ಸಚಿವ ಮಧು ಬಂಗಾರಪ್ಪ ಮತ್ತೊಮ್ಮೆ ಪ್ರಾಥಮಿಕ ಶಿಕ್ಷಣ ಓದುವ ಅಗತ್ಯವಿದೆ: ಕುಮಾರ್ ಬಂಗಾರಪ್ಪ
ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಇಲ್ಲದಾಗಿದ್ದು, ಮತ್ತೊಮ್ಮೆ ಅವರು ಪ್ರಾಥಮಿಕ ಶಿಕ್ಷಣ ಓದುವ ಅಗತ್ಯವಿದೆ ಎಂದು ಬಿಜೆಪಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಲೇವಡಿ ಮಾಡಿದರು.

ಶಿವಮೊಗ್ಗ: ಹಿರಿಯರಿಗೆ ಗೌರವ ನೀಡದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಇಲ್ಲದಾಗಿದ್ದು, ಮತ್ತೊಮ್ಮೆ ಅವರು ಪ್ರಾಥಮಿಕ ಶಿಕ್ಷಣ ಓದುವ ಅಗತ್ಯವಿದೆ ಎಂದು ಬಿಜೆಪಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಮಂಗಳವಾರ ಲೇವಡಿ ಮಾಡಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಧು ಬಂಗಾರಪ್ಪ ರಾಜಕೀಯದಲ್ಲಿ ದ್ವೇಷ ಮತ್ತು ಅಹಂಕಾರವನ್ನು ತಂದಿದ್ದಾರೆ. ಹೀಗಾಗಿ ಅಹಂಕಾರಕ್ಕೆ ಮದ್ದರೆಯಲು ಕಮಲದ ಗುರುತಿಗೆ ಮತ ನೀಡಿ ಎಂದು ಕರೆ ನೀಡಿದರು.
ಮಧು ಸಚಿವರಾಗಿ ಕಳೆದ ಒಂದು ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒಂದು ಪೈಸೆಯೂ ಮಂಜೂರು ಮಾಡಿಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಸೊರಬ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ನಮ್ಮ ಕ್ಷೇತ್ರ ಅನ್ನುತ್ತಿದ್ದಂತೆಯೇ ಯೋಜನೆಗೆ ಸಹಿ ಹಾಕಿ ಕಳುಹಿಸುತ್ತಿದ್ದರು. ಇವರು ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು, ಒಂದು ಪೈಸೆ ಕೂಡಾ ತಂದಿಲ್ಲ. ಅವರು ತಂದಿದ್ದು ಬರಗಾಲ ಎಂದು ಟಾಂಗ್ ನೀಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಏರುಪೇರುಗಳಿಂದ ಮತ್ತು ಅವರ ಗ್ಯಾರಂಟಿಯ ಭರವಸೆಯಿಂದ ನಾವು ಸೋಲಬೇಕಾಯಿತು. ಪ್ರಧಾನಿ ಮೋದಿಯವರು ದೇಶದ ಜನತೆಗೆ ವಿಶ್ವಾಸ ನೀಡಿದ್ದಾರೆ. ಹಾಗಾಗಿ, ಇದರಿಂದ ಎಲ್ಲರೂ ಕಮಲದ ಚಿಹ್ನೆಗೆ ಮತ ನೀಡುವ ಮೂಲಕ ಬಿ.ವೈ.ರಾಘವೇಂದ್ರರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಗೀತಾ ಶಿವರಾಜ್ ಕುಮಾರ್ ಕುರಿತು ಮಾತನಾಡಿ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಕನ್ನಡ ಚಿತ್ರರಂಗ ಬೆಂಬಲಿಸಿದೆ ಎಂದಾದರೆ, ನಾನೂ ಒಬ್ಬ ನಿರ್ಮಾಪಕ. ನನ್ನಂತೆಯೇ ಮುನಿರತ್ನ, ರಾಕ್ಲೈನ್ ವೆಂಕಟೇಶ್ ಸೇರಿ ಹಲವರಿದ್ದಾರೆ. ನಾವು ಯಾರೂ ಬೆಂಬಲ ನೀಡಿಲ್ಲ. ಗೀತಾ ಅವರು ಇಂತಹ ಇನ್ನೂ ಐದು ಚುನಾವಣೆ ನಡೆಸಿದರೂ ಸಹ ಗೆಲ್ಲುವುದಿಲ್ಲ. ಅವರು ಗ್ರಾಮ ಪಂಚಾಯತಿ ಚುನಾವಣೆಯಿಂದ ಬರಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ ಈಗ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ಅದೊಂದು ರೀತಿ ಪ್ರಾದೇಶಿಕ ಪಕ್ಷವಾಗಿದೆ. ಲೋಕಸಭಾ ಚುನಾವಣೆಯ ನಂತರ ರಾಜಕೀಯ ಅಲ್ಲೋಲ ಕಲ್ಲೋಲ ಆಗುವುದರಲ್ಲಿ ಅನುಮಾನವಿಲ್ಲ. ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ಶಿವಮೊಗ್ಗವೂ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



