ಲೋಕಸಭೆ ಚುನಾವಣೆಗೆ ಸಚಿವರು ಸಿದ್ದಪಡಿಸಿರುವ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತೃಪ್ತಿ ತಂದಿಲ್ಲ: ಡಿಕೆ ಶಿವಕುಮಾರ್
ಮೇ ತಿಂಗಳ ಚುನಾವಣೆಗೆ ಮುನ್ನ ಪ್ರತಿ ಲೋಕಸಭಾ ಕ್ಷೇತ್ರದಿಂದ ಸಚಿವರು ಸಿದ್ಧಪಡಿಸಿರುವ ಸಂಭಾವ್ಯರ ಪಟ್ಟಿ ನನಗೆ ತೃಪ್ತಿ ತಂದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ.

ಬೆಂಗಳೂರು: ಮೇ ತಿಂಗಳ ಚುನಾವಣೆಗೆ ಮುನ್ನ ಪ್ರತಿ ಲೋಕಸಭಾ ಕ್ಷೇತ್ರದಿಂದ ಸಚಿವರು ಸಿದ್ಧಪಡಿಸಿರುವ ಸಂಭಾವ್ಯರ ಪಟ್ಟಿ ನನಗೆ ತೃಪ್ತಿ ತಂದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ.
ಚುನಾವಣಾ ಸಿದ್ಧತೆ ಕುರಿತು ಚರ್ಚಿಸಲು ಪಕ್ಷದ ಮುಖಂಡರ ಸಭೆಯ ನಂತರ ಮಾತನಾಡಿದ ಶಿವಕುಮಾರ್ , ಸಂಭಾವ್ಯ ಅಭ್ಯರ್ಥಿಗಳ ಬಗ್ಗೆಗಿನ ವರದಿಗಳು ತೃಪ್ತಿಕರವಾಗಿಲ್ಲ, ನಾನು, ಎಐಸಿಸಿ, ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಮೀಕ್ಷೆ ನಡೆಸುತ್ತಿದ್ದೇವೆ ಎಂದರು.
ಎಐಸಿಸಿ ನಾಯಕರು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅಜೆಂಡಾ ನೀಡಿದ್ದಾರೆ. ಗುರುವಾರ ನಾಲ್ಕು ರಾಜ್ಯಗಳ ಸಚಿವರ ಸಭೆಗೆ ಎಐಸಿಸಿ ಕರೆದಿದೆ. ಅಲ್ಲಿ ಅವರು ನಮಗೆ ಚುನಾವಣೆಗೆ ಕೆಲಸ ಮಾಡುವ ವಿಧಾನಗಳನ್ನು ನೀಡುತ್ತಾರೆ, ನಮಗೆ ಹೆಚ್ಚು ಸಮಯವಿಲ್ಲ. ಕ್ಷೇತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಬೇಕು. ವಿಧಾನಸಭಾ ಚುನಾವಣೆಯ ಸಮಯದಲ್ಲಿದ್ದ ಬದ್ಧತೆಯನ್ನು ಪ್ರದರ್ಶಿಸಬೇಕು. ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ಬಗ್ಗೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು.
ಫೆಬ್ರವರಿ 12 ರೊಳಗೆ ಬಜೆಟ್ ಅಧಿವೇಶನ ಪ್ರಾರಂಭವಾಗುವ ಸಾಧ್ಯತೆಯಿರುವುದರಿಂದ ಪಕ್ಷವು ಫೆಬ್ರವರಿ 12 ರ ಮೊದಲು ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ರ್ಯಾಲಿ ನಡೆಸಲಿದೆ. ಇದು ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿಯಾಗಿದೆ ಎಂದರು.
ಕಳೆದ ಒಂದು ವಾರದಿಂದ ಎಐಸಿಸಿ ನಾಯಕರೊಂದಿಗಿನ ಸಭೆಯ ನಂತರ ಮೇಲೆ ನಾವು ಕೆಲವು ನಿರ್ಧಾರಗಳಿಗೆ ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳನ್ನು ಜನರಿಗೆ ತಿಳಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು.
ವಿವಿಧ ಖಾತರಿ ಯೋಜನೆಗಳ ಫಲಾನುಭವಿಗಳಿಗೆ ಪಕ್ಷದ ಕಾರ್ಯಕರ್ತರು ಗುರುತಿನ ಚೀಟಿ ನೀಡಲು ಸರ್ಕಾರ ನಿರ್ಧರಿಸಿದೆ. ‘ಚುನಾವಣೆಯಲ್ಲಿ ಪಕ್ಷ ಮತ್ತು ದೇಶ ಕರ್ನಾಟಕದತ್ತ ಎದುರು ನೋಡುತ್ತಿದೆ’ ಎಂದ ಅವರು, ಆ ನಿರೀಕ್ಷೆಗಳನ್ನು ಈಡೇರಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಮನೆ ಮನೆಗೆ ಕಾಂಗ್ರೆಸ್ ಎಂಬ ಕಾರ್ಯಕ್ರಮವನ್ನು ರೂಪಿಸುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ. ಇನ್ನು ಕಾರ್ಯಕರ್ತರಿಗೆ ಶಕ್ತಿ ತುಂಬಲು ನಿಗಮ ಮಂಡಳಿಗಳ ನೇಮಕದ ಮೊದಲ ಪಟ್ಟಿ ಸದ್ಯದಲ್ಲೇ ಪ್ರಕಟವಾಗಲಿದೆ. ಈ ಹುದ್ದೆಗಳ ಕಾಲವಧಿ 2 ವರ್ಷ. ಎಲ್ಲರಿಗೂ ಅವಕಾಶ ಸಿಗಲಿ ಎಂದು ಈ ಕಾಲಮಿತಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ಬಗ್ಗೆ ಎಐಸಿಸಿ ನಾಯಕರು ನಮಗೆ ಅಜೆಂಡಾ ನಿಗದಿ ಮಾಡಿದ್ದಾರೆ. 28 ಕ್ಷೇತ್ರಗಳಿಗೆ ಮಂತ್ರಿಗಳನ್ನು ಉಸ್ತುವಾರಿಯಾಗಿ ನೇಮಕ ಮಾಡಿದ್ದು, ನಾಳೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಾಲ್ಕು ರಾಜ್ಯಗಳ ಸಚಿವರುಗಳ ಸಭೆ ಕರೆಯಲಾಗಿದೆ. ಅಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ತಿಳಿಸುತ್ತಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


