ಶಕ್ತಿ ಯೋಜನೆಯಿಂದ ಮೆಟ್ರೋಗೆ ನಷ್ಟ: PM Modi ಹೇಳಿಕೆಯಿಂದ ಆಶ್ಚರ್ಯ, ಆಘಾತ- DK Shivakumar
ಶಕ್ತಿ ಯೋಜನೆಯಿಂದ ಬೆಂಗಳೂರು ಮೆಟ್ರೋಗೆ ಆದಾಯ ನಷ್ಟವಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು: ಶಕ್ತಿ ಯೋಜನೆಯಿಂದ ಬೆಂಗಳೂರು ಮೆಟ್ರೋಗೆ ಆದಾಯ ನಷ್ಟವಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, 'ಶಕ್ತಿ ಯೋಜನೆಯಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯ ಕುಸಿಯುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಆಘಾತ ತಂದಿದೆ. ಮಾಹಿತಿ ಕೊರತೆಯಿಂದ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ.
ಮೆಟ್ರೋ ಆದಾಯ ಹಾಗೂ ಶಕ್ತಿ ಯೋಜನೆ ಬಗ್ಗೆ ಪ್ರಧಾನಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮೆಟ್ರೋ 130 ಕೋಟಿ ರೂ. ಆದಾಯ ಗಳಿಸಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಶೇ. 30 ರಷ್ಟು ಏರಿಕೆ ಕಂಡಿದೆ ಎಂದು ಹೇಳಿದರು.
ನಮ್ಮ ರಾಜ್ಯದ ಪೈಕಿ ಬೆಂಗಳೂರಿನಲ್ಲಿ ಮಾತ್ರ ಮೆಟ್ರೋ ಇದೆ. ಶಕ್ತಿ ಯೋಜನೆ ಕರ್ನಾಟಕದಾದ್ಯಂತ ಜಾರಿ ಮಾಡಲಾಗಿದೆ. ನಾವು ಬಡವರ ಬಗ್ಗೆ ಆಲೋಚಿಸಿ ಈ ಯೋಜನೆ ಜಾರಿ ಮಾಡಿದ್ದೇವೆ. ಕೋವಿಡ್ ಸಮಯದಲ್ಲಿ ಉಚಿತ ಬಸ್ ಪ್ರಯಾಣ ವ್ಯವಸ್ಥೆಗೆ ಒತ್ತಾಯ ಮಾಡಿದ್ದು ನಾವೇ. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ನೆರವಾಗಲು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ.
ಮಹಿಳೆಯರ ಮೇಲಿನ ಬೆಲೆ ಏರಿಕೆ ಮತ್ತು ಹಣದುಬ್ಬರದ ಹೊರೆಯನ್ನು ತಗ್ಗಿಸಲು ಶಕ್ತಿ ಯೋಜನೆಯನ್ನು ಕಾಂಗ್ರೆಸ್ ತಂದಿದೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಮೊದಲು ಜಾರಿ ಮಾಡಿದ್ದು ಶಕ್ತಿ ಯೋಜನೆ. ಸಾರ್ವಜನಿಕರ ಅನುಕೂಲಕ್ಕೆ ಸಾರಿಗೆ ಇಲಾಖೆಯಿಂದ ಒಂದು ಸಾವಿರಕ್ಕೂ ಹೆಚ್ಚು ಹೊಸ ಬಸ್ ಗಳನ್ನು ಖರೀದಿ ಮಾಡಲಾಗಿದೆ. ಬಿಜೆಪಿಯವರಿಂದ ಇಂತಹ ಒಂದೇ ಒಂದು ಯೋಜನೆ ಜಾರಿ ಮಾಡಲು ಆಗಲಿಲ್ಲ ಎಂದರು.
