ಚರ್ಚೆ ತಡೆಯಲು ಅಧಿವೇಶನದ ಹಿಂದಿನ ದಿನ ತನಿಖಾ ಸಮಿತಿ ರಚನೆ: BJP ಆರೋಪ
ಮುಡಾ ನಿವೇಶನ ಅಕ್ರಮ ಹಂಚಿಕೆ ಕುರಿತು ವಿಧಾನಸಭೆಯಲ್ಲಿ ಬಿಜೆಪಿ ಬುಧವಾರ ಮಂಡಿಸಿದ ನಿಲುವಳಿ ಸೂಚನೆಯನ್ನು ಚರ್ಚೆಗೆ ತೆಗೆದುಕೊಳ್ಳಲು ಸಭಾಧ್ಯಕ್ಷ ಯು.ಟಿ. ಖಾದರ್ ನಿರಾಕರಿಸಿದರು. ಈ ವಿಚಾರ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಯಿತು.

ಬೆಂಗಳೂರು: ರಾಜಕೀಯ ಅನುಕೂಲಕ್ಕಾಗಿ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ ಮುಡಾ ತನಿಖಾ ಸಮಿತಿ ರಚನೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಮುಡಾ ನಿವೇಶನ ಅಕ್ರಮ ಹಂಚಿಕೆ ಕುರಿತು ವಿಧಾನಸಭೆಯಲ್ಲಿ ಬಿಜೆಪಿ ಬುಧವಾರ ಮಂಡಿಸಿದ ನಿಲುವಳಿ ಸೂಚನೆಯನ್ನು ಚರ್ಚೆಗೆ ತೆಗೆದುಕೊಳ್ಳಲು ಸಭಾಧ್ಯಕ್ಷ ಯು.ಟಿ. ಖಾದರ್ ನಿರಾಕರಿಸಿದರು. ಈ ವಿಚಾರ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಯಿತು.
ಈ ನಿಲುವಳಿ ಸೂಚನೆಗೆ ಯಾವುದೇ ಆತುರ ಇಲ್ಲ. ಈ ಹಗರಣದ ಕುರಿತು ವಿಚಾರಣಾ ಆಯೋಗ ತನಿಖೆ ನಡೆಸುತ್ತಿದೆ. ಹೀಗಾಗಿ, ನಿಲುವಳಿ ಚರ್ಚೆಗೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ, ತಿರಸ್ಕರಿಸುತ್ತೇನೆ ಎಂದು ಸ್ಪೀಕರ್ ಪ್ರಕಟಿಸಿದರು.
ಬೆಳಿಗ್ಗೆ ಪ್ರಶ್ನೋತ್ತರ ಕಲಾಪಕ್ಕೂ ಮೊದಲೇ ನಿಲುವಳಿ ಮಂಡಿಸಲು ವಿರೋಧ ಪಕ್ಷದ ನಾಯಕ ಆರ್. ಅಶೋಕ ಪಟ್ಟು ಹಿಡಿದರು. ಆದರೆ, ಪ್ರಶ್ನೋತ್ತರದ ಅವಧಿ ಮುಗಿಯದೆ ಈ ಬಗ್ಗೆ ತೀರ್ಮಾನಿಸುವುದಿಲ್ಲ ಎಂದು ಸಭಾಧ್ಯಕ್ಷರು ಹೇಳಿದರು.
ಪ್ರಶ್ನೋತ್ತರ ಕಲಾಪ ರದ್ದು ಮಾಡಿ ಈ ವಿಚಾರ ತೆಗೆದುಕೊಳ್ಳಿ’ ಎಂದು ಬಿಜೆಪಿಯ ವಿ. ಸುನೀಲ್ ಕುಮಾರ್ ಆಗ್ರಹಿಸಿದರು. ಆಗ ಸಭಧ್ಯಕ್ಷರು, ‘ಯಾಕೆ ಇಷ್ಟು ತುರ್ತು. ಇಷ್ಟು ದಿನ ಸುಮ್ಮನಿದ್ದೀರಿ. ಆಯೋಗದ (ಮುಡಾ ವಿಚಾರಣೆಗೆ ರಚಿಸಿದ ಆಯೋಗ) ಬಳಿ ಹೋಗಿ ಎಂದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸುನೀಲ್ ಕುಮಾರ್, ಪೀಠದಲ್ಲಿ ಕುಳಿತು ನೀವು ಈ ಮಾತು ಹೇಳುವುದು ಸರಿಯಲ್ಲ ಎಂದರು.
