ರಾಜಕೀಯ

ಜಯಪ್ರಕಾಶ್ ಹೆಗ್ಡೆ, ಎಂಪಿ ಕುಮಾರಸ್ವಾಮಿ ಸೇರಿ ಮೂವರು ನಾಯಕರು ಕಾಂಗ್ರೆಸ್ ಸೇರ್ಪಡೆ

ಕೆ ಜಯಪ್ರಕಾಶ್ ಹೆಗ್ಡೆ ಮತ್ತು ಇಬ್ಬರು ಮಾಜಿ ಶಾಸಕರಾದ ಬಿಎಂ ಸುಕುಮಾರ್ ಶೆಟ್ಟಿ ಮತ್ತು ಎಂಪಿ ಕುಮಾರಸ್ವಾಮಿ ಅವರು ಮಂಗಳವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ಜಯಪ್ರಕಾಶ್ ಹೆಗ್ಡೆ, ಎಂಪಿ ಕುಮಾರಸ್ವಾಮಿ ಸೇರಿ ಮೂವರು ನಾಯಕರು ಕಾಂಗ್ರೆಸ್ ಸೇರ್ಪಡೆ
ಕೆ ಜಯಪ್ರಕಾಶ್ ಹೆಗ್ಡೆ
Published On :

ಬೆಂಗಳೂರು: ಇತ್ತೀಚಿನವರೆಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕೆ ಜಯಪ್ರಕಾಶ್ ಹೆಗ್ಡೆ ಮತ್ತು ಇಬ್ಬರು ಮಾಜಿ ಶಾಸಕರಾದ ಬಿಎಂ ಸುಕುಮಾರ್ ಶೆಟ್ಟಿ ಮತ್ತು ಎಂಪಿ ಕುಮಾರಸ್ವಾಮಿ ಅವರು ಮಂಗಳವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಮಾಜಿ ಶಾಸಕ, ಸಂಸದ ಮತ್ತು ಸಚಿವ ಜಯಪ್ರಕಾಶ್ ಹೆಗ್ಡೆ ಅವರು ಫೆಬ್ರವರಿ 29 ರಂದು "ಜಾತಿ ಗಣತಿ" ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು.

ಜಯಪ್ರಕಾಶ್ ಹೆಗ್ಡೆ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಹೆಗ್ಡೆ ಅವರು ಈ ಹಿಂದೆ ಬಿಜೆಪಿಯಲ್ಲಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಹಿಂದೆ 2009 ಮತ್ತು 2014ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದರು. ಉಡುಪಿ- ಚಿಕ್ಕಮಗಳೂರು ಸಂಸದರಾಗಿದ್ದ ಸದಾನಂದ ಗೌಡ ಅವರು ಅಚಾನಕ್ ಆಗಿ ಸಿಎಂ ಆದರು. ಈ ಸಂದರ್ಭದಲ್ಲಿ ಅವರು ರಾಜೀನಾಮೆ ನೀಡಿದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಕಾಂಗ್ರೆಸ್ ನಿಂದ ಸಂಸದರಾಗಿ ಆಯ್ಕೆ ಆದರು. ಆ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಅವರನ್ನು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಇನ್ನು ಬಿಜೆಪಿಯ ಇಬ್ಬರು ಮಾಜಿ ಶಾಸಕರಾದ ಬಿ ಎಂ ಸುಕುಮಾರ್ ಶೆಟ್ಟಿ ಮತ್ತು ಮೂರು ಬಾರಿ ಮೂಡಿಗೆರೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎಂಪಿ ಕುಮಾರಸ್ವಾಮಿ ಅವರು ಸಹ ಇಂದು ಕಾಂಗ್ರೆಸ್ ಸೇರಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಈ ಇಬ್ಬರಿಗೂ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಕುಮಾರಸ್ವಾಮಿ 2023ರ ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆಯಿಂದ ಜೆಡಿಎಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದರು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗೃಹ ಸಚಿವ ಜಿ ಪರಮೇಶ್ವರ, ಇಂಧನ ಸಚಿವ ಕೆ ಜೆ ಜಾರ್ಜ್ ಸಮ್ಮುಖದಲ್ಲಿ ಈ ಮೂವರು ತಮ್ಮ ಬೆಂಬಲಿಗರೊಂದಿಗೆ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.