ಅಲ್ಲದೆ, ತೆಲಂಗಾಣದಲ್ಲೂ ಈ ಯೋಜನೆ ಜಾರಿ ಮಾಡಿದ್ದೇವೆ. ನಮ್ಮ ಮೆಟ್ರೋದಲ್ಲಿ ಶೇ. 30 ರಷ್ಟು ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯ ಹೆಚ್ಚಾಗಿದೆ. ಮೆಟ್ರೋದಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಪಾಲುದಾರರು. ಆದರೂ ಪ್ರಧಾನಮಂತ್ರಿಗಳಿಗೆ ಈ ವಿಚಾರವಾಗಿ ಮಾಹಿತಿ ಕೊರತೆ ಇದೆ. ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿದಂತಿದೆ. ನಾವು ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದರೂ ಕೆಎಸ್ಆರ್ ಟಿಸಿ ಹಾಗೂ ಮೆಟ್ರೋ ಸಂಸ್ಥೆಗಳನ್ನು ಸಮರ್ಥವಾಗಿ ನಡೆಸುತ್ತಿದ್ದೇವೆ.
ಪ್ರಧಾನಮಂತ್ರಿಗಳಿಗೆ ಮಾಧ್ಯಮಗಳ ಮೂಲಕ ಈ ಮಾಹಿತಿ ನೀಡಲು ಬಯಸುತ್ತೇನೆ. ನಮ್ಮ ಶಕ್ತಿ ಯೋಜನೆ ಬಗ್ಗೆ ಬೇರೆ ರಾಜ್ಯದವರು ಬಂದು ಮಾಹಿತಿ ಪಡೆಯುತ್ತಿದ್ದಾರೆ. ಈ ಯೋಜನೆ ಜನರಿಗೆ ಅನುಕೂಲ ತಂದಿದೆ, ಅವರ ವಿಶ್ವಾಸ ಗಳಿಸಿದೆ. ದಿನನಿತ್ಯ ರಾಜ್ಯದಲ್ಲಿ ಮಹಿಳೆಯರು 60 ಲಕ್ಷ ಟ್ರಿಪ್ ನಷ್ಟು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಮಹಿಳೆಯರು ಈ ಯೋಜನೆಯಿಂದ ತೃಪ್ತರಾಗಿ ಸಂತೋಷದಿಂದ ಪ್ರಯಾಣ ಮಾಡುತ್ತಿದ್ದಾರೆ ಎಂದರು.
ಉತ್ತರ ಕರ್ನಾಟಕದಲ್ಲಿ ಬಸ್‌ಗಳ ಕೊರತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘1000 ಹೊಸ ಬಸ್‌ಗಳನ್ನು ಖರೀದಿಸಲು ಈಗಾಗಲೇ ತೀರ್ಮಾನ ಮಾಡಿದ್ದೇವೆ. ಈ ಪೈಕಿ ರಾಮನಗರ ಜಿಲ್ಲೆಗೆ 100 ಬಸ್‌ಗಳನ್ನು ಮಂಜೂರು ಮಾಡಲಾಗಿದೆ. ಉತ್ತರ ಕರ್ನಾಟಕಕ್ಕೂ ಬಸ್‌ಗಳನ್ನು ನಿಗದಿಪಡಿಸಲಾಗುವುದು. ಈಗಾಗಲೇ ಸಾರಿಗೆ ಇಲಾಖೆ ವತಿಯಿಂದ 1 ಸಾವಿರ ಹೊಸ ಬಸ್ ಗಳನ್ನು ನಿಯೋಜಿಸಲು ಬುಕ್ ಮಾಡಲಾಗಿದೆ.
ರಾಮನಗರಕ್ಕೆ 100 ಬಸ್ ನಿಯೋಜಿಸಲಾಗಿದೆ. ಕೆಎಸ್ ಆರ್ ಟಿಸಿಯಲ್ಲಿ ನಾವು ಲಾಭ ನೋಡುತ್ತಿಲ್ಲ. ನಮಗೆ ನಷ್ಟ ಆಗದಿದ್ದರೆ ಸಾಕು. ಇನ್ನು ಸರ್ಕಾರ ಮಹಿಳೆಯರ ಪ್ರಯಾಣದ ವೆಚ್ಚವನ್ನು ಭರಿಸುತ್ತಿದೆಯೇ ಹೊರತು ಸಾರಿಗೆ ಸಂಸ್ಥೆಗಳಿಂದ ವೆಚ್ಚ ಭರಿಸುತ್ತಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