ಬಳಿಕ ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಹಾಗೂ ಕಾನೂನು ಸಚಿವ ಎಚ್.ಕೆ.ಪಾಟೀಲ್ ನಡುವೆ ತೀವ್ರ ವಾಗ್ವಾದ ನಡೆಯಿತು.
ಮುಡಾ ಹಗರಣವನ್ನು ತನಿಖಾ ಆಯೋಗಕ್ಕೆ ವಹಿಸಿರುವುದರಿಂದ ನಿಯಮಾನುಸಾರ ಸದನದಲ್ಲಿ ಮುಂದೂಡಿಕೆ ನಿರ್ಣಯದಡಿ ಚರ್ಚೆ ನಡೆಸುವಂತಿಲ್ಲ. ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಪಿಎನ್ ದೇಸಾಯಿ ಅವರನ್ನೊಳಗೊಂಡ ಏಕವ್ಯಕ್ತಿ ಆಯೋಗವನ್ನು ರಚಿಸಿದ್ದು, ತನಿಖೆ ಪೂರ್ಣಗೊಳಿಸಲು ಆರು ತಿಂಗಳ ಕಾಲಾವಕಾಶ ನೀಡಿದೆ ಎಂದು ಪಾಟೀಲ್ ಹೇಳಿದರು.
ಈ ವೇಳೆ ಮಾತನಾಡಿದ ಸುರೇಶ್ ಕುಮಾರ್ ಅವರು, ಆಯೋಗ ರಚನೆ ಮಾಡುವುದು ಸರಕಾರಕ್ಕೆ ನಿರೀಕ್ಷಣಾ ಜಾಮೀನು ಇದ್ದಂತೆ. ಮುಂಗಾರು ಅಧಿವೇಶನ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ ಜುಲೈ 14 ರಂದು ತನಿಖಾ ಸಮಿತಿ ರಚಿಸಲಾಗಿದೆ, ನಾವು ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ ಎಂದು ನಿಮಗೆ ತಿಳಿದಿತ್ತು, ಅಂತಹ ಮಹತ್ವದ ವಿಷಯವನ್ನು ಚರ್ಚಿಸುವುದು ಸದನದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ಮುಡಾ ಅಕ್ರಮಗಳು ತುರ್ತು ವಿಷಯವಲ್ಲ. ಎಂಟು ದಿನಗಳ ಹಿಂದೆ ಅಧಿವೇಶನ ಆರಂಭವಾಗಿದ್ದು, ಈಗ ಅದನ್ನು ಏಕೆ ಮಂಡಿಸುತ್ತಿದ್ದೀರಿ? ಅದನ್ನು ನಿಮ್ಮ ರಾಜಕೀಯ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದೀರಿ ಎಂದು ಆರೋಪಿಸಿದರು,
ಇದು ಬಹಳ ಗಂಭೀರ ವಿಷಯ. ಮುಖ್ಯಮಂತ್ರಿ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆ. ಈ ವಿಚಾರ ಚರ್ಚೆಗೆ ಅವಕಾಶ ಕೊಡದೇ ಇದ್ದರೆ ಹೇಗೆ ಎಂದು ಸುರೇಶ್ ಕುಮಾರ್ ಪ್ರಶ್ನಿಸಿದರು.
ಮುಖ್ಯಮಂತ್ರಿಯ ಹೆಸರು ಹೇಳುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೆಲಹೊತ್ತು ಗದ್ದಲದ ವಾತಾವರಣ ಸೃಷ್ಟಿಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



