ಲೋಕಸಭಾ ಚುನಾವಣೆ: ಶೀಘ್ರಗತಿಯಲ್ಲಿ ಅಭ್ಯರ್ಥಿಗಳ ಘೋಷಿಸಿ; ಹೈಕಮಾಂಡ್'ಗೆ ರಾಜ್ಯ ಬಿಜೆಪಿ ಆಗ್ರಹ
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಅಭ್ಯರ್ಥಿಗಳನ್ನು ಶೀಘ್ರಗತಿಯಲ್ಲಿ ಆಯ್ಕ ಮಾಡುವಂತೆ ಹೈಕಮಾಂಡ್'ಗೆ ರಾಜ್ಯ ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ.

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಅಭ್ಯರ್ಥಿಗಳನ್ನು ಶೀಘ್ರಗತಿಯಲ್ಲಿ ಆಯ್ಕ ಮಾಡುವಂತೆ ಹೈಕಮಾಂಡ್'ಗೆ ರಾಜ್ಯ ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ.
ನಿನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರುನಗರದ ಹೊರವಲಯದ ರಮಾಡ ರೆಸಾರ್ಟ್ನಲ್ಲಿ ಲೋಕಸಭಾ ಕ್ಷೇತ್ರವಾರು ಸಭೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಅವರು, ಎರಡು ದಿನಗಳ ಕಾಲ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳ ಸ್ಥಿತಿಗತಿ ಕುರಿತು ಸಂಸದರು, ಶಾಸಕರು, ಮಾಜಿ ಶಾಸಕರು, ಪಕ್ಷದ ಪ್ರಮುಖರ ಜೊತೆ ಸುದೀರ್ಘವಾದ ಚರ್ಚೆ ಮಾಡಿದ್ದೇವೆ. ಚುನಾವಣೆ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಬಿಜೆಪಿ ಪರ ವಾತಾವರಣ ಇದೆ. ರಾಜ್ಯದಲ್ಲಿಯೂ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಆದರೂ ಪ್ರಸ್ತುತ ಸನ್ನಿವೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಹೇಳಿದರು.
ಇಡೀ ದೇಶದಲ್ಲಿ ಮೋದಿ ಪರ ಅಭಿಪ್ರಾಯ ಹಾಗೂ ಅವರ ಜನಪ್ರಿಯತೆಯಿಂದಾಗಿ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿಯಾಗಬೇಕು ಎನ್ನುವ ವಾತಾವರಣ ಇದೆ. ರಾಜ್ಯದಲ್ಲಿಯೂ ಅದಕ್ಕೆ ಪೂರಕ ವಾತಾವರಣವಿದ್ದು, ಬಿಜೆಪಿಗೆ ಅಧಿಕಾರ ನೀಡಲು ಮತದಾರರು ಉತ್ಸುಕರಾಗಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗುವ ಉತ್ಸಾಹದಲ್ಲಿದ್ದಾರೆ. ಬಿಜೆಪಿ ಕಾರ್ಯಕರ್ತರು ಕೂಡ ಸೋಲಿನ ಹತಾಶೆಯಿಂದ ಹೊರಗೆ ಬಂದು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಹಾಗೂ ಎಲ್ಲ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಸಚಿವರು ಸಿದ್ದಪಡಿಸಿರುವ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತೃಪ್ತಿ ತಂದಿಲ್ಲ: ಡಿಕೆ ಶಿವಕುಮಾರ್
ಮುಖಂಡರು ಎರಡು ದಿನ ಸಾಕಷ್ಟು ಸಲಹೆ ನೀಡಿದ್ದಾರೆ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ ಮಾಡಲು ಅಭ್ಯರ್ಥಿಗಳ ಆಯ್ಕೆಯನ್ನು ಮೊದಲೇ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವರಿಷ್ಠರನ್ನು ಭೇಟಿ ಮಾಡಿ, ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.
