ಚುನಾವಣೆ ಇದ್ದಾಗ ಕಣ್ಣೀರು ಹಾಕುವ ಕುಮಾರಸ್ವಾಮಿ, ಜನ ಅಳುವಾಗ ಎಲ್ಲಿಗೆ ಹೋಗಿದ್ದರು: DKS
ಚನ್ನಪಟ್ಟಣ ಅಥವಾ ರಾಮನಗರದ ಜನ ಅವರನ್ನು ಶಾಸಕರನ್ನಾಗಿ ಆರಿಸಿದರೂ, ಜಿಲ್ಲೆಗೆ ರಾಷ್ಟ್ರಧ್ವಜ, ಕನ್ನಡಧ್ವಜ ಹಾರಿಸಲು ಏಕೆ ಬರಲಿಲ್ಲ. ಚನ್ನಪಟ್ಟಣದ ಜನರ ಅಭಿವೃದ್ಧಿಗೆ ಯಾವುದಾದರೂ ಒಂದು ಕೆಲಸ ಮಾಡಿದ್ದಾರಾ?

ಮಂಗಳೂರು: ಕುಮಾರಸ್ವಾಮಿ ಅವರಿಗೆ ಕಣ್ಣೀರು ಬರುವುದು ಚುನಾವಣೆ ಇದ್ದಾಗ ಮಾತ್ರ. ಚನ್ನಪಟ್ಟಣದ ಜನರು ಕಣ್ಣೀರು ಹಾಕಿದಾಗ ಅವರು ಎಲ್ಲಿಗೆ ಹೋಗಿದ್ದರು?" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ನಾಯಕರಿಗೆ ಮನುಷ್ಯತ್ವವಿಲ್ಲ, ನಾವು ಭಾವುಕ ಜೀವಿ, ಹೀಗಾಗಿ ಕಣ್ಣೀರು ಹಾಕುತ್ತೇವೆ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, ಚನ್ನಪಟ್ಟಣ ಅಥವಾ ರಾಮನಗರದ ಜನ ಅವರನ್ನು ಶಾಸಕರನ್ನಾಗಿ ಆರಿಸಿದರೂ, ಜಿಲ್ಲೆಗೆ ರಾಷ್ಟ್ರಧ್ವಜ, ಕನ್ನಡಧ್ವಜ ಹಾರಿಸಲು ಏಕೆ ಬರಲಿಲ್ಲ. ಚನ್ನಪಟ್ಟಣದ ಜನರ ಅಭಿವೃದ್ಧಿಗೆ ಯಾವುದಾದರೂ ಒಂದು ಕೆಲಸ ಮಾಡಿದ್ದಾರಾ? ಕುಮಾರಸ್ವಾಮಿ ಅಲ್ಲಿನ ಯಾವ ಕೆರೆಗೆ ನೀರು ತುಂಬಿಸಿದ್ದಾರೆ? ಚನ್ನಪಟ್ಟಣ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಿದ್ದು ಯೋಗೇಶ್ವರ್ ಅವರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೇ ಆ ಕ್ಷೇತ್ರಕ್ಕೆ ಸಣ್ಣ ಕೆಲಸವನ್ನೂ ಮಾಡಿಲ್ಲ. ಕೇವಲ ಶಾಸಕರಾಗಿದ್ದಾಗ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಕುಮಾರಸ್ವಾಮಿ ಅನುದಾನ ತಂದು ಕೆಲಸ ಮಾಡಬೇಕಿತ್ತಲ್ಲವೇ? ಏಕೆ ಮಾಡಲಿಲ್ಲ" ಎಂದು ಪ್ರಶ್ನಿಸಿದರು.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಪ್ರತಿನಿಧಿಸಿದ್ದರು. ಈಗಿನ ಅಭ್ಯರ್ಥಿಗೂ ಚನ್ನಪಟ್ಟಣಕ್ಕೂ ಸಂಬಂಧವಿಲ್ಲ. ಅವರು ಮಂಡ್ಯ ಹಾಗೂ ರಾಮನಗರದಲ್ಲಿ ಸೋತಿದ್ದಾರೆ" ಎಂದು ತಿಳಿಸಿದರು.
ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂದು ಹೇಳಬೇಕು. ಯೋಗೇಶ್ವರ್ ಪಕ್ಷಾಂತರಿ ಇರಬಹುದು, ಇಲ್ಲ ಎಂದು ಹೇಳುವುದಿಲ್ಲ. ಕಾಂಗ್ರೆಸ್ ನಲ್ಲಿ ಇದ್ದವರು ಸಮಾಜವಾದಿ ಪಕ್ಷ, ಬಿಜೆಪಿ ಪಕ್ಷಕ್ಕೆ ಹೋಗಿದ್ದರು. ಎನ್ಡಿಎ ಮೈತ್ರಿ ಸರಿಯಿಲ್ಲ, ಕುಮಾರಸ್ವಾಮಿ ಸರಿಯಿಲ್ಲ. ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರದಿಂದ ಒಳ್ಳೆಯದಾಗಲಿದೆ ಎಂದು ಈಗ ಮತ್ತೆ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.
ಚನ್ನಪಟ್ಟಣ ತಾಲ್ಲೂಕಿನ ಜನ ವಿದ್ಯಾವಂತರು, ಪ್ರಜ್ಞಾವಂತರಿದ್ದಾರೆ. ನಮ್ಮ ಸರ್ಕಾರ ಅವರ ಸೇವೆ ಮಾಡಲು ಮನೆ ಬಾಗಿಲಿಗೆ ಹೋಗಿದೆ. 22 ಸಾವಿರ ಜನ ತಮ್ಮ ಕಷ್ಟವನ್ನು ನಮ್ಮ ಬಳಿ ಹೇಳಿಕೊಂಡಿದ್ದಾರೆ. ನೂರಾರು ಕೋಟಿ ಅಭಿವೃದ್ಧಿ ಕೆಲಸ ಪ್ರಾರಂಭವಾಗಿದೆ. ಬಡವರಿಗೆ ನಿವೇಶನ ನೀಡಲಾಗುತ್ತಿದೆ" ಎಂದರು.
ನಮ್ಮ ಸರ್ಕಾರ ರಾಜ್ಯದ ಎಲ್ಲಾ ವರ್ಗದ ಜನರಿಗೆ ಐದು ಗ್ಯಾರಂಟಿ ಯೋಜನೆ ನೀಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ. ಜನತಾದಳದಲ್ಲಿ ಭವಿಷ್ಯವಿಲ್ಲ ಎಂದು ಅನೇಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ" ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



