಯಲು ಆಗಲ್ಲ. ಅವರು ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ ಎಂದು ನುಡಿದರು. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿದಾಗ ಒಬ್ಬರಿಂದ ಬಿಜೆಪಿ ಸರ್ಕಾರ ಬರಲಿಲ್ಲ. ಆಗ ಯಾರ‍್ಯಾರು ಬಿಜೆಪಿಗೆ ಬಂದ್ರು, ಯಾರು ಕರೆತಂದ್ರು ಅಂತ ಜಗತ್ತಿಗೇ ಗೊತ್ತು. ನಾನೂ ಅವರನ್ನು ಕರೆತಂದೆ. ಯಡಿಯೂರಪ್ಪ, ವಿಜಯೇಂದ್ರ ಸಹ ಕರೆತಂದಿದ್ದಾರೆ. ಯೋಗೇಶ್ವರ್ ಒಬ್ಬರೇ ಕಾರಣರಲ್ಲ. ಪಕ್ಷ ಬಿಟ್ಟು ಪಕ್ಷ ಹೋಗುತ್ತಾರೆ ಅಂದರೆ ಅವರಿಗೆ ನಿಷ್ಠೆ ಇಲ್ಲ ಎಂದರ್ಥ. ಕಾಂಗ್ರೆಸ್‌ನಲ್ಲಿ ಯೋಗೇಶ್ವರ್‌ಗೆ ಖಂಡಿತ ಭ್ರಮನಿರಸನ ಆಗುತ್ತೆ ಎಂದು ಟಾಂಗ್ ಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