ಪಕ್ಷದ ಹಿತ ಗಮನದಲ್ಲಿಟ್ಟುಕೊಂಡು ಎಲ್ಲಾ ಕ್ಷೇತ್ರದಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಲಿದ್ದಾರೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಟ್ಟುಕೊಳ್ಳುವ ಫಲಿತಾಂಶ ಈ ಬಾರಿ ಬರಲಿದೆ ಎನ್ನುವ ವಿಶ್ವಾಸವಿದೆ. ರಾಜ್ಯದ ಮತದಾರರು ಮೋದಿಗೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ, ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಚುನಾವಣೆ ಎದುರಿಸಲಿದ್ದೇವೆ ಎಂದರು.
ನಮ್ಮ ಗುರಿ ಇರುವುದು 28 ಕ್ಷೇತ್ರ ಗೆಲ್ಲಬೇಕು ಎಂಬುದು, ಅದಕ್ಕೆ ವರಿಷ್ಠರ ಭೇಟಿ ಮಾಡಿ ಅಭ್ಯರ್ಥಿಗಳ ವಿಚಾರದಲ್ಲಿ ಮಾತುಕತೆ ನಡೆಸಲಾಗುತ್ತದೆ. ಕಾಂಗ್ರೆಸ್ ನಾಯಕರು 18-20 ಸ್ಥಾನ ಗೆಲ್ಲುವ ಭ್ರಮೆಯಲ್ಲಿದ್ದರು, ಸಚಿವರನ್ನು ನಿಲ್ಲಿಸುವ ಮಾತನಾಡಲಾಗುತ್ತಿತ್ತು. ಆದರೆ, ಈಗ ಬಿಜೆಪಿ ಅಲೆ ನೋಡಿ ಸಚಿವರು ಚುನಾವಣೆಗೆ ನಿಲ್ಲಲು ಸಿದ್ಧರಿಲ್ಲದಂತಾಗಿದೆ. ಸೋಲುವ ಭೀತಿಯಿಂದ ಚುನಾವಣೆಗೆ ನಿಲ್ಲಲು ಹಿಂದೇಟು ಹಾಕಿದ್ದಾರೆ. ಮಂತ್ರಿಯಾಗಿ ಸೋತರೆ ಮುಖಭಂಗವಾಗಲಿದೆ ಎಂದು ಯಾರೂ ಚುನಾವಣೆಗೆ ನಿಲ್ಲಲು ಮುಂದೆ ಬರುತ್ತಿಲ್ಲ. ಆದರೆ, ನಮ್ಮ ಸಂಸದರು ಉತ್ಸಾಹದಲ್ಲಿದ್ದಾರೆ. ಚುನಾವಣೆಗೆ ನಿಲ್ಲಲ್ಲ ಎಂದವರೂ ಮತ್ತೊಮ್ಮೆ ನಿಲ್ಲುವ ಅಪೇಕ್ಷೆ ಹೊಂದಿದ್ದಾರೆ. ಆದರೆ, ಎಲ್ಲವನ್ನೂ ವರಿಷ್ಠರು ನಿರ್ಧಾರ ಮಾಡಲಿದ್ದಾರೆ ಎಂದು ಹೇಳಿದರು.
ಬಳಿಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರಕಾರ ಸಮಿತಿ ರಚಿಸುತ್ತಿದ್ದು, ಪಕ್ಷದ ಕಾರ್ಯಕರ್ತರಿಗೆ 20ರಿಂದ 25 ಸಾವಿರ ಹಣ ನೀಡುವ ಮೂಲಕ ಹಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಿಎಂಗೆ 14 ಬಜೆಟ್ ಮಂಡಿಸಿದ ಅನುಭವವಿದೆ, ಆದರೂ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಇದೀಗ ವೇತನ ನೀಡುವ ಸ್ಥಿತಿಯಲ್ಲಿಯೂ ಸರ್ಕಾರ ಇಲ್ಲದಂತಾಗಿದೆ.
ಈ ಬಗ್ಗೆ ಶೀಘ್ರದಲ್ಲೇ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ರಾಜ್ಯ ಸರ್ಕಾರ ಹಣ ದುರುಪಯೋಗ ಮಾಡುತ್ತಿರುವ ಬಗ್ಗೆ ದೂರು ನೀಡಲಾಗುತ್ತದೆ. ಅಲ್ಲದೆ, ನ್ಯಾಯಾಲಯದ ಮೊರೆ ಹೋಗುತ್ತೇವೆಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


