JDS ಖರೀದಿ-ಅಂತ್ಯ ಅಸಾಧ್ಯ, ಭ್ರಮೆ ಬೇಡ: ಕಾಂಗ್ರೆಸ್'ಗೆ ಸಾ.ರಾ ಮಹೇಶ್ ತಿರುಗೇಟು
ಸೋಲಿನ ನಂತರ ಪ್ರಾದೇಶಿಕ ಪಕ್ಷ ಮುಳುಗಿತು ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಹಿಂದೆಯೂ ಪಕ್ಷ ನಿರ್ನಾಮ ಮಾಡುತ್ತೇವೆ ಎಂದು ಕೆಲವರು ಹೇಳಿದ್ದರು. ಆದರೆ, ಜೆಡಿಎಸ್ ಶಕ್ತಿಯುತವಾಗಿ ಹೊರಹೊಮ್ಮಲಿದೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಿಷ್ಠಾವಂತರಾಗಿದ್ದು, ಅವರನ್ನು ಖರೀದಿಸಲು ಸಾಧ್ಯವಿಲ್ಲ.

ಮೈಸೂರು: ಯಾರಿಂದಲೂ ಜೆಡಿಎಸ್ ಖರೀದಿ ಮಾಡಲು ಸಾಧ್ಯವಿಲ್ಲ, ಪ್ರಾದೇಶಿಕ ಪಕ್ಷವನ್ನು ಅಂತ್ಯಗೊಳಿಸುವುದಕ್ಕೂ ಆಗುವುದಿಲ್ಲ. ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿ ಇರಬೇಡಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಮಂಗಳವಾರ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಿನ ನಂತರ ಪ್ರಾದೇಶಿಕ ಪಕ್ಷ ಮುಳುಗಿತು ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಹಿಂದೆಯೂ ಪಕ್ಷ ನಿರ್ನಾಮ ಮಾಡುತ್ತೇವೆ ಎಂದು ಕೆಲವರು ಹೇಳಿದ್ದರು. ಆದರೆ, ಜೆಡಿಎಸ್ ಶಕ್ತಿಯುತವಾಗಿ ಹೊರಹೊಮ್ಮಲಿದೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಿಷ್ಠಾವಂತರಾಗಿದ್ದು, ಅವರನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಚನಪಟ್ಟಣ ಉಪಚುನಾವಣೆಯಲ್ಲಿ ಸೋತರೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ನಿಖಿಲ್ ಸಿದ್ಧರಿರಲಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸ್ಪರ್ಧೆಗಿಳಿಯುವ ಮನಸ್ಸು ಮಾಡಿದ್ದರು. ಉಪಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ನಾಯಕರು ಜೆಡಿಎಸ್ ನಿರ್ನಾಮವಾಗಲಿದೆ ಎಂಬ ಭ್ರಮೆಯಲ್ಲಿದ್ದಾರೆ, ಆದರೆ, ಸೋಲಿನ ಬಳಿಕ ಪಕ್ಷ ಮತ್ತೆ ಬಲಿಷ್ಠವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಕುರಿತು ಮಾತನಾಡಿ, ಉಪಚುನಾವಣೆ ನಡೆದ ಮೂರು ಕ್ಷೇತ್ರಗಳಿಗೆ ಮಾತ್ರ ಗೃಹ ಲಕ್ಷ್ಮಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಉಳಿದ ಭಾಗದ ಫಲಾನುಭವಿಗಳಿಗೆ ನೀಡಲು ಹಣದ ಕೊರತೆ ಎದುರಾಗಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಉಪಚುನಾವಣೆ ಪ್ರಚಾರಕ್ಕೆ ತಮ್ಮನ್ನು ಆಹ್ವಾನಿಸಿಲ್ಲ ಎಂಬ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಖುದ್ದು ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಮತ್ತೆ ಕರೆ ಮಾಡುತ್ತಾರೆಂದು ಆಪ್ತ ಸಹಾಯಕರು ಉತ್ತರಿಸಿದ್ದರು. ಆದರೆ, ಕರೆ ಬರಲೇ ಇಲ್ಲ, ಹಿಂತಿರುಗಿಸಿ ಕರೆ ಮಾಡಬೇಕೆಂಬ ಸೌಜನ್ಯತೆ ಹಿರಿಯ ನಾಯಕರಾಗಿ ಅವರಿಗೆ ಇರಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಬಳಿಕ ವಿನಾಕಾರಣ ಜಿಟಿ.ದೇವೇಗೌಡ ಅವರು ನನ್ನನ್ನು ಗುರಿ ಮಾಡುತ್ತಿದ್ದಾರೆ. ನನ್ನ ಮೇಲೆ ಗೂಬೆ ಕೂರಿಸುವುದನ್ನು ಜಿಟಿಡಿ ನಿಲ್ಲಿಸಲಿ. ಮುಂದೆ ಇದೇ ರೀತಿ ಅವರು ಮಾತು ಮುಂದುವರಿಸಿದರೆ ನನ್ನ ಮಾತಿನ ವರಸೆ ಬದಲಾಗುತ್ತದೆ. ನನ್ನಿಂದ ತೊಂದರೆಯಾಗುತ್ತಿದ್ದರೆ, ನಾನು ರಾಜಕೀಯ ಬಿಟ್ಟು ಬಿಡಿ ಎಂದು ಜಿಟಿಡಿ ಹೇಳಿದರೆ ನಾಳೆಯೇ ಸಾರ್ವಜನಿಕ ಜೀವನದಿಂದ ದೂರ ಇರುತ್ತೇನೆ.
