ಜಮೀರ್ ಬಾಯಿ ಬಿಟ್ಟಾಗಲೆಲ್ಲಾ ಕಾಂಗ್ರೆಸ್ ವೋಟುಗಳಿಗೆ ಕತ್ತರಿ: ವಸತಿ ಸಚಿವರ ವಿರುದ್ಧ 'ಕೈ' ನಾಯಕರ ತಪರಾಕಿ
ಜಮೀರ್ ಹೇಳಿಕೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ಅರಿತ ಸಚಿವರ ತಂಡವು ಇಡೀ ದಿನವನ್ನು ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿ ಸಂದರ್ಭಾನುಸಾರವಾಗಿ ಮಾತ್ರ ಹೇಳಲಾಗಿದೆ ಎಂಬ ತಿಪ್ಪೆ ಸಾರಿಸುವ ಕೆಲಸ ಮಾಡಿದ್ದಾರೆ.

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಅವರು ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆ ಇದೀಗ ಭಾರೀ ಚರ್ಚಗೆ ಕಾರಣವಾಗಿದೆ. ಸಾಮಾನ್ಯವಾಗಿ ಸಚಿವ ಜಮೀರ್ ಅಹ್ಮದ್ ನೀಡುವ ಹೇಳಿಕೆಗಳು ಬಿಜೆಪಿಯಲ್ಲಿ ಚರ್ಚೆಗೆ ಗುರಿಯಾಗುತ್ತದೆ. ಆದರೆ ಈ ಬಾರಿ ಅವರ ಹೇಳಿಕೆ ಪಕ್ಷದೊಳಗೆ ವಿವಾದ ತಂದೊಡ್ಡಿದೆ.
ಬೀದರ್ನಲ್ಲಿ ನಡೆದ ವಕ್ಫ್ ಅದಾಲತ್ನಲ್ಲಿ ಸಚಿವ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು, ಈಶ್ವರ ಖಂಡ್ರೆ ಮಗ ಮುಸ್ಲಿಂ ಮತಗಳಿಂದ ಗೆದಿದ್ದು, ಹೀಗಾಗಿ ನಮ್ಮ (ಮುಸ್ಲಿಮರ) ಕೆಲಸ ಅವರು ಮಾಡಿ ಕೊಡಲೇಬೇಕು ಎಂಬ ಹೇಳಿಕೆ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಜಮೀರ್ ಅಹ್ಮದ್ ಸ್ಪಷ್ಟನೆ ಕೂಡ ನೀಡಿದ್ದಾರೆ.
ಜಮೀರ್ ಹೇಳಿಕೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ಅರಿತ ಸಚಿವರ ತಂಡವು ಇಡೀ ದಿನವನ್ನು ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿ ಸಂದರ್ಭಾನುಸಾರವಾಗಿ ಮಾತ್ರ ಹೇಳಲಾಗಿದೆ ಎಂಬ ತಿಪ್ಪೆ ಸಾರಿಸುವ ಕೆಲಸ ಮಾಡಿದ್ದಾರೆ. ಜಮೀರ್ ಅಹ್ಮದ್ ಪ್ರತಿ ಬಾರಿ ಮಾತನಾಡಿದಾಗಲೂ ಏನೋ ಒಂದು ಎಡವಟ್ಟು ಮಾಡುತ್ತಾರೆ, ಇದರಿಂದ ಕಾಂಗ್ರೆಸ್ ಹತ್ತು ಮತಗಳನ್ನು ಕಳೆದುಕೊಳ್ಳುತ್ತದೆ ಎಂದು ಕೆಲವು ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಮೀರ್ ಅವರ ಕನ್ನಡ ಮಾತನಾಡುವ ಸಾಮರ್ಥ್ಯವು ಅತ್ಯಂತ ಕಳಪೆಯಾಗಿದೆ, ಹೀಗಾಗಿ ಮುಜುಗರ ತಪ್ಪಿಸಲು ಕನ್ನಡದಲ್ಲಿ ಸಾರ್ವಜನಿಕವಾಗಿ ಮಾತನಾಡಲು ಅವರಿಗೆ ಪಾಠ ನೀಡಬೇಕು ಎಂದು ಪಕ್ಷದ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ಮುಸ್ಲಿಮರು ಕಾಂಗ್ರೆಸ್ಗೆ ಮತ ಹಾಕಿದ್ದಾರೆ ಮತ್ತು ಕಾಂಗ್ರೆಸ್ನ ಚುನಾಯಿತ ಪ್ರತಿನಿಧಿಗಳು ಅವರ ಸೇವೆ ಮಾಡಬೇಕು ಎಂದು ಜಮೀರ್ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಅವರು ಹೇಗೆ ಹೇಳಿದರು ಅದು ಹಲವರ ಸಂವೇದನೆಯನ್ನು ಕೆರಳಿಸಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಕಿಡಿ ಕಾರಿದ್ದಾರೆ.
ಇನ್ನೂ ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಜಮೀರ್ ನೀಡಿರುವ ಹೇಳಿಕೆ ಅವರ ಸ್ವಂತ ಅಭಿಪ್ರಾಯವಾಗಿದೆ ಮತ್ತು ಅದು ಪಕ್ಷದ ಅಭಿಪ್ರಾಯದ ಪ್ರತಿಬಿಂಬವಲ್ಲ. ಮತದಾರರು ಯಾರೇ ಆಗಿರಲಿ, ಯಾವ ಸಮುದಾಯದವರಾಗಿದ್ದರೂ ನಾವು ಅವರ ಸೇವೆ ಮಾಡುತ್ತೇವೆ. ಎಲ್ಲರ ಸೇವೆ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.
ಇತ್ತೀಚೆಗೆ ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಮಾಧ್ಯಮ ವಿಭಾಗದ ಟೀಕೆಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಹಿತಿಗಳನ್ನು ರಾಜಕೀಯ ಪಕ್ಷದ ಬೆಂಬಲಿಗರೆಂದು ಕರೆದಿದ್ದಕ್ಕಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರೊಂದಿಗೆ ಜಮೀರ್ ಹೇಳಿಕೆಗಳ ವಿಚಾರದಲ್ಲಿ ಮಾತ್ರವಲ್ಲದೆ ಹಲವು ರಂಗಗಳಲ್ಲಿ ಕಾಂಗ್ರೆಸ್ ಸಂವಹನ ಕಳೆದುಕೊಂಡಂತೆ ಕಂಡುಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



