ದೇವೇಗೌಡರೇ.. ಇಳಿ ವಯಸ್ಸಿನಲ್ಲಿ ಈ ಶರಣಾಗತಿಯ ಸ್ಥಿತಿ ಏಕೆ ಬಂತು? ಈಗಲೂ ಕಾಲ ಮಿಂಚಿಲ್ಲ, ತಪ್ಪನ್ನು ತಿದ್ದಿಕೊಳ್ಳಿ: ಸಿಎಂ
ಒಂದು ಪ್ರಾದೇಶಿಕ ಪಕ್ಷವನ್ನು ಇಷ್ಟು ವರ್ಷಗಳ ಕಾಲ ಮುನ್ನಡೆಸುತ್ತಾ ಬಂದ ನೀವು ನಿರಂತರವಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿಯವರನ್ನು ಟೀಕಿಸುತ್ತಾ ಬಂದವರು. ಇದೀಗ ಈ ಇಳಿವಯಸ್ಸಿನಲ್ಲಿ ಈ ಬಗೆಯ ಶರಣಾಗತಿಯ ಸ್ಥಿತಿ ಯಾಕೆ ಬಂತು?...

ಬೆಂಗಳೂರು: ಒಂದು ಪ್ರಾದೇಶಿಕ ಪಕ್ಷವನ್ನು ಇಷ್ಟು ವರ್ಷಗಳ ಕಾಲ ಮುನ್ನಡೆಸುತ್ತಾ ಬಂದ ನೀವು ನಿರಂತರವಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿಯವರನ್ನು ಟೀಕಿಸುತ್ತಾ ಬಂದವರು. ಇದೀಗ ಈ ಇಳಿವಯಸ್ಸಿನಲ್ಲಿ ಈ ಬಗೆಯ ಶರಣಾಗತಿಯ ಸ್ಥಿತಿ ಯಾಕೆ ಬಂತು? ಎಂದು ಮಾಜಿ ಪ್ರಧಾನಮಂತ್ರಿ ಹೆಚ್'ಡಿ.ದೇವೇಗೌಡ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ ಅವರು, ದೇವೇಗೌಡ ಅವರ ವಿರುದ್ಧ ಕಿಡಿಕಾರಿದ್ದಾರೆ.
ಸನ್ಮಾನ್ಯ ಹೆಚ್.ಡಿ.ದೇವೇಗೌಡರೇ, ನೂರು ಕೋಟಿ ಜನರ ಪ್ರತಿನಿಧಿಯಾಗಿರುವ ಪ್ರಧಾನಮಂತ್ರಿಯವರನ್ನು ಆರು ಕೋಟಿ ಜನರ ಪ್ರತಿನಿಧಿಯಾದ ಮುಖ್ಯಮಂತ್ರಿ ಪ್ರಶ್ನೆ ಮಾಡಬಾರದು ಎಂಬ ನಿಮ್ಮ ಮಾತು ನನ್ನಲ್ಲಿ ಅತ್ಯಾಶ್ಚರ್ಯವನ್ನು ಮಾತ್ರವಲ್ಲ ನಿಮ್ಮ ಬಗ್ಗೆ ಕನಿಕರವನ್ನೂ ಉಂಟು ಮಾಡಿದೆ. ಒಂದು ಪ್ರಾದೇಶಿಕ ಪಕ್ಷವನ್ನು ಇಷ್ಟು ವರ್ಷಗಳ ಕಾಲ ಮುನ್ನಡೆಸುತ್ತಾ ಬಂದ ನೀವು ನಿರಂತರವಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿಯವರನ್ನು ಟೀಕಿಸುತ್ತಾ ಬಂದವರು. ಇದೀಗ ಈ ಇಳಿವಯಸ್ಸಿನಲ್ಲಿ ಈ ಬಗೆಯ ಶರಣಾಗತಿಯ ಸ್ಥಿತಿ ಯಾಕೆ ಬಂತು? ಎಂದು ಪ್ರಶ್ನಿಸಿದ್ದಾರೆ.
ನಮ್ಮದು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ. ಇಲ್ಲಿ ಪ್ರಧಾನನಮಂತ್ರಿ ಏಕಚಕ್ರಾಧಿಪತಿಯೂ ಅಲ್ಲ, ಮುಖ್ಯಮಂತ್ರಿ ಮಾಂಡಲೀಕನೂ ಅಲ್ಲ. ಇಬ್ಬರು ಅವರವರ ಸ್ಥಾನಮಾನದಲ್ಲಿ ಸಮಾನರು. ಎರಡೂ ಪದವಿಗಳು ಸಮಾನವಾದುದು, ವಯಸ್ಸಿನ ಹಿರಿ-ಕಿರಿತನಗಳು ಪದವಿಗಳಿಗೆ ಅನ್ವಯವಾಗುವುದಿಲ್ಲ. ಅತಿ ಸಣ್ಣ ವಯಸ್ಸಿಗೆ ಪ್ರಧಾನಿಯಾದ ರಾಜೀವ್ ಗಾಂಧಿಯವರಿದ್ದಾಗಲೂ ಅವರಿಗಿಂತ ಹಿರಿಯರಾದ ಮುಖ್ಯಮಂತ್ರಿಗಳೂ ಇದ್ದರು. ಆಗಲೂ ಪರಸ್ಪರ ಟೀಕೆ-ಟಿಪ್ಪಣಿಗಳು ವಿನಿಮಯವಾಗುತ್ತಿದ್ದವು. ಇಲ್ಲಿಯ ವರೆಗೆ ಯಾರೂ ಕೂಡಾ ನಿಮ್ಮ ರೀತಿಯ ಉಪದ್ವಾಪ್ಯತನದ ಪ್ರಶ್ನೆಗಳನ್ನು ಎತ್ತಿರಲಿಲ್ಲ.
ದೇವೇಗೌಡರೇ, ನೀವು ಹಿಂದಿನ ಪ್ರಧಾನಿಗಳನ್ನು ಯಾವ ಯಾವ ರೀತಿಯಲ್ಲಿ ಪ್ರಶ್ನಿಸಿದ್ದೀರಿ, ದೂರಿದ್ದೀರಿ, ಕೆಣಕಿದ್ದೀರಿ ಎನ್ನುವ ಪಟ್ಟಿಯನ್ನು ನಾನು ನಿಮಗೆ ಕೊಡಬಲ್ಲೆ. 2002ರ ಗುಜರಾತ್ ಗಲಭೆಯ ಬಗ್ಗೆ ಲೋಕಸಭೆಯಲ್ಲಿ ನಡುರಾತ್ರಿ ವರೆಗೆ ನಡೆದ ಚರ್ಚೆಯಲ್ಲಿ ನೀವು ಆಗಿನ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ವಿರುದ್ಧ ಪ್ರಯೋಗ ಮಾಡಿರುವ ಟೀಕಾಸ್ತ್ರಗಳು ಸದನದ ದಾಖಲೆಯಲ್ಲಿರಬಹುದು. ಇದನ್ನು ಈಗಲೂ ನಾನು ತಪ್ಪೆಂದು ಹೇಳುವುದಿಲ್ಲ. ಇವೆಲ್ಲವೂ ಸಂಸದೀಯ ಪ್ರಜಾಪ್ರಭುತ್ವದ ನಡವಳಿಕೆಗಳ ಭಾಗವಾಗಿರುತ್ತದೆ. ಆಗ ನೀವು ಮುಖ್ಯಮಂತ್ರಿಯೂ ಆಗಿರಲಿಲ್ಲ, ನೀವು ಕೇವಲ ಒಂದು ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿದ್ದವರು. ಆಗ ಈ ನೂರು ಕೋಟಿ, ಆರು ಕೋಟಿ ವ್ಯತ್ಯಾಸಗಳು ಬಾಧಿಸಿರಲಿಲ್ಲವೇ? ಎಂದು ಕೇಳಿದ್ದಾರೆ.
ಕೆಲವೇ ತಿಂಗಳುಗಳ ಹಿಂದೆ ಮೋದಿ ಅವರಿಗಿಂತ ಕನಿಷ್ಠ ಹತ್ತು ವರ್ಷ ಸಣ್ಣವರಾಗಿರುವ ಮತ್ತು ಕೇವಲ ಒಬ್ಬ ಶಾಸಕರಾಗಿರುವ ನಿಮ್ಮ ಮಗ ಹೆಚ್.ಡಿ.ಕುಮಾರಸ್ವಾಮಿಯವರು ಪ್ರಧಾನಿ ಮೋದಿಯವರ ವಿರುದ್ಧ ಯಾವ ಭಾಷೆ ಬಳಸಿ ತರಾಟೆಗೆ ತೆಗೆದುಕೊಂಡಿದ್ದರೆನ್ನುವುದನ್ನು ನಾಡಿನ ಜನ ಇನ್ನೂ ಮರೆತಿಲ್ಲ, ನಿಮ್ಮ ನೆನಪಲ್ಲಿಯೂ ಇರಬಹುದು. ಆಗ ಯಾಕೆ ನೀವು ನೂರು ಕೋಟಿ ಜನರನ್ನು ಪ್ರತಿನಿಧಿಸುವ ಪ್ರಧಾನಮಂತ್ರಿಯವರನ್ನು ಟೀಕಿಸಬಾರದು ಎಂದು ಮಗನಿಗೆ ಕಿವಿ ಹಿಂಡಿ ಬುದ್ದಿ ಹೇಳಿರಲಿಲ್ಲ? ಇವೆಲ್ಲವೂ ಅನುಕೂಲಶಾಸ್ತ್ರ ಅಷ್ಟೆ ಎನ್ನುವುದು ರಾಜ್ಯದ ಜನರಿಗೆ ತಿಳಿದಿದೆ.
ರಾಜ್ಯ ಸರ್ಕಾರಕ್ಕೆ ಅನ್ಯಾಯವಾದಾಗ ಅದನ್ನು ವಿರೋಧಿಸಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿಯವರನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಇದೇ ಮೋದಿ ಅವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ದೇಶ ಕಂಡ ಅತ್ಯಂತ ಸಭ್ಯ ಮತ್ತು ಗೌರವಾರ್ಹ ರಾಜಕೀಯ ನಾಯಕರಾಗಿರುವ ಮನಮೋಹನ್ ಸಿಂಗ್ ವಿರುದ್ಧ ಯಾವ ಭಾಷೆ ಬಳಸಿದ್ದರೆನ್ನುವುದು ನಿಮಗೆ ನೆನಪಿರಬಹುದೆಂದು ಭಾವಿಸಿದ್ದೇನೆ.
ನೀವು ದೇಶದ ಪ್ರಧಾನಿಯಾಗಿದ್ದಾಗ ಕನ್ನಡಿಗರು ಎದೆಯುಬ್ಬಿಸಿ ಖುಷಿಪಟ್ಟರು. ನೀವು ರಾಜ್ಯದ ನೆಲ-ಜಲ-ಭಾಷೆಯ ರಕ್ಷಣೆಗಾಗಿ ಕೇಂದ್ರ ಸರ್ಕಾರದ ವಿರುದ್ಧ ಆಯಾ ಕಾಲಗಳ ಪ್ರಧಾನಿಗಳ ವಿರುದ್ಧ ಹೋರಾಟಕ್ಕಿಳಿದಾಗಲೂ ಕನ್ನಡಿಗರು ನಿಮ್ಮನ್ನು ತಲೆಮೇಲೆ ಕೂರಿಸಿ ಕೊಂಡಾಡಿದರು. ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳು ತಮ್ಮ ಪಕ್ಷವನ್ನು ಬೆಂಬಲಿಸುತ್ತಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಪ್ರಧಾನ ಮಂತ್ರಿಗಳು ಈ ರಾಜ್ಯಗಳ ವಿರುದ್ಧ ಸೇಡು ತೀರಿಸಿಕೊಳ್ಳುವವರಂತೆ ನಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ನೀವು ಕೇಂದ್ರದ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರಬೇಕಾಗಿತ್ತು. ದುರ್ದೈವದ ಸಂಗತಿ ಎಂದರೆ ಈಗ ನೀವು ಕೇವಲ ನಿಮ್ಮ ಪಕ್ಷ ಮತ್ತು ಕುಟುಂಬದ ರಾಜಕೀಯ ಉಳಿವಿಗಾಗಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಪ್ರಧಾನಮಂತ್ರಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಅವರ ಪರವಾಗಿ ನಮ್ಮ ವಿರುದ್ಧ ಕತ್ತಿ ಬೀಸುತ್ತಿದ್ದೀರಿ.
ಈಗಲೂ ಕಾಲ ಮಿಂಚಿಲ್ಲ, ನಿಮ್ಮ ತಪ್ಪನ್ನು ತಿದ್ದಿಕೊಂಡು ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಿ. ತೆರಿಗೆ ಹಂಚಿಕೆ, ಬರ ಪರಿಹಾರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಮೋದಿ ಸರ್ಕಾರ ಕನ್ನಡಿಗರ ಕತ್ತು ಕುಯ್ಯುತ್ತಿದೆ. ಇದರ ವಿರುದ್ಧ ನೀವು ದನಿ ಎತ್ತದೆ ಇರುವುದರಿಂದ ವರ್ತಮಾನದಲ್ಲಿ ನಿಮ್ಮ ಪಕ್ಷಕ್ಕೆ ಒಂದಷ್ಟು ಲಾಭವಾಗಲೂ ಬಹುದು. ಆದರೆ ಇತಿಹಾಸ ನಿಮ್ಮನ್ನು ಖಂಡಿತಾ ಕ್ಷಮಿಸುವುದಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