ನಾವು ಏನಾದರೂ ತಪ್ಪು ಮಾಡಿದ್ದರೆ, ಪಕ್ಷದ ವೇದಿಕೆಯಲ್ಲಿ ಕರೆದು ಕಪಾಳಕ್ಕೆ ಹೊಡೆಯಿರಿ. ಆದರೆ, ಸಾರ್ವಜನಿಕವಾಗಿ ಅವಮಾನ ಮಾಡಬೇಡಿ. ನನಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ನನಗೆ ಇನ್ನು ಯಾವ ಆಸೆಯೂ ಇಲ್ಲ. ನಾನು ಸುಳ್ಳು ಹೇಳುತ್ತಿಲ್ಲ. ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣಾ ಪ್ರಚಾರಕ್ಕೆ ಕರೆಯಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೇ ಜಿ.ಟಿ.ದೇವೇಗೌಡರ ಆಪ್ತ ಸಹಾಯಕರಿಗೆ ಕರೆ ಮಾಡಿದ್ದರು. ಇದನ್ನು ಎಚ್.ಡಿ. ದೇವೇಗೌಡರೇ ಹೇಳುತ್ತಾರೆ ಎಂದು ಅವರು ಹೇಳಿದರು.
ಕರೆಯ ವಿವರ ಬೇಕಾದರೆ ಕೊಡುತ್ತೇವೆ. ಮಾಜಿ ಪ್ರಧಾನಿಗಳ ಮೊಬೈಲ್ ನಿಂದ ಹೋಗಿರುವ ಕರೆ ಅದು. ನನಗೆ ಸುಳ್ಳು ಹೇಳುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.
ನಾನು ಯಾವತ್ತೂ ನಾನೇ ಮೈಸೂರಿನ ಸ್ಥಳೀಯ ಸಂಸ್ಥೆಗಳಿಗೆ ಬಿ ಫಾರಂ ಕೊಡುತ್ತೇನೆ ಎಂದು ಹೇಳಿಲ್ಲ. ನನ್ನ ಸೋಲಿನ ಬಗ್ಗೆ ಜಿಟಿಡಿ ಮಾತಾಡುತ್ತಾರೆ. ಜಿ.ಟಿ.ದೇವೇಗೌಡರು ಚುನಾವಣೆಯಲ್ಲಿ ಸೋತಿಲ್ವಾ? 2008ರಲ್ಲಿ ಜಿಟಿಡಿ ಬಿಜೆಪಿ ಏಕೆ ಹೋಗಿದ್ದರು? ನಾನು ಶಾಸಕ ಅಲ್ಲ. ನನ್ನನ್ನು ಕೇಳಿ ಕೇಂದ್ರ ಸಚಿವ ಕುಮಾರಸ್ವಾಮಿ ಯಾರನ್ನಾದರೂ ಶಾಸಕಾಂಗ ಪಕ್ಷದ ನಾಯಕರನ್ನು ನೇಮಕ ಮಾಡುತ್ತಾರಾ? ನಾನು ಹೇಗೆ ನಿಮಗೆ ಆ ಸ್ಥಾನ ತಪ್ಪಿಸಲಿ? ಎಂದು ಪ್ರಶ್ನಿಸಿದರು.
ನಾನು ಜೆಡಿಎಸ್ನಲ್ಲಿ ಇರುವುದು ಜಿ.ಟಿ.ದೇವೇಗೌಡರಿಗೆ ಇಷ್ಟ ಇಲ್ಲವೆಂದರೆ ನಾನೇ ಪಕ್ಷದಿಂದ ದೂರ ಇರುತ್ತೇನೆ. ಸಾಯುವ ತನಕ ಪಕ್ಷಕ್ಕೆ ಮತ ಹಾಕುತ್ತೇನೆ. ಬಹಳಷ್ಟು ನಾಯಕರು ಜೆಡಿಎಸ್ ಬಗ್ಗೆ ಮಾತಾಡುತ್ತಿದ್ದಾರೆ. ಚುನಾವಣೆ ತಯಾರಿ ಸರಿ ಇಲ್ಲದ ಕಾರಣ ಚನ್ನಪಟ್ಟಣದಲ್ಲಿ ಸೋಲಾಗಿದೆ. ಅಲ್ಲದೆ, ಅನಿವಾರ್ಯ ಪರಿಸ್ಥಿತಿಯಲ್ಲಿ ನಿಖಿಲ್ ಕುಮಾರಸ್ವಾಮಿ ಈ ಉಪ ಚುನಾವಣೆ ಅಭ್ಯರ್ಥಿಯಾದರು ಎಂದು ತಿಳಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



