ರಾಜಕೀಯ

ಭಿನ್ನಮತ ಶಮನಕ್ಕೆ BSY ಸಾರಥ್ಯ: ಬಂಡಾಯ ನಾಯಕರ ಮನವೊಲಿಕೆಗೆ ಸತತ ಯತ್ನ

ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆಯಿಂದ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನವನ್ನು ಪರಿಹರಿಸಲು ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಮುಂದಾಳತ್ವ ವಹಿಸಿದ್ದು, ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಎದುರಾಗಿರುವ ಅಡೆತಡೆ ಹಾಗೂ ಸವಾಲುಗಳನ್ನು ಒಂದೊಂದಾಗಿ ನಿವಾರಣೆ ಮಾಡುತ್ತಿದ್ದಾರೆ.

ಭಿನ್ನಮತ ಶಮನಕ್ಕೆ BSY ಸಾರಥ್ಯ: ಬಂಡಾಯ ನಾಯಕರ ಮನವೊಲಿಕೆಗೆ ಸತತ ಯತ್ನ
ಬಿ ಎಸ್ ಯಡಿಯೂರಪ್ಪ(ಸಂಗ್ರಹ ಚಿತ್ರ)
Published On :

ಬೆಂಗಳೂರು: ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆಯಿಂದ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನವನ್ನು ಪರಿಹರಿಸಲು ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಮುಂದಾಳತ್ವ ವಹಿಸಿದ್ದು, ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಎದುರಾಗಿರುವ ಅಡೆತಡೆ ಹಾಗೂ ಸವಾಲುಗಳನ್ನು ಒಂದೊಂದಾಗಿ ನಿವಾರಣೆ ಮಾಡುತ್ತಿದ್ದಾರೆ.

ಕಳೆದ ಒಂದು ವಾರದಿಂದ ಯಡಿಯೂರಪ್ಪ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಸತತವಾಗಿ ವಿವಿಧ ಕ್ಷೇತ್ರಗಳ ಮುಖಂಡರನ್ನ ಭೇಟಿ ಮಾಡುವ ಮೂಲಕ ಅವರ ಅಸಮಾಧಾನವನ್ನು ಆಲಿಸಿ ಬಗೆಹರಿಸುವ ಪ್ರಯತ್ನ ಮಾಡಿದರು.

ಸೋಮವಾರ ಟಿಕೆಟ್ ವಂಚಿತ ಕೊಪ್ಪಳ ಕ್ಷೇತ್ರದ ಹಾಲಿ ಸಂಸದ ಕರಡಿ ಸಂಗಣ್ಮ ಸೇರಿದಂತೆ ಕ್ಷೇತ್ರದ ಮುಖಂಡರೊಂದಿಗೆ ಸುದೀರ್ಘ ಸಭೆ ನಡೆಸಿ ಅಸಮಾಧಾನ ಶಮನಗೊಳಿಸಿದರು. ಕಾಂಗ್ರೆಸ್ ನತ್ತ ಮುಖ ಮಾಡಿದ್ದ ಕರಡಿ ಸಂಗಣ್ಣ ಅವರನ್ನು ಪಕ್ಷದಲ್ಲೇ ಉಳಿಯುವಂತೆ ಮಾಡಿದರು.

ಇದಕ್ಕೂ ಮೊದಲು ಬಳ್ಳಾರಿ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಶಾಸಕ ಹಾಗೂ ಕೆಆರ್'ಪಿಪಿ ಪಕ್ಷ ಸ್ಥಾಪಿಸಿದ್ದ ಗಾಲಿ ಜನಾರ್ಧನ ರೆಡ್ಡಿಯವರನ್ನು ಪಕ್ಷಕ್ಕೆ ತರುವಲ್ಲಿ ಯಡಿಯೂರಪ್ಪ ಪಾತ್ರ ಮಹತ್ವದ್ದಾಗಿತ್ತು.

ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಉದ್ಭವಿಸಿದ್ದ ಬಿಕ್ಕಟ್ಟನ್ನೂ ಪರಿಹರಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಅತೃಪ್ತರ ಜೊತೆ ಯಡಿಯೂರಪ್ಪ ಮಂಗಳವಾರ ನಡೆಸಿದ ಸಂಧಾನ ಮಾತುಕತೆ ಶಸ್ವಿಯಾಗಿದ್ದು, ದಾವಣಗೆರೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬಿಜೆಪಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ.

ಸೋಮಣ್ಣ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಅವರನ್ನು ಭೇಟಿ ಮಾಡಲು ಯಡಿಯೂರಪ್ಪ ಕಳೆದ ವಾರ ತುಮಕೂರಿಗೆ ಭೇಟಿ ನೀಡಿದ್ದರು.

ಇಂದು ಬೆಳಗಾವಿಗೆ ಯಡಿಯೂರಪ್ಪ

ಭಿನ್ನಮತ ಶಮನ ಪ್ರಯತ್ನ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಇಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.

ಈ ಕುರಿತು ಮಾತನಾಡಿರುವ ಯಡಿಯೂರಪ್ಪ ಅವರು, "ನಾನು ಇಂದು ದಾವಣಗೆರೆಗೆ ಮತ್ತು ನಾಳೆ ಬೆಳಗಾವಿಗೆ ಹೋಗುತ್ತಿದ್ದೇನೆ. ಅಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಕುಳಿತು ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಪಕ್ಷದಲ್ಲಿ ಯಾವುದೇ ತೊಡಕುಗಳಿಲ್ಲ ಎಂದು ಹೇಳಿದರು.

ಎಲ್ಲಾ 28 ಸ್ಥಾನಗಳನ್ನು ಗೆಲ್ಲಬೇಕು ಎಂಬುದು ನಮ್ಮ ನಿರೀಕ್ಷೆಯಾಗಿದ್ದು, ಅದಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ, ಈ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